ಮಾರಣಾಂತಿಕ ಹಲ್ಲೆಗೆ ಒಳಗಾದ ಮಹಿಳೆ ಚಿಕಿತ್ಸಾ ವೆಚ್ಚ ಭರಿಸಿದ ಪೊಲೀಸರು!
ಬೆಂಗಳೂರು, ಡಿಸೆಂಬರ್ 19: ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಬಡ ಮಹಿಳೆಗೆ ಜೀವ ಉಳಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ವೆಚ್ಚವನ್ನು ಪಾವತಿಸಿ ಜ್ಞಾನ ಭಾರತಿ ಠಾಣೆ ಪೊಲೀಸರುಮಾನವೀಯತೆ ಮೆರೆದಿದ್ದಾರೆ.
ಎರಡು ದಿನಗಳ ಹಿಂದೆ ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಜ್ಞಾನಗಂಗಾ ನಗರದಲ್ಲಿ ಘೋರ ಅಪರಾಧ ವರದಿಯಾಗಿತ್ತು. ನಿರ್ಮಾಣ ಹಂತದ ಕಟ್ಟಡದಲ್ಲಿ ವಾಸವಿದ್ದ ಹನುಮಂತಮ್ಮ ಎಂಬ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಅಮ್ಮನ ಮೇಲೆ ಹಲ್ಲೆ ಮಾಡುವುದನ್ನು ತಡೆಯಲು ಹೋದ ಹನ್ನೆರಡು ವರ್ಷದ ಬಾಲಕನ ಮೇಲೆ ಕಿರಾತಕ ಹಲ್ಲೆ ಮಾಡಿದ್ದ. ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದ. ತಲೆಯ ಮೇಲೆ ಕಲ್ಲು ಎತ್ತಿಹಾಕಿದ್ದರಿಂದ ಹನುಮಂತಮ್ಮ ಕೂಡ ಗಂಭೀರವಾಗಿ ಗಾಯಗೊಂಡಿದ್ದರು. ಕೂಲಿ ಮಾಡುತ್ತಿದ್ದ ಆ ಮಹಿಳೆಗೆ ಚಿಕಿತ್ಸೆ ಪಡೆಯುವ ಶಕ್ತಿ ಇರಲಿಲ್ಲ.

ಹನ್ನೆರಡು ವರ್ಷದ ಮಗನನ್ನು ಕಳೆದಕೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಆ ಮಹಿಳೆಯನ್ನು ಪೊಲೀಸರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸ್ ಇನ್‌ಸ್ಪೆಕ್ಟರ್ ಲಕ್ಷ್ಮಣ ನಾಯಕ್ ಒಂದು ಲಕ್ಷ ರೂಪಾಯಿ ಚಿಕಿತ್ಸಾ ವೆಚ್ಚ ಪಾವತಿಸಿ ಮಾನವೀಯತೆ ಮೆರೆದಿದ್ದಾರೆ. ಸಂತ್ರಸ್ತ ಮಹಿಳೆ ಹನುಮಂತಮ್ಮ ಚೇತರಿಸಿಕೊಳ್ಳುತ್ತಿದ್ದಾರೆ.

Recommended Video
ಈ ಕೃತ್ಯ ಎಸಗಿರುವ ಆರೋಪಿ ಗಾದಿಲಿಂಗಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಚಿನ್ನ ಇರಬಹುದು ಎಂದು ಭಾವಿಸಿ ಹನುಮಂತಮ್ಮನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಾರಣಾಂತಿಕ ಹಲ್ಲೆ ಮಾಡಿದ್ದ. ಅಡ್ಡ ಬಂದ ಹನ್ನೆರಡು ವರ್ಷದ ಬಾಲಕನನ್ನು ಹತ್ಯೆ ಮಾಡಿದ್ದ. ಘಟನೆ ಸಂಬಂಧ ಸಿಸಿಟಿವಿ ದೃಶ್ಯ ಆಧರಿಸಿ ಗಾದಿಲಿಂಗಪ್ಪನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications