" ಊಟ ಹೊಟ್ಟೆ ತುಂಬಿಸಬೇಕು, ಜೇಬನ್ನಲ್ಲ": 56 ವರ್ಷಗಳಿಂದ ಕೇವಲ 5 ರೂಪಾಯಿಗೆ ಬಿಸಿ ಬಿಸಿ ಇಡ್ಲಿ ನೀಡುತ್ತಿರುವ ಕನಕಪುರದ ರಾಮಚಂದ್ರ

"ಊಟ ಅಥವಾ ತಿಂಡಿ ಜನರ ಹೊಟ್ಟೆಯನ್ನು ತುಂಬಿಸಬೇಕೇ ಹೊರತು, ಅವರ ಜೇಬನ್ನು ಖಾಲಿ ಮಾಡಬಾರದು" ಎಂಬುದು ಕೇವಲ ಮಾತಲ್ಲ, ಇದು ಕನಕಪುರದ 70 ವರ್ಷದ ವೃದ್ಧ ರಾಮಚಂದ್ರ ಅವರ ಜೀವನದ ಮಂತ್ರ. ಹಣದ ಹಿಂದೆ ಓಡುತ್ತಿರುವ ಹಲವರ ನಡುವೆ ಇವರದೊಂದು ಬೇರೆಯದ್ದೇ ಸಿದ್ಧಾಂತ.

ಹೌದು, ಕೇವಲ 5 ರೂಪಾಯಿಗೆ ಮೃದುವಾದ, ಬಿಸಿ ಬಿಸಿ ಇಡ್ಲಿಯನ್ನು ಬಡಿಸುತ್ತಿರುವ ಇವರ ಕಾರ್ಯ ನಿಜಕ್ಕೂ ಅದ್ಭುತ. ಕಳೆದ 56 ವರ್ಷಗಳಿಂದ ಈ ಪುಟ್ಟ ಅಂಗಡಿಯಲ್ಲಿ ದೊರೆಯುವ ಉಪಾಹಾರ ಅದೆಷ್ಟೋ ಜನರ ಹಸಿವು ನೀಗಿಸಿದೆ.

5 Rupee Idli

ತಂದೆಯ ಪರಂಪರೆ, ಮಗನ ಸೇವೆ

ಈ ಕನಕಪುರ 5 ರೂಪಾಯಿ ಇಡ್ಲಿ ಅಂಗಡಿಯ ಇತಿಹಾಸ ಶುರುವಾಗಿದ್ದು 1972ರಲ್ಲಿ. ರಾಮಚಂದ್ರ ಅವರ ತಂದೆ ಆರಂಭಿಸಿದ ಈ ಪುಟ್ಟ ಹೋಟೆಲ್, ಅದೇ ಸಾಂಪ್ರದಾಯಿಕ ರುಚಿಯನ್ನಾ ಇಂದಿಗೂ ಉಳಿಸಿಕೊಂಡು ಬಂದಿದೆ. ಅಂದು ಶುರುವಾದ ಆ ರುಚಿಯ ಪಯಣ ಇಂದಿಗೂ ನಿಂತಿಲ್ಲ. ತಂದೆಯವರ ಕಾಲದ ಅದೇ ಅಡುಗೆಯ ಸೂತ್ರ, ಅದೇ ಪ್ರೀತಿ ಹಾಗೂ ಅದೇ ಹಳೆಯ ರುಚಿಯನ್ನು ರಾಮಚಂದ್ರ ಅವರು ಕಳೆದ 56 ವರ್ಷಗಳಿಂದ ಅತ್ಯಂತ ಎಚ್ಚರಿಕೆಯಿಂದ ಕಾಪಾಡಿಕೊಂಡು ಬಂದಿದ್ದಾರೆ.

ಈಗ ಅವರಿಗೆ 70 ವರ್ಷ ವಯಸ್ಸು. ಆದರೂ ಅವರ ಉತ್ಸಾಹ, ಸೇವಾ ಮನೋಭಾವ ಕಿಂಚಿತ್ತೂ ಕಡಿಮೆಯಾಗಿಲ್ಲ. ಬೆಲೆ ಏರಿಕೆಯ ಬಿಸಿ ಇವರಿಗೂ ತಟ್ಟಿದೆ, ಆದರೂ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗದೆ, ಅತ್ಯಂತ ಮೃದುವಾದ ಹತ್ತಿಯಂತಹ ಬಿಸಿಬಿಸಿ ಇಡ್ಲಿಯನ್ನು ಗ್ರಾಹಕರಿಗೆ ಬಡಿಸುವುದು ಅವರ ದಿನನಿತ್ಯದ ಕಾಯಕವಾಗಿದೆ.

ಅವರ ಈ ಯಶಸ್ಸಿನ ಹಿಂದಿರುವ ಬಹುದೊಡ್ಡ ಶಕ್ತಿ ಎಂದರೆ ಅವರ ಶಿಸ್ತು ಮತ್ತು ಕಠಿಣ ಪರಿಶ್ರಮ. ರಾಮಚಂದ್ರ ಅವರ ದಿನಚರಿ ಪ್ರತಿದಿನ ಬೆಳಗಿನ ಜಾವ 4 ಗಂಟೆಗೆ ಶುರುವಾಗುತ್ತದೆ. ಇಳಿ ವಯಸ್ಸಿನಲ್ಲೂ ನಸುಕಿನಲ್ಲಿ ಎದ್ದು ತಾವೇ ಖುದ್ದಾಗಿ ಇಡ್ಲಿ ಹಿಟ್ಟು ತಯಾರಿಸುತ್ತಾರೆ, ರುಚಿಯಾದ ಚಟ್ನಿ ರುಬ್ಬುತ್ತಾರೆ. ಬೆಳಗಾಗುತ್ತಿದ್ದಂತೆ ಬಿಸಿಬಿಸಿ ಇಡ್ಲಿಗಳು ತಯಾರಾಗುತ್ತವೆ.

ಅವರ ಅಂಗಡಿಯು ಅತ್ಯಂತ ಸರಳವಾಗಿದ್ದರೂ, ಅಲ್ಲಿ ಸಿಗುವ ಶುಚಿತ್ವ ಮತ್ತು ಅವರು ತೋರುವ ಪ್ರೀತಿ ಎಂಥವರನ್ನೂ ಮರಳಿ ಬರುವಂತೆ ಮಾಡುತ್ತದೆ. "ಹಣಕ್ಕಿಂತ ಹೆಚ್ಚಾಗಿ ಜನರ ಹೊಟ್ಟೆ ತುಂಬಿದಾಗ ಅವರ ಮುಖದಲ್ಲಿ ಕಾಣುವ ತೃಪ್ತಿಯೇ ನನಗೆ ದೊಡ್ಡ ಸಂಪತ್ತು" ಎಂದು ನಂಬಿರುವ ಅವರು, ಪ್ರತಿದಿನ ನೂರಾರು ಶ್ರಮಿಕರಿಗೆ, ಆಟೋ ಚಾಲಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೊಟ್ಟೆತುಂಬಾ ಊಟ ನೀಡುತ್ತಿದ್ದಾರೆ.

ಬೆಂಗಳೂರಿನಿಂದಲೂ ಇಡ್ಲಿ ತಿನ್ನಲೂ ಬರುವ ಗ್ರಾಹಕರು

ಕನಕಪುರದ ಕೋಟೆ ಮನೆ ಬಳಿ ಇರುವ ಈ ಇಡ್ಲಿ ಅಂಗಡಿ ಈಗ ಕೇವಲ ಸ್ಥಳೀಯರಿಗೆ ಮಾತ್ರವಲ್ಲ, ಬೆಂಗಳೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಬರುವ ಆಹಾರ ಪ್ರಿಯರ ಅಚ್ಚುಮೆಚ್ಚಿನ ತಾಣವಾಗಿದೆ. ವಾರಾಂತ್ಯದಲ್ಲಿ ಬೆಂಗಳೂರಿನಿಂದ ಬೈಕ್ ರೈಡ್, ಲಾಂಗ್ ಡ್ರೈವ್ ಬರುವ ಯುವಕರು ಇಲ್ಲಿನ ರುಚಿಕರವಾದ ಇಡ್ಲಿ ಸವಿಯದೆ ಮುಂದೆ ಹೋಗುವುದಿಲ್ಲ.

ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದರೂ, ರಾಮಚಂದ್ರ ಅವರು ಮಾತ್ರ ತಮ್ಮ ಇಡ್ಲಿಯ ಬೆಲೆಯನ್ನು ಹೆಚ್ಚಿಸಿಲ್ಲ. "ನನ್ನ ಅಂಗಡಿಗೆ ಬರುವ ಸಾಮಾನ್ಯ ಕೂಲಿ ಕಾರ್ಮಿಕನಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರೂ ತೃಪ್ತಿಯಿಂದ ಊಟ ಮಾಡಬೇಕು. ಹಣಕ್ಕಿಂತ ಇಲ್ಲಿ ತಿಂಡಿ ತಿಂದು ಅವರ ಮುಖದಲ್ಲಿ ಮೂಡುವ ನಗುವೇ ನನಗೆ ದೊಡ್ಡ ಆಸ್ತಿ" ಎನ್ನುವ ರಾಮಚಂದ್ರ ಅವರ ಮಾತುಗಳು ಇಂದಿನ ಸಮಾಜಕ್ಕೆ ದೊಡ್ಡ ಪಾಠ.

ಹೊಟ್ಟೆ ತುಂಬುವಷ್ಟು ಇಡ್ಲಿ ತಿಂದರೂ ಬಿಲ್ ಮಾತ್ರ ಜೇಬಿಗೆ ಹೊರೆಯಾಗುವುದಿಲ್ಲ. ಗುಣಮಟ್ಟ, ಶುಚಿತ್ವ ಹಾಗೂ ಪ್ರೀತಿಯಿಂದ ಬಡಿಸುವ ಈ 5 ರೂಪಾಯಿ ಇಡ್ಲಿ ಕೇವಲ ಉಪಾಹಾರವಲ್ಲ, ಮಾನವೀಯತೆಯ ಪ್ರತೀಕ.

ಹೊಸ ಹೊಸ ಫುಡ್ ಟ್ರೆಂಡ್‌ಗಳ ಹಿಂದೆ ಓಡುತ್ತಿರುವ ಆಧುನಿಕ ಕಾಲದಲ್ಲಿ, ಪ್ರಾಮಾಣಿಕತೆ, ನಿರಂತರತೆ ಮತ್ತು ಅದ್ಭುತ ರುಚಿ ಎಂದಿಗೂ ಹಳೆಯದಾಗುವುದಿಲ್ಲ ಎಂಬುದನ್ನು ರಾಮಚಂದ್ರ ಅವರು ಸಾಬೀತುಪಡಿಸಿದ್ದಾರೆ. ಐಷಾರಾಮಿ ಕೆಫೆಗಳಲ್ಲಿ ಸಿಗದ ನೆಮ್ಮದಿ ಮತ್ತು ತೃಪ್ತಿ, ಇವರ ಅಂಗಡಿಯ ಈ ಇಡ್ಲಿಯಲ್ಲಿ ಸಿಗುತ್ತದೆ. ಇವರ ಈ ನಿಸ್ವಾರ್ಥ ಸೇವೆ ಇಂದಿನ ಯುವ ಪೀಳಿಗೆಗೆ ಮತ್ತು ಆಹಾರೋದ್ಯಮದಲ್ಲಿರುವ ಎಲ್ಲರಿಗೂ ಒಂದು ಸ್ಪೂರ್ತಿದಾಯಕ ಕಥೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+