ಕರ್ನಾಟಕದಲ್ಲಿದ್ದಾರೆ ಲಸಿಕೆ ಪಡೆಯದ ಲಕ್ಷಾಂತರ ಮಂದಿ: ಆರೋಗ್ಯ ಮಿಷನ್‌ನ ಅಂಕಿ ಅಂಶಗಳು ಇಲ್ಲಿವೆ
ಬೆಂಗಳೂರು, ಏಪ್ರಿಲ್ 16: ದೇಶಾದ್ಯಂತ ಕೊರೊನಾ ಏರಿಕೆ ಆಗುತ್ತಿರುವ ಮಧ್ಯೆ, ಕರ್ನಾಟಕ ರಾಜ್ಯದಲ್ಲಿ ಕೊರೊನಾ ಲಸಿಕೆ ಕುರಿತು ರಾಷ್ಟ್ರೀಯ ಆರೋಗ್ಯ ಮಿಷನ್ ಬಿಡುಗಡೆ ಮಾಡಿದ ವರದಿಯಲ್ಲಿನ ಆಘಾತಕಾರಿ ಅಂಶವನ್ನು ಬಹಿರಂಗ ಮಾಡಿದೆ.
ಹೌದು, ಸತತವಾಗಿ ಮೂರು ಕೋವಿಡ್ ಅಲೆಗಳನ್ನು ಎದುರಿಸುವ ಕರ್ನಾಟಕ ರಾಜ್ಯದಲ್ಲಿ ಲಕ್ಷಾಂತರ ಜನರು ಇನ್ನೂ ಕೋವಿಡ್ ಎರಡನೇ ಡೋಸ್ ಲಸಿಕೆಯನ್ನೇ ಪಡೆದಿಲ್ಲ ಎಂಬ ಮಾಹಿತಿಯನ್ನು ಕರ್ನಾಟಕ ಸರ್ಕಾರದ ರಾಷ್ಟ್ರೀಯ ಆರೋಗ್ಯ ಮಿಷನ್‌ನ ನಿರ್ದೇಶಕ ನವೀನ್ ಭಟ್ ತಿಳಿಸಿದ್ದಾರೆ.

ರಾಜ್ಯದ ಸುಮಾರು 14.3 ಲಕ್ಷ ಜನರು ಎರಡನೇ ಡೋಸ್ ಕೋವಿಡ್ ಲಸಿಕೆಯನ್ನು ತೆಗೆದುಕೊಳ್ಳುವಲ್ಲಿ ನಿರಾಸಕ್ತಿ ವಹಿಸಿದ್ದಾರೆ. ಇಂತಹ ಕಾರಣಗಳಿಂದಲೇ ಕೋವಿಡ್ ವೈರಸ್ ಭೀತಿ ಮತ್ತೆ ಹೆಚ್ಚಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ.
ಇನ್ನೂ ಕೊರೊನಾ ಹೆಚ್ಚಾಗದಂತೆ ತಡೆಯಲು ಈ ಹಿಂದೆ ಸರ್ಕಾರ ಕೊರೊನಾ ಮುನ್ನೆಚ್ಚರಿಕೆ (ಬೂಸ್ಟರ್ ಡೋಸ್-3ನೇ) ಡೋಸ್ ತೆಗೆದುಕೊಳ್ಳಲು ಸೂಚಿಸಿತ್ತು. ಆದರೆ ರಾಜ್ಯ ಒಟ್ಟು ಜನಸಂಖ್ಯೆ ಪೈಕಿ 3.96 ಕೋಟಿ ಜನರು ಮುನ್ನೆಚ್ಚರಿಕೆಯ ಡೋಸ್ ಪಡೆಯಲು ಮುಂದೆ ಬರದೆ ಬಾಕಿ ಉಳಿಸಿಕೊಂಡಿದ್ದಾರೆ.
ಪ್ರಸ್ತುತದಲ್ಲಿ ಕೇವಲ ಶೇಕಡಾ 23ರಷ್ಟು ಮಂದಿ ಮಾತ್ರ ಮುನ್ನೆಚ್ಚರಿಕೆ ಲಸಿಕೆ ಡೋಸ್ ಪಡೆದಿದ್ದಾರೆ. ಯಾರು ಮೂರನೇ ಡೋಸ್ ಪಡೆದಿಲ್ಲ ಅಂಥವರಿಗೆ ವೈರಸ್ ಬೇಗ ತಗುಲುವ ಸಾಧ್ಯತೆ ಹೆಚ್ಚಿರುತ್ತದೆ. ಸದ್ಯ ರಾಜ್ಯದಲ್ಲಿ ಲಸಿಕೆಗಳ ಕೊರತೆ ಸೃಷ್ಟಿಯಾಗಿದ್ದಕ್ಕೆ ಅವರು ಕಳವಳ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಶನಿವಾರ ಒಂದೇ ದಿನ 377 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಅದರಿಂದಾಗಿ ಸಕ್ರಿಯ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,950 ದಾಟಿದೆ. ಬೆಂಗಳೂರು ನಗರವೊಂದರಲ್ಲೇ 263 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ತಿಳಿಸಿದೆ.
ಕಳೆದ ಒಂದು ದಿನದಲ್ಲಿ ರಾಜ್ಯದ ಯಾವ ನಗರದಲ್ಲಿ ಅಧಿಕ ಕೊರೊನಾ ಪ್ರಕರಣ ಕಂಡು ಬಂದಿವೆ ಎಂದು ನೋಡುವುದಾದರೆ, ಶಿವಮೊಗ್ಗದಲ್ಲಿ ಅತ್ಯಧಿಕ 23 ಕೊರೊನಾ, ದಾವಣಗೆರೆ 12, ಕಲಬುರಗಿ 12 ಬಳ್ಳಾರಿ 9, ತುಮಕೂರು 9 ಹಾಗೂ ಚಿಕ್ಕಮಗಳೂರು 7 ಮಂದಿಗೆ ಸೋಂಕು ಪತ್ತೆ ಆಗಿದೆ.
ಲಸಿಕೆ ಬಿಡುಗಡೆಗೆ ಮನವಿ
ಕರ್ನಾಟಕ ಆರೋಗ್ಯ ಇಲಾಖೆಯು 2 ಲಕ್ಷ ಕಾರ್ಬೆವ್ಯಾಕ್ಸ್ ಡೋಸ್ ಅನ್ನು ಖರೀದಿಗೆ ಚಿಂತನೆ ನಡೆಸಿದೆ. ಆದರೆ ಮಾದರಿ ನೀತಿ ಸಂಹಿತೆಯಿಂದ ಲಸಿಕೆಗಳನ್ನು ಖರೀದಿ ಅಸಾಧ್ಯವಾಗುತ್ತಿದೆ. ಚುನಾವಣಾ ಸ್ಕ್ರೀನಿಂಗ್ ಸಮಿತಿಗೆ ಕಡತವನ್ನು ಕಳುಹಿಸಲಾಗಿದೆ. ಚುನಾವಣಾ ಆಯೋಗದಿಂದ ಒಪ್ಪಿಗೆ ಸಿಕ್ಕ ಬಳಿಕ ಲಸಿಕೆ ತಯಾರಕರ ಜೊತೆ ಮಾತನಾಡಿ ಸೂಕ್ತ ಆದೇಶ ಮಾಡಲಾಗುವುದು ಎಂದು ಅವರು ತಿಳಿಸಿದರು.
ಲಸಿಕೆ ಡೋಸ್‌ಗಳ ಲಭ್ಯತೆ ಹಾಗೂ ಫಲಾನುಭವಿಗಳ ಸಂಖ್ಯೆಯನ್ನು ಆಧರಿಸಿ ಮತ್ತೆ ಸಾಮೂಹಿಕ ಲಸಿಕಾಕರಣ ಅಭಿಯಾನ ಆರಂಭಿಸಲಾಗುವುದು ಎಂದರು.
ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್ ಅವರು, ಇತ್ತೀಚಿಗೆ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲೂ XBB (ಓಮಿಕ್ರಾನ್) ರೂಪಾಂತರಿ ತಳಿಯ ವೈರಸ್ ವ್ಯಾಪಿಸುತ್ತಿರುವುದು ವರದಿಯಾಗಿದೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಏರಿಕೆ ಆಗುತ್ತಿದ್ದು, ಸಾವಿನ ಪ್ರಮಾಣ ಕೊಂಚ ಹೆಚ್ಚಳವಾಗಿದೆ. ವೃದ್ಧರು ಮತ್ತು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಜೊತೆಗೆ 60 ವರ್ಷಕ್ಕಿಂತ ಮೇಲ್ಪಟ್ಟವರು ಮುನ್ನೆಚ್ಚರಿಕೆಯ (ಬೂಸ್ಟರ್) ಡೋಸ್ ಪಡೆಯಬೇಕು ಎಂದು ಅವರು ಸಲಹೆ ನೀಡಿದರು.
ಕರ್ನಾಟಕದ ಆಸ್ಪತ್ರೆಗಳು ಅಲರ್ಟ್
ಇತ್ತೀಚೆಗ ನಡೆದ ಮಾಕ್ ಡ್ರಿಲ್‌ಗಳಿಂದ ಕಲಿತ ಪಾಠಗಳ ಆಧಾರದ ಮೇಲೆ, ಕರ್ನಾಟಕದ ಆಸ್ಪತ್ರೆಗಳು ಕೋವಿಡ್ ಅಪಾಯ ಎದುರಿಸಲು ಸಜ್ಜಾಗುತ್ತಿವೆ. ಕೋವಿಡ್ ನಿರ್ವಹಣೆಗಾಗಿ ಕ್ರಮಗಳೆಲ್ಲವೂ ಜಾರಿಯಲ್ಲಿವೆ. ಆರೋಗ್ಯ ಆಯುಕ್ತರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದೇವೆ ಎಂದು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ಡೀನ್ ಡಾ ಮನೋಜ್ ಕುಮಾರ್ ಹೇಳಿದರು.
ಮುನ್ನೆಚ್ಚರಿಕೆ ದೃಷ್ಟಿಯಿಂದ ಕೋವಿಡ್ ರೋಗಿಗಳಿಗೆ ಸುಮಾರು 60 ಹಾಸಿಗೆಗಳನ್ನು ಮೀಸಲಿಟ್ಟಿದ್ದೇವೆ. ಮೂಲ ಸೌಕರ್ಯಕ್ಕೆ ಸಂಬಂಧಿಸಿದಂತೆ, ನಮ್ಮಲ್ಲಿ ಸಾಕಷ್ಟು ವೆಂಟಿಲೇಟರ್‌ಗಳು ಮತ್ತು ಮಾನಿಟರ್‌ಗಳಿವೆ. ನಮ್ಮಲ್ಲಿ 15,000 ಪಿಪಿಇ ಕಿಟ್‌ಗಳು ಮತ್ತು ಕೋವಿಡ್ ಔಷಧಿಗಳ ಸ್ಟಾಕ್ ಕೂಡ ಇದೆ ಎಂದು ಅವರು ತಿಳಿಸಿದರು.












Click it and Unblock the Notifications