Bengaluru Airport: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ "ಕಲಾಲೋಕ ಮಳಿಗೆ" ಆರಂಭ, ಏನಿದರ ವಿಶೇಷತೆ?
ಭಾರತದ ಅತ್ಯುತ್ತಮ ವಿಮಾನ ನಿಲ್ದಾಣಗಳಲ್ಲಿ ನಮ್ಮ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಒಂದು. ಇಲ್ಲಿನ ವಿನ್ಯಾಸ, ಸ್ವಚ್ಛತೆಗೆ ದೇಶ ವಿದೇಶದ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ "ಕಲಾಲೋಕ ಮಳಿಗೆ"ಯನ್ನು ತೆರೆದಿದೆ. ಇಂದು ಸಿಎಂ ಸಿದ್ದರಾಮಯ್ಯ ಅವರು ಈ ಮಳಿಗೆಯನು ಘಂಟಾನಾದದ ಮೂಲಕ ಉದ್ಘಾಟಿಸಿದ್ದಾರೆ. ಈ ಮಳಿಗೆಯಲ್ಲಿ ಏನೆಲ್ಲ ಸಿಗಲಿದೆ? ಏನಿದರ ವಿಶೇಷತೆ ಎನ್ನುವ ವಿವರ ಇಲ್ಲಿ ತಿಳಿಯಿರಿ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೆರೆಯಲಾಗಿರುವ ಈ ಕಲಾಲೋಕ ಮಳಿಗೆಯು ಕರ್ನಾಟಕದ ಸಾಂಪ್ರದಾಯಿಕ ಉತ್ಪನ್ನಗಳ ಮಾರಾಟ ಕೇಂದ್ರವಾಗಿದೆ. ದೇಶ-ವಿದೇಶಗಳ ಗ್ರಾಹಕರಿಗೆ ಕರ್ನಾಟಕದ ಹೆಮ್ಮೆಯ ಪಾರಂಪರಿಕ ಮತ್ತು ಜಿಐ ಮಾನ್ಯತೆ ಹೊಂದಿರುವ ವಿಶಿಷ್ಟ ಉತ್ಪನ್ನಗಳನ್ನು ತಲುಪಿಸುವ ಉದ್ದೇಶದಿಂದ ಮಳಿಗೆ ಸ್ಥಾಪನೆ ಮಾಡಲಾಗಿದೆ. ಕರ್ನಾಟಕದ ಕೈಗಾರಿಕಾ ಭೂಪಟದಲ್ಲಿ ಇದೊಂದು ಸಂತಸದ ಕ್ಷಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಜನನಿಬಿಡತೆಯಲ್ಲಿ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಪ್ರತಿದಿನವೂ ಇಲ್ಲಿ ಹತ್ತಾರು ಸಾವಿರ ಪ್ರಯಾಣಿಕರು ಬರುತ್ತಿರುತ್ತಾರೆ. ಇಂಥವರಿಗೆ ಇಲ್ಲಿಗೆ ಬಂದ ತಕ್ಷಣವೇ ಕರ್ನಾಟಕದ ಅಭಿಮಾನದ ಪಯಣ ಅರ್ಥವಾಗಬೇಕು ಎನ್ನುವ ಉದ್ದೇಶದಿಂದ ಈ ಕಲಾಲೋಕ ಮಳಿಗೆ ನಿರ್ಮಿಸಲಾಗಿದೆ. ಇದರ ಮೂಲಕ ಕರ್ನಾಟಕದ ಹೆಮ್ಮಯ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಪ್ರಚಾರ, ಬ್ರ್ಯಾಂಡಿಂಗ್ ಮತ್ತು ಮಾರಾಟದ ಗುರಿಯನ್ನು ಹೊಂದಲಾಗಿದೆ ಎಂದಿದ್ದಾರೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಿರುವ "ಕಲಾಲೋಕ ಮಳಿಗೆ"ಯನ್ನು ಘಂಟಾನಾದದ ಮೂಲಕ ಉದ್ಘಾಟಿಸಿ ಶುಭ ಕೋರಿದ್ದೇನೆ. ಕನ್ನಡ ನಾಡಿನ ಶ್ರೀಮಂತ ಸಂಸ್ಕೃತಿ ಹಾಗೂ ಕರಕುಶಲ ವಸ್ತುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಲು ಈ ಮಳಿಗೆ ವೇದಿಕೆಯಾಗಲಿದೆ ಎಂದು ಭಾವಿಸಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಏನೆಲ್ಲ ಸಿಗಲಿದೆ?
ವಿಮಾನ ನಿಲ್ದಾಣದ ಟರ್ಮಿನಲ್-2ರ ಡೊಮೆಸ್ಟಿಕ್ ಬೇನಲ್ಲಿನ ಸ್ಥಾಪಿಸಲಾಗಿರುವ 'ಕಲಾಲೋಕ' ಮಳಿಗೆಯಲ್ಲಿ ಚನ್ನಪಟ್ಟಣದ ಆಟಿಕೆ ಮತ್ತು ಬೊಂಬೆಗಳು, ಮೈಸೂರು ಸಿಲ್ಕ್ ಸೀರೆ, ಇಳಕಲ್ ಸೀರೆ, ಲಂಬಾಣಿ ಕಸೂತಿ ಸೇರಿದಂತೆ ನಾಡಿನ ಅಸ್ಮಿತೆಯನ್ನು ಬಿಂಬಿಸುವ ಉತ್ಪನ್ನಗಳು ಲಭ್ಯ. ಅಲ್ಲದೆ, ಜಿಐ ಟ್ಯಾಗ್ ಪಡೆದ ಕರ್ನಾಟಕದ ಆಯ್ದ ಉತ್ಪನ್ನಗಳೂ ಈ ಮಳಿಗೆಯಲ್ಲಿ ದೊರೆಯಲಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ವಿಶಿಷ್ಟ ಮಳಿಗೆಯು ನಮ್ಮ ರಾಜ್ಯದ ಜಿಐ ಟ್ಯಾಗ್ ಪಡೆದ ವೈಶಿಷ್ಟ್ಯಮಯ ಉತ್ಪನ್ನಗಳು ಹಾಗೂ ಕಾಲಾತೀತ ಕರಕುಶಲತೆಯನ್ನು ಸುಂದರವಾಗಿ ಪ್ರದರ್ಶಿಸಲಿದೆ. ಮೈಸೂರ್ ಸ್ಯಾಂಡಲ್ ಸೋಪ್, ಮೈಸೂರು ರೇಷ್ಮೆ, ಶ್ರೀಗಂಧದ ಶಿಲ್ಪಗಳು, ರೋಸ್‌ವುಡ್ ಕೆತ್ತನೆಗಳು, ಚರ್ಮದ ಕರಕುಶಲ ವಸ್ತುಗಳು, ಕೈಮಗ್ಗ ಸೀರೆಗಳು, ಕಾಫಿ ಮತ್ತು ಚನ್ನಪಟ್ಟಣದ ಆಟಿಕೆಗಳು ಸೇರಿದಂತೆ ಕರ್ನಾಟಕದ ಅನನ್ಯ ಸೊಬಗನ್ನು ಒಂದೇ ಮಳಿಗೆಯಲ್ಲಿ ವೀಕ್ಷಿಸುವ ಜೊತೆಗೆ ಖರೀದಿ ಮಾಡಲು ಅವಕಾಶವೂ ಇದೆ.












Click it and Unblock the Notifications