ಲೋಕಸಭಾ ಚುನಾವಣೆಯಲ್ಲಿ ಸ್ವಂತ ಬಲದಲ್ಲಿ ಹೋರಾಡುತ್ತೇವೆ: ಹೆಚ್‌ಡಿ ದೇವೇಗೌಡ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ವಂತ ಬಲದಲ್ಲಿ ಹೋರಾಟ ಮಾಡುತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಿಳಿಸಿದ್ದಾರೆ. ಬೆಂಗಳೂರಿ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂಬರುವ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಾಗಿ ತಯಾರಿ ಮಾಡಿಕೊಳ್ಳುತ್ತೇವೆ, ಪಕ್ಷ ಸಂಘಟನೆ ಕುರಿತು ಪಕ್ಷದ ಮುಖಂಡರ ಜೊತೆ ಚರ್ಚೆ ಮಾಡುವುದಾಗಿ ಹೇಳಿದರು.
ಈಗಾಗಲೇ ನಾವು ಎರಡು ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೊಟ್ಟಿದ್ದೇವೆ. ಮುಂದೆ ಪಕ್ಷದ ಅಭಿವೃದ್ಧಿ ಹೇಗೆ ಮಾಡಬೇಕು, ಪಕ್ಷ ಉಳಿಸಲು ಏನೆಲ್ಲಾ ತೀರ್ಮಾನ ಮಾಡಬೇಕು ಎನ್ನುವುದರ ಬಗ್ಗೆ ಎಲ್ಲಾ ಮುಖಂಡರು ಕೂತು ಚರ್ಚೆ ಮಾಡುತ್ತೇವೆ. ನಮ್ಮ ಕಾರ್ಯಕರ್ತರೇ ನಮ್ಮ ಶಕ್ತಿ, ಯುವಕರಿಗೆ ಹೆಚ್ಚಿನ ಜವಾಬ್ದಾರಿ ನೀಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಳ್ಳಲಿವೆ ಎನ್ನುವ ಮಾತು ಕೇಳಿಬಂದ ಹಿನ್ನೆಲೆಯಲ್ಲೇ ದೇವೇಗೌಡರ ಹೇಳಿಕೆ ಮಹತ್ವ ಪಡೆದುಕೊಂಡಿದೆ. ದೇವೇಗೌಡರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳದೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧಾರ ಮಾಡಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.
ಸಿದ್ದರಾಮಯ್ಯ ವಿರುದ್ಧ ಹೆಚ್‌ಡಿಕೆ ಕಿಡಿ
ನಂತರ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದರು. ಗ್ಯಾರಂಟಿ ಘೋಷಣೆ ಕುರಿತಂತೆ ನಿನ್ನೆ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯೊಂದನ್ನು ನೋಡಿದೆ, ವಿರೋಧ ಪಕ್ಷಗಳು ಜನರನ್ನುದಾರಿ ತಪ್ಪಿಸುತ್ತಿವೆ ಎಂದು ಹೇಳಿದ್ದಾರೆ. ನಾನು ಅವರಿಗೆ ಒಂದು ಮಾತು ಕೇಳಲು ಬಯಸುತ್ತೇನೆ, ದುರ್ಬಳಕೆ ಮಾಡಿಕೊಳ್ಳಲು ವೇದಿಕೆ ಸೃಷ್ಟಿ ಮಾಡಿದವರು ಅವರು, ಚುನಾವಣೆಗೆ ಮುನ್ನ 200 ಯುನಿಟ್ ವಿದ್ಯುತ್ ಉಚಿತ ಎಂದು ಹೇಳಿದ್ದೀರಿ, ಈಗ ಸಮಸ್ಯೆ ಗೊತ್ತಾಗುತ್ತಿದೆಯಾ? ಎಲ್ಲಾ ಉಚಿತ ಎಂದು ಹೇಳುವಾಗ ಪರಿಜ್ಞಾನ ಇರಲಿಲ್ಲವಾ? ಷರತ್ತು ಹಾಕ್ತೀವಿ ಎಂದು ಮೊದಲೇ ಹೇಳಬೇಕಿತ್ತು ಎಂದರು.
ಯುದ್ಧ ಮಾಡೋಕೆ ತಯಾರಿದ್ದೇವೆ
ಉಚಿತವಾಗಿ ಕೊಡ್ತೀವಿ ಎಂದು ಘೋಷಣೆ ಮಾಡಿದವರು ನೀವು, ಗ್ಯಾರಂಟಿ ಕಾರ್ಡ್ ಮೇಲೆ ಸಹಿ ಹಾಕಿ ಕೊಟ್ಟವರು ನೀವು. ಬಾಡಿಗೆ ಮನೆಯಲ್ಲಿ ಇರುವವರ ಪರಿಸ್ಥಿತಿ ಏನು? ಬೇರೆ ಮನೆಗೆ ಶಿಫ್ಟ್ ಆದವರು ಏನು ಮಾಡಬೇಕು, ಇದನ್ನೇ ನಾವು ಪ್ರಶ್ನೆ ಮಾಡ್ತಿರೋದು. ವಿರೋಧ ಪಕ್ಷವಾಗಿ ಯುದ್ಧ ಮಾಡೋಕೆ ಸಿದ್ದವಾಗಿದ್ದೇವೆ, ಸ್ನೇಹ ಮಾಡೋಕೆ ಅಲ್ಲ, ಅದಕ್ಕಾಗಿಯೇ ಜನ ನಮ್ಮನ್ನು ಇಲ್ಲಿ ಕೂರಿಸಿರುವುದು ಎಂದು ಅವರು ಹೇಳಿದರು.












Click it and Unblock the Notifications