ಕಡ್ಡಾಯ ಕನ್ನಡ ಫಲಕ; ಬಿಸಿ ಮುಟ್ಟಿಸಲು ರಸ್ತೆಗಿಳಿದ ಪಾಲಿಕೆ ಆಯುಕ್ತರು
ಬೆಳಗಾವಿ, ಫೆಬ್ರವರಿ 29; ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಬಳಸಬೇಕು ಎಂಬ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಉದ್ಯಮಿದಾರರಿಗೆ ಎಚ್ಚರಿಕೆಯನ್ನು ನೀಡುತ್ತಿದ್ದು, ಬೋರ್ಡ್ ತೆರವುಗೊಳಿಸುವ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ.
ಕನ್ನಡದ ವಿಚಾರಕ್ಕೆ ಸದಾ ಸುದ್ದಿಯಲ್ಲಿರುವ ಬೆಳಗಾವಿಯಲ್ಲಿ ಕನ್ನಡ ನಾಮ ಫಲಕ ಕಡ್ಡಾಯ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಬೆಳಗಾವಿ ಮಹಾನಗರ ಪಾಲಿಕೆ ಮುಂದಾಗಿದೆ. ಈಗಾಗಲೇ ನಿಯಮ ಪಾಲನೆ ಮಾಡದ ಅಂಗಡಿಗಳ ಬೋರ್ಡ್ ತೆರವು ಮಾಡಲಾಗುತ್ತಿದೆ.

ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಲೋಕೇಶ್ ಮಾತನಾಡಿ, "ಸರ್ಕಾರದ ಅಧಿಸೂಚನೆ ಹಾಗೂ ನಿಯಮಾವಳಿ ಪ್ರಕಾರ ವಾಣಿಜ್ಯ ಮಳಿಗೆಗಳು, ಅಂಗಡಿ-ಮುಂಗಟ್ಟುಗಳ ಫಲಕಗಳಲ್ಲಿ ಕನ್ನಡ ಬಳಕೆ ಮಾಡದೇ ಇರುವ ನಗರದ ಅಂಗಡಿಗಳ ಫಲಕಗಳ ತೆರವು ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ" ಎಂದು ಹೇಳಿದ್ದಾರೆ.
ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡಕ್ಕೆ ಅಗ್ರ ಸ್ಥಾನ ನೀಡುವಂತೆ ಹಾಗೂ ಸಂಪೂರ್ಣ ಅನ್ಯ ಭಾಷೆಯಲ್ಲಿರುವ ಫಲಕಗಳನ್ನು ತೆರವುಗೊಳಿಸುವಂತೆ ಈಗಾಗಲೇ ಅಂಗಡಿಗಳಿಗೆ ನೋಟಿಸ್ ನೀಡಲಾಗಿತ್ತು. ನೋಟಿಸ್‌ಗೆ ಸರಿಯಾಗಿ ಸ್ಪಂದಿಸದೇ ಇರುವ ಅಂಗಡಿಗಳ ಫಲಕಗಳನ್ನು ಬೆಳಗಾವಿ ಪಾಲಿಕೆಯ ಸಿಬ್ಬಂದಿ ತೆರವುಗೊಳಿಸಿದ್ದಾರೆ.
ಕೆಲವು ಅಂಗಡಿಗಳಿಗೆ ನೋಟಿಸ್ ನೀಡಲಾಗಿದ್ದು, ಅವರು ತಕ್ಷಣವೇ ಫಲಕಗಳನ್ನು ಬದಲಾಯಿಸದಿದ್ದರೆ ಪಾಲಿಕೆಯೇ ಅಧಿಕಾರಿಗಳೇ ಅಂತಹ ಫಲಕಗಳನ್ನು ತೆರವುಗೊಳಿಸಿ, ಅದಕ್ಕೆ ತಗಲುವ ವೆಚ್ಚವನ್ನು ಆಯಾ ಅಂಗಡಿ ಮಾಲೀಕರಿಂದಲೇ ವಸೂಲಿ ಮಾಡಲಾಗುತ್ತದೆ ಎಂದು ಪಾಲಿಕೆ ಎಚ್ಚರಿಕೆ ನೀಡಿದೆ.
ಸರ್ಕಾರದ ಅಧಿಸೂಚನೆ ಪ್ರಕಾರ ಫಲಕಗಳ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. ಈ ಕಾರ್ಯಾಚರಣೆ ಇದೇ ರೀತಿ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳು ಫಲಕ ಅಳವಡಿಕೆ ಮಾಡಲು ಮಾರ್ಚ್ 3ರ ಗಡುವು ನೀಡಿದ್ದಾರೆ.
ನಿಯಮ ಹೇಳುವುದೇನು?; ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ)ಅಧಿನಿಯಮ, 2024ಕ್ಕೆ ಫೆಬ್ರವರಿ 25ರಂದು ರಾಜ್ಯಪಾಲರ ಅನುಮೋದನೆ ದೊರೆತಿದೆ. ಇದನ್ನು ವಿಶೇಷ ರಾಜ್ಯಪತ್ರದ ಮೂಲಕ ಈಗಾಗಲೇ ಕರ್ನಾಟಕ ಸರ್ಕಾರ ಪ್ರಕಟಿಸಿದೆ.
ನಿಯಮಗಳ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಕನ್ನಡವು ಆಡಳಿತ ಭಾಷೆಯಾಗಿದ್ದು, ಎಲ್ಲಾ ಉದ್ದಿಮೆಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕು. ಸರ್ಕಾರದ ಆದೇಶದನ್ವಯ ಯಾವುದೇ ಉದ್ದಿಮೆಯ ನಾಮಫಲಕವು ಪ್ರಧಾನವಾಗಿ ಶೇ.60 ರಷ್ಟು ಸ್ಥಳ ಮೀಸಲಿರಿಸಿ ಕನ್ನಡದಲ್ಲಿರಬೇಕು. ನಾಮಫಲಕದಲ್ಲಿ ಕನ್ನಡ ಭಾಷೆ ಮೇಲ್ಭಾಗದಲ್ಲಿ ಪ್ರದರ್ಶಿತವಾಗುವಂತೆ ಹಾಗೂ ಅನ್ಯಭಾಷೆಯ ನಾಮಫಲಕಕ್ಕಿಂತ ಕನ್ನಡ ನಾಮಫಲಕ ಮೇಲ್ಭಾಗದಲ್ಲಿರುವಂತೆ ಮತ್ತು ದೊಡ್ಡದಾಗಿರುವಂತೆ ಅಳವಡಿಸಬೇಕು.
ಬಿಬಿಎಂಪಿ ಸೇರಿದಂತೆ ರಾಜ್ಯದ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಉದ್ದಿಮೆ, ಅಂಗಡಿಗಳ ನಾಮಫಲಕಗಳು ಪ್ರಧಾನವಾಗಿ ಕನ್ನಡದಲ್ಲಿರಬೇಕು. ತಪ್ಪಿದಲ್ಲಿ ಅಂತಹ ಯಾವುದೇ ನಾಮಫಲಕಗಳು ಕಂಡುಬಂದಲ್ಲಿ ನಿಯಮಾನುಸಾರ ದಂಡವಿಧಿಸಿ ತೆರವುಗೊಳಿಸಿ, ಉದ್ದಿಮೆಗಳ ಉದ್ದಿಮೆ ಪರವಾನಿಗೆಗಳನ್ನು ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ತಿದ್ದುಪಡಿ ನಿಯಮಗಳ ಪ್ರಕಾರ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಮತ್ತು ಮಂಜೂರಾತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ, ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್‌ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್‌ಗಳು ಮುಂತಾದವುಗಳು ತಮ್ಮ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು 60% ರಷ್ಟು ಪ್ರದರ್ಶಿಸಲಾಗಿದೆ ಮತ್ತು ಕನ್ನಡ ಭಾಷೆಯು ನಾಮಫಲಕದ ಮೇಲ್ಭಾಗದಲ್ಲಿ ಪ್ರದರ್ಶಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ನೇತೃತ್ವದಲ್ಲಿ ಬೆಂಗಳೂರು ನಗರದಲ್ಲಿ ವಾಣಿಜ್ಯ ಮಳಿಗೆಗಳಲ್ಲಿ ಶೇ.60 ರಷ್ಟು ಸ್ಥಳ ಮೀಸಲಿರಿಸಿ ನಾಮಫಲಕ ಕನ್ನಡದಲ್ಲಿರಬೇಕು. ನಾಮಫಲಕದಲ್ಲಿ ಕನ್ನಡ ಭಾಷೆ ಮೇಲ್ಭಾಗದಲ್ಲಿ ಪ್ರದರ್ಶಿತವಾಗಬೇಕು ಎಂದು ಬೇಡಿಕೆ ಇಟ್ಟು ಹೋರಾಟವನ್ನು ಆರಂಭಿಸಿತ್ತು. ಬಳಿಕ ಕರ್ನಾಟಕ ಸರ್ಕಾರ ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ನಿಯಮಗಳನ್ನು ತಿದ್ದುಪಡಿ ಮಾಡಿತ್ತು. ವಿಧಾನಸಭೆ ಅಧಿವೇಶನದಲ್ಲಿಯೂ ಮಸೂದೆಗೆ ಒಪ್ಪಿಗೆ ಸಿಕ್ಕಿದ್ದು, ರಾಜ್ಯಪಾಲರು ಸಹ ಅಂಕಿತ ಹಾಕಿದ್ದಾರೆ.












Click it and Unblock the Notifications