ಎಣ್ಣೆ ಹಾಕಿ ನೈಟ್ ರೌಂಡ್ಸ್ ಹೊಡೆದಿದ್ದು ನೀವೇ ಅಲ್ಲವೇ? ಡಿಕೆಶಿಗೆ ಜೆಡಿಎಸ್ ಪ್ರಶ್ನೆ
ಇತ್ತೀಚೆಗೆ ಬೆಂಗಳೂರಿನಲ್ಲಿ ಮಳೆಯಿಂದ ನಡೆದ ಅವಾಂತರಗಳು ಹಾಗೂ ರಸ್ತೆ ಗುಂಡಿ ಸಮಸ್ಯೆ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಜೆಡಿಎಸ್ ಪಕ್ಷ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಎಣ್ಣೆ ಹಾಕಿ ನೈಟ್ ರೌಂಡ್ಸ್ ಹೊಡೆದು, ಇಂಜಿನಿಯರ್ ರೀತಿ ಹಾರೆ, ಗುದ್ದಲಿ ಹಿಡಿದು ಪರಿಶೀಲಿಸಿದವರು ನೀವೇ ಅಲ್ಲವೇ? ಎಂದು ಡಿ.ಕೆ.ಶಿವಕುಮಾರ್ ಅವರ ಬಗ್ಗೆ ವ್ಯಂಗ್ಯವಾಡಿದೆ. ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರೇ, ಕೇವಲ ಒಂದೇ ದಿನ ಸುರಿದ ಮಳೆಗೆ ಬ್ರ್ಯಾಂಡ್ ಬೆಂಗಳೂರಿನ ಗುಂಡಿ ಮುಚ್ಚುವ "ಪರ್ಸೆಂಟೇಜ್ ಕಾಮಗಾರಿ" ಬಯಲಾಗಿದೆ ಎಂದು ಟಾಂಗ್ ನೀಡಿದೆ.

ಅಮೆರಿಕಾದ ಪ್ರವಾಸದಲ್ಲಿದ್ದುಕೊಂಡು, ನನ್ನ ಆದೇಶದ ಮೇರೆಗೆ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ ಎಂದು ಬಿಲ್ಡಪ್ ತೆಗೆದುಕೊಳ್ಳುತ್ತಿದ್ದಿರಲ್ಲ? ನಿಮ್ಮ ಕಳಪೆ ಕಾಮಗಾರಿಯ ಅಸಲಿ ಬಂಡವಾಳ ಜಗಜ್ಜಾಹೀರಾಗಿದೆ ಎಂದು ಲೇವಡಿ ಮಾಡಿದೆ.
ರಾಜಧಾನಿಯ ರಸ್ತೆಗಳ ಯಮಗುಂಡಿಗಳಿಗೆ ತೇಪೆಹಾಕಿ, ಅದನ್ನೇ ಸಾಧನೆ ಎಂದು ಬಡಾಯಿ ಕೊಚ್ಚಿಕೊಂಡಿರಿ. ಬ್ರ್ಯಾಂಡ್ ಬೆಂಗಳೂರನ್ನು ಪರ್ಸೆಂಟೇಜ್ ಲೆಕ್ಕದಲ್ಲಿ ದೋಚುತ್ತಿರುವ ಡೂಪ್ಲಿಕೇಟ್ ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಕರ್ನಾಟಕ ಕೋಟಿ ಕೋಟಿ ಲೂಟಿ ಹೊಡೆದು ಖಜಾನೆ ತುಂಬಿಸಿಕೊಳ್ಳುತ್ತಿದೆ ಎನ್ನುವುದಕ್ಕೆ ಇದೇ ಪ್ರತ್ಯಕ್ಷ ಸಾಕ್ಷಿ ಎಂದು ಆರೋಪಿಸಿದೆ.

ರಾಜ್ಯದಲ್ಲಿ 44 ವರ್ಷಕ್ಕೂ ಹೆಚ್ಚು ಕಾಲ ಆಳ್ವಿಕೆ ನಡೆಸಿ ತಿಂದು ತೇಗಿರುವ ಕಾಂಗ್ರೆಸ್ ಪಕ್ಷವೇ ಬೆಂಗಳೂರಿನ ಮಳೆ ಅನಾಹುತ ಪರಿಸ್ಥಿತಿಗೆ ಮೂಲ ಕಾರಣ ಎಂದು ಜೆಡಿಎಸ್ ಆರೋಪಿಸಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷಕ್ಕೆ ವೈಜ್ಞಾನಿಕವಾಗಿ ಕಾಮಗಾರಿಗಳ ದೂರದೃಷ್ಟಿ, ಮುಂದಾಲೋಚನೆ ಇಲ್ಲದಿರುವುದು ಬೆಂಗಳೂರಿನ ಇಂದಿನ ಹದಗೆಟ್ಟ ಪರಿಸ್ಥಿತಿಗೆ ಕಾರಣೀಭೂತ ಎಂದು ಹೇಳಿದೆ.
ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಕೆರೆ ಕಟ್ಟೆಗಳನ್ನು ನುಂಗಿ ನೀರು ಕುಡಿದಿದ್ದೀರಿ. ಕಾಮಗಾರಿಗಳ ಹೆಸರಲ್ಲಿ ಪರ್ಸಂಟೇಜ್ ಲೆಕ್ಕದಲ್ಲಿ ತಿಂದು ತೇಗಿ ಬಲಿತಿರುವ, ಕಾಂಗ್ರೆಸ್ ನಾಯಕರು ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಾ ನಗರವನ್ನು ಹಾಳುಗೆಡವಿದ್ದೀರಿ. ಈಗ ನುಣಿಚಿಕೊಳ್ಳಲು ವಿರೋಧ ಪಕ್ಷಗಳತ್ತ ಬೊಟ್ಟು ಮಾಡುತ್ತಿರುವುದು, ಕೈಲಾಗದ ಕಾಂಗ್ರೆಸ್ ನಾಯಕರ ಹೊಣೆಗೇಡಿತನದ ಪರಮಾವಧಿಯಷ್ಟೇ ಎಂದು ತರಾಟೆಗೆ ತೆಗೆದುಕೊಂಡಿದೆ.
ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೂಡ ಇದೇ ವಿಚಾರವಾಗಿ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಬೆಂಗಳೂರಿನಲ್ಲಿ ಒಂದೇ ದಿನದ ವರುಣನ ಅಬ್ಬರಕ್ಕೆ ಭಾರತದ ಸಿಲಿಕಾನ್ ವ್ಯಾಲಿಯ ಮೂಲಸೌಕರ್ಯ ವ್ಯವಸ್ಥೆ ತತ್ತರಿಸಿ ಹೋಗಿದೆ. ರಾಜ್ಯ ಸರಕಾರದ ದುರಾಡಳಿತ ಮತ್ತು ಅಸಮರ್ಪಕ ನಿರ್ವಹಣೆಯಿಂದ ಭಾರತದ ಐಟಿ ಕಾರಿಡಾರ್‌ನಲ್ಲಿ ಪ್ರವಾಹಸದೃಶ ಪರಿಸ್ಥಿತಿ ತಲೆದೋರಿದೆ. ಒಳಚರಂಡಿ ವ್ಯವಸ್ಥೆ ಹದಗೆಟ್ಟು ರಸ್ತೆಗಳು ನದಿಗಳಾಗಿವೆ ಎಂದು ದೂರಿದ್ದರು.
ಸರ್ಕಾರದ ಘೋರ ವೈಫಲ್ಯದಿಂದ ಬೆಂಗಳೂರಿನ ಜನರು ಮಳೆಗೆ ಸಿಕ್ಕಿ ನರಕಯಾತನೆ ಅನುಭವಿಸುತ್ತಿದ್ದಾರೆ. ಆಡಳಿತ ವ್ಯವಸ್ಥೆಯ ಕೆಟ್ಟ ನೀತಿಗಳು ನಾಡಪ್ರಭು ಕೆಂಪೇಗೌಡರು ಕಟ್ಟಿದ ಹೆಮ್ಮೆಯ ಬೆಂಗಳೂರು ನಗರವನ್ನು ಹಾಳುಗೆಡವಿದೆ. ಹೂಡಿಕೆದಾರ ಸ್ವರ್ಗವಾಗಿದ್ದ ಬೆಂಗಳೂರು, ಜಾಗತಿಕಮಟ್ಟದ ತಂತ್ರಜ್ಞಾನದ ನೆಚ್ಚಿನ ನೆಲೆವೀಡಾಗಿದ್ದ ಬೆಂಗಳೂರು ಈಗ ಇನ್ನಿಲ್ಲದ ದುಸ್ಥಿತಿಗೆ ಸಿಲುಕಿ ಕಣ್ಣೀರು ಹಾಕುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.












Click it and Unblock the Notifications