Bengaluru Suburban Rail: ಸಬ್ ಅರ್ಬನ್ ರೈಲು, ಕೇಂದ್ರ ಸರ್ಕಾರದ ಮಹತ್ವದ ಹೆಜ್ಜೆ
ಬೆಂಗಳೂರು, ಮಾರ್ಚ್ 20: ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಘೋಷಣೆ ಮಾಡಲಾಗಿದೆ. 2026ರಲ್ಲಿ ರೈಲು ಸಂಚಾರ ಆರಂಭವಾಗಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದೆ. ಆದರೆ ಯೋಜನೆ ಅಂದುಕೊಂಡಷ್ಟು ವೇಗವಾಗಿ ಸಾಗುತ್ತಿಲ್ಲ. 4 ಕಾರಿಡಾರ್‌ಗಳ ಪೈಕಿ ಮೂರು ಕಾರಿಡಾರ್ ಮೂಲ ಸೌಕರ್ಯ ಕಾಮಗಾರಿ ಈಗ ಆರಂಭವಾಗಿದೆ. ಈಗ ಯೋಜನೆಗೆ ವೇಗ ನೀಡಲು ಕೇಂದ್ರ ಸರ್ಕಾರ ತಯಾರಿ ನಡೆಸಿದೆ.
ಸಬ್ ಅರ್ಬನ್ ರೈಲು ಯೋಜನೆ ಕುರಿತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜ್ವಸಿ ಸೂರ್ಯ ಲೋಕಸಭೆಯಲ್ಲಿ ಪ್ರಶ್ನೆ ಮಾಡಿದ್ದರು. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಕುರಿತು ಉತ್ತರವನ್ನು ನೀಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯನ್ನು ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಮೂಲಕ ಅನುಷ್ಠಾನ ಮಾಡುತ್ತಿವೆ.

ಪೂರ್ಣ ಪ್ರಮಾಣದ ಎಂಡಿ ಬೇಕು: ಸಚಿವ ಅಶ್ವಿನಿ ವೈಷ್ಣವ್ ಸಬ್ ಅರ್ಬನ್ ರೈಲು ಯೋಜನೆಗೆ ಬೇಕಾದ ರೈಲ್ವೆ ಇಲಾಖೆ ಜಾಗವನ್ನು ಕೆ-ರೈಡ್‌ಗೆ ಇಲಾಖೆ ಹಸ್ತಾಂತರ ಮಾಡಿದೆ. ಆದರೆ, ಕರ್ನಾಟಕ ಸರ್ಕಾರದ ಭೂಮಿ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಹೇಳಿದ್ದಾರೆ.
ರೈಲ್ವೆ ತಂತ್ರಜ್ಞಾನದ ಕುರಿತು ಅರಿವು ಹೊಂದಿರುವ ಪೂರ್ಣ ಪ್ರಮಾಣದ ವ್ಯವಸ್ಥಾಪಕ ನಿರ್ದೇಶಕರನ್ನು ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್)ಗೆ ಅಗತ್ಯವಿದೆ. ಹಾಲಿ ಕರ್ನಾಟಕ ಸರ್ಕಾರ ನೇಮಕ ಮಾಡಿರುವ ಹಂಗಾಮಿ ಎಂಡಿ ಯೋಜನೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಸಚಿವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
2022, ಜುಲೈ 25ರ ಬಳಿಕ ಕೆ-ರೈಡ್‌ಗೆ ಪೂರ್ಣ ಪ್ರಮಾಣದ ವ್ಯವಸ್ಥಾಪಕ ನಿರ್ದೇಶಕರ ನೇಮಕವಾಗಿಲ್ಲ. ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ, ಬಂದರುಗಳು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎನ್. ಮಂಜುಳಾ ಅವರಿಗೆ ಕೆ-ರೈಡ್ ಎಂಡಿ ಹೆಚ್ಚುವರಿ ಹುದ್ದೆ ನೀಡಲಾಗಿದೆ. ಇದರ ಜೊತೆಗೆ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಚ್ಚುವರಿ ಹೊಣೆಯನ್ನು ಹೊಂದಿದ್ದಾರೆ.
ಕೆ-ರೈಡ್ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ನಿಗಮವಾಗಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾಲು ಶೇ 51ರಷ್ಟು. 15,767 ಕೋಟಿ ರೂ. ಮೊತ್ತದ ಬೃಹತ್ ಯೋಜನೆಯನ್ನು ಇದು ನಿರ್ವಹಣೆ ಮಾಡುತ್ತಿದೆ. ಆದರೆ ಪೂರ್ಣ ಪ್ರಮಾಣದ ವ್ಯವಸ್ಥಾಪಕ ನಿರ್ದೇಶಕರು ಇಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ.
ಸುಮಾರು 148 ಕಿ. ಮೀ. ಉದ್ದದ ಸರ್ಬ ಅರ್ಬನ್ ರೈಲು ಯೋಜನೆ 4 ಕಾರಿಡಾರ್ 64 ನಿಲ್ದಾಣಗಳನ್ನು ಒಳಗೊಂಡಿದೆ. ಯೋಜನೆಗೆ ತಲಾ ಶೇ 20ರಷ್ಟು ಅನುದಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತಿವೆ. ಯೋಜನೆಗೆ ಶೇ 60ರಷ್ಟು ಅನುದಾನವನ್ನು ಸಾಲದ ರೂಪದಲ್ಲಿ ಪಡೆಯಲಾಗಿದೆ.
ಸಬ್ ಅರ್ಬನ್ ರೈಲು ಯೋಜನೆ ವೇಗವಾಗಿ ಸಾಗುತ್ತಿಲ್ಲ ಎಂಬುದಕ್ಕೆ ಸಚಿವ ಅಶ್ವಿನಿ ವೈಷ್ಣವ್ ರಾಜ್ಯ ಸರ್ಕಾರವನ್ನು ದೂರಿದ್ದಾರೆ. ಕಾರಿಡಾರ್ 4, 2 ಕಾಮಗಾರಿ ವೇಗವಾಗಿ ಸಾಗುತ್ತಿದೆ. 1 ಮತ್ತು 2ರ ಸಿವಿಲ್ ಕೆಲಸಗಳು ಮಾತ್ರ ನಡೆಯುತ್ತಿವೆ. ರೈಲ್ವೆ ತನ್ನ ಭೂಮಿಯನ್ನೆ ಕೆ-ರೈಡ್‌ಗೆ ಹಸ್ತಾಂತರ ಮಾಡಿದೆ. ಆದರೆ ರಾಜ್ಯ ಸರ್ಕಾರದ ಭೂಮಿ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗಿದೆ ಎಂದು ಸಚಿವರು ಹೇಳಿದ್ದಾರೆ.
ರೈಲ್ವೆ ಕಾಮಗಾರಿಗಳು ಅರಣ್ಯ ಇಲಾಖೆ ಅನುಮತಿ, ವಿದ್ಯುತ್ ಲೈನ್‌ಗಳ ಸ್ಥಳಾಂತರ, ಒಳಚರಂಡಿ ವ್ಯವಸ್ಥೆ ಬದಲು, ಭೂ ಸ್ವಾಧೀನ ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡಿರುತ್ತದೆ. ಆದ್ದರಿಂದ ನಿರೀಕ್ಷಿತ ಮಟ್ಟದಲ್ಲಿ ವೇಗವಾಗಿ ಸಾಗುವುದಿಲ್ಲ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.












Click it and Unblock the Notifications