ಬೆಂಗಳೂರು-ಮೈಸೂರು ಹೆದ್ದಾರಿಗೆ ಕೊಳ್ಳೆ ಹೊಡೆದ ಹಣದಲ್ಲಿ ಪ್ರತಾಪ್ ಸಿಂಹಗೂ ಪಾಲು: ಮಂಜುನಾಥ್ ಆರೋಪ
ಬೆಂಗಳೂರು, ಸೆಪ್ಟೆಂಬರ್ 3: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಕಾಮಗಾರಿಯಲ್ಲಿ ದೊಡ್ಡ ಹಗರಣ ನಡೆದಿದೆ ಎಂದು ಆರೋಪ ಮಾಡಿರುವ ಮಾಗಡಿ ಕ್ಷೇತ್ರದ ಜೆಡಿಎಸ್ ಶಾಸಕ ಎ.ಮಂಜುನಾಥ್, ಹಗರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಜೆಡಿಎಸ್ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಮಂಜುನಾಥ್, ಭೂ ಪರಿಹಾರ ಹಾಗೂ ಹೆದ್ದಾರಿ ಅವ್ಯವಹಾರದ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ಹಾಗೂ ಸಿಬಿಐ ತನಿಖೆಯಾಗಬೇಕು. ಈ ಸಂಬಂಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ನೇತೃತ್ವದಲ್ಲಿ ಶಾಸಕರ ನಿಯೋಗ ಸೆಪ್ಟೆಂಬರ್ 7 ರಂದು ದೆಹಲಿಗೆ ತೆರಳಿ ಕೇಂದ್ರದ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ದೂರು ನೀಡಲಾಗುವುದು. ಅದಕ್ಕಾಗಿ ನಿತಿನ್ ಗಡ್ಕರಿ ಭೇಟಿಗೆ ಸಮಯಾವಕಾಶ ಕೇಳಲಾಗಿದೆ ಎಂದು ಹೇಳಿದರು.
ಮಳೆಯಿಂದಾಗಿ ಹೆದ್ದಾರಿ ಹಾನಿಯಾಗಿದೆ. ಇಡೀ ರಸ್ತೆಯುದ್ಧಕ್ಕೂ ಮಳೆ ನೀರು ತುಂಬಿದೆ. ಆ ಭಾಗದ ರೈತರು, ಜನರಿಗೆ ತೊಂದರೆಯಾಗಿದೆ. ನಾನು ಆ ಭಾಗದ ಜನಪ್ರತಿನಿಧಿಯಾಗಿದ್ದೇನೆ. ನಾವು ಕಳೆದ ನಾಲ್ಕು ವರ್ಷಗಳ ಹಿಂದೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಎಚ್ಚರಿಸಿದ್ದೆವು. ಅವರ ದುರ್ನಡತೆಯಿಂದಾಗಿ ಈ ಸ್ಥಿತಿ ತಲುಪಿದೆ ಎಂದು ಹೆದ್ದಾರಿ ಕಾಮಗಾರಿ ಬಗ್ಗೆ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.

ಭೂ ಸ್ವಾಧೀನ ಪರಿಹಾರದಲ್ಲೂ ಅಕ್ರಮ ಆರೋಪ
ಭೂ ಸ್ವಾಧೀನ ವೇಳೆ ರೈತರ ಮನವೊಲಿಸಿದ್ದೆವು. ಭೂ ಪರಿಹಾರ ಕೊಡಿಸುತ್ತೇವೆಂದು ಮನವಿ ಮಾಡಿದ್ದೆವು. ಎಲ್ಲರ ಸಹಕಾರ ಪಡೆದಿದ್ದೆವು. ಭೂ ಸ್ವಾಧೀನ ಪರಿಹಾರದಲ್ಲೂ ಲೋಪವಾಗಿದೆ. ಹೆದ್ದಾರಿ ಪ್ರಾಧಿಕಾರಕ್ಕೆ ಗಮನಕ್ಕೆ ತಂದರೂ ಪರಿಹಾರ ಆಗಲಿಲ್ಲ. ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್ ಎಂಬ ವ್ಯಕ್ತಿಯಿಂದ ಹೀಗಾಗಿದೆ. ಆ ವ್ಯಕ್ತಿಯಿಂದ ಭೂಮಿ ಕಳೆದುಕೊಂಡ ರೈತರಿಗೆ ಭಾರಿ ಅನ್ಯಾಯ ಆಗಿದೆ ಎಂದು ಶಾಸಕ ಮಂಜುನಾಥ್ ಆರೋಪಿಸಿದರು.
ಉತ್ತಮ ರಸ್ತೆಯಾದರೆ ಒಳ್ಳೆಯದಾಗುತ್ತದೆ ಎನ್ನುವ ಕಾರಣಕ್ಕೆ ಸುಮ್ಮನಿದ್ದೆವು. ಸಂಸದ ಪ್ರತಾಪ್ ಸಿಂಹ ಬಂದು ಫೋಸ್ ಕೊಡ್ತಿದ್ರು. ರಸ್ತೆ ನಾವೇ ಮಾಡಿರೋದು ಅಂತ ತಮ್ಮನ್ನು ತಾವೇ ಹೊಗಳಿಕೊಂಡ್ರು. ನಾನು ಪ್ರತಾಪ್ ಸಿಂಹರನ್ನು ಕೇಳಲು ಬಯಸುತ್ತೇನೆ, ನೀವು ಯಾರಿಗೆ ಬ್ರಾಂಡ್ ಅಂಬಾಸಿಡರ್ ಹೇಳಿ, ಹೆದ್ದಾರಿ ಮಾಡುವ ಸಂಸ್ಥೆಯವರಿಗಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೆದ್ದಾರಿ ನಿರ್ಮಾಣವೇ ಅವೈಜ್ಞಾನಿಕ
ಬಿಡದಿಗೆ ರಸ್ತೆ ಓಪನ್ ಬಿಟ್ಟಿಲ್ಲ. 119 ಕಿಲೋ ಮೀಟರ್ ರಸ್ತೆಯಲ್ಲಿ ಇಂಟರ್ ಜಂಕ್ಷನ್ ಇಲ್ಲ. ಪ್ರಯಾಣಿಕರಿಗೆ ಟೀ ಕುಡಿಯಲು ವ್ಯವಸ್ಥೆ ಇಲ್ಲ. ಪೆಟ್ರೋಲ್ ಹಾಕಿಸಿಕೊಳ್ಳುವ ವ್ಯವಸ್ಥೆಯೂ ಇಲ್ಲ. ಬೇರೆ ಎಕ್ಸ್ ಪ್ರೆಸ್ ಹೈವೇಗಳನ್ನು ಇದೇ ರೀತಿ ಮಾಡಿದ್ದಾರಾ? ಅಪಘಾತವಾದರೆ ಟ್ರಾಮಾ ಸೆಂಟರ್ ಮಾಡಿಲ್ಲ. ಸಾರ್ವಜನಿಕರಿಗೆ ಇದರಿಂದ ಏನು ಲಾಭ? ನಾವೆಲ್ಲ ಶಾಸಕರು ಬರುತ್ತೇವೆ. ಬನ್ನಿ ರಸ್ತೆ ನೋಡಿ ಎಂದು ಸಂಸದ ಪ್ರತಾಪ್ ಸಿಂಹ ಅವರಿಗೆ ಆಹ್ವಾನ ನೀಡಿದರು.
ರಾಮದೇವರ ಬೆಟ್ಟದಿಂದ ನೀರು ಬಂದಿದೆ ಎಂದು ಪ್ರತಾಪ್ ಸಿಂಹ ಹೇಳುತ್ತಾರೆ, ರಾಮದೇವರ ಬೆಟ್ಟ ಇವತ್ತು ಆಗಿರೋದಾ? ಬೆಟ್ಟದಿಂದ ಎಷ್ಟು ಮೆಟ್ರಿಕ್ ಟನ್ ಕಲ್ಲು ಹೊಡೆದಿದ್ದೀರ. ನಿಮ್ಮ ಮನೆ ಹಣದಿಂದ ರಸ್ತೆ ನಿರ್ಮಾಣ ಮಾಡಿಲ್ಲ, ಇದು ಸಾರ್ವಜನಿಕರ ತೆರಿಗೆ ಹಣ ಅನ್ನೋದು ನೆನಪಿರಲಿ.
ಸಂಸದರಿಗೆ ಆಗಿರುವ ಲಾಭವೇನು?
1300 ಕೋಟಿ ರುಪಾಯಿ ತಂದಿದ್ದೇವೆ ಅಂತೀರಲ್ಲ, ಇದು ಆನ್ ಗೋಯಿಂಗ್ ಪ್ರಾಜೆಕ್ಟ್. ನೀವು ಹಣ ತಂದು ರಸ್ತೆ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದೀರಾ, ನಿಮಗೆ ನಾಚಿಕೆಯಾಗಲ್ವೇ?, ಹತ್ತು ತಿಂಗಳಲ್ಲಿ ರಸ್ತೆ ನಿರ್ಮಾಣ ಮುಗಿಯುತ್ತೆ ಎಂದಿದ್ದೀರಿ, ಇನ್ನೂ ರಸ್ತೆ ಅಭಿವೃದ್ಧಿಯಾಗಿಲ್ಲ, ಈ ಹೆದ್ದಾರಿ ಯೋಜನೆಗೆ ನೀವ್ಯಾರು, ಇದರಿಂದ ನಿಮಗೆ ಲಾಭವೇನು? ಇದರ ಬಗ್ಗೆ ನೀವು ಜನರಿಗೆ ಮಾಹಿತಿ ನೀಡಬೇಕು, ಈ ವಿಚಾರದಲ್ಲಿ ವ್ಯಾಪಕ ಭ್ರಷ್ಟಾಚಾರವಾಗಿದೆ ಎಂದು ಹೇಳಿದರು.
ಹೆದ್ದಾರಿಯಲ್ಲಿ ಕ್ರಾಸಿಂಗ್ ಕೊಟ್ಟಿಲ್ಲ. ಜನ ಎತ್ತಿನ ಗಾಡಿ ಎಲ್ಲಿಂದ ಓಡಿಸಬೇಕು. ಟ್ರ್ಯಾಕ್ಟರ್ ಗಳನ್ನ ಎಲ್ಲಿ ಕ್ರಾಸ್ ಮಾಡಬೇಕು. 50 ಕಡೆ ಕ್ರಾಸಿಂಗ್ ಇವೆ, ಅಲ್ಲಿ ನೀರು ತುಂಬಿವೆ. ಎಲ್ಲಿ ಸಮಸ್ಯೆಯಿದೆ ತೋರಿಸ್ತೇವೆ ಬನ್ನಿ, ರೈತರಿಗೆ ಬರಬೇಕಾದ ಭೂಪರಿಹಾರ ಕೊಡಿಸಿ. ಭೂ ಪರಿಹಾರ ಕೊಡದೆ ಇದ್ದರೆ ರಸ್ತೆಯಲ್ಲೇ ಕೂರುತ್ತೇವೆ. ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಲ್ಲ ಎಂದು ಹೇಳಿದರು.

ಪರಿಹಾರ ನೀಡುವಲ್ಲೂ ಅಕ್ರಮ
ಹೆದ್ದಾರಿಗಾಗಿ ವಶಪಡಿಸಿಕೊಂಡ ಭೂಮಿಗೆ ಪರಿಹಾರ ನೀಡುವಲ್ಲೂ ಅಕ್ರಮ ಎಸಗಿದ್ದಾರೆ. ಯಾರದ್ದೋ ಭೂಮಿಗೆ ಇನ್ಯಾರಿಗೋ ಪರಿಹಾರ ನೀಡಲಾಗಿದೆ. ಕಳೆದುಕೊಂಡ ಭೂಮಿಗೆ ಪರಿಹಾರ ಕೇಳಿದರೆ ಜೈಲಿಗೆ ಹಾಕಿಸುವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.
ಹೆದ್ದಾರಿ ಯೋಜನೆಯಲ್ಲಿ ಸುಮಾರು 800 ಕೋಟಿ ರುಪಾಯಿ ಲೂಟಿಯಾಗಿದೆ. ಯೋಜನಾ ನಿರ್ದೇಶಕ ಶ್ರೀಧರ್ ಕೊಳ್ಳೆ ಹೊಡೆದ ಹಣದಲ್ಲಿ ಪ್ರತಾಪ್ ಸಿಂಹ ಅವರಿಗೂ ಪಾಲಿರಬಹುದು ಎಂದು ಶಾಸಕ ಮಂಜುನಾಥ್ ಆರೋಪ ಮಾಡಿದರು.
ದಶಪಥದ ರಾಷ್ಟ್ರೀಯ ಹೆದ್ದಾರಿ ವಿಚಾರದ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಎರಡು ಬಾರಿ ಪ್ರಶ್ನೆ ಕೇಳಲು ಪ್ರಯತ್ನಪಟ್ಟಿದ್ದರೂ ಪ್ರಶ್ನೋತ್ತರ ವೇಳೆಗೆ ಬಾರದಂತೆ ಸಭಾ ಸಭಾಧ್ಯಕ್ಷರ ಕಚೇರಿಯನ್ನು ಮ್ಯಾನೇಜ್ ಮಾಡಲಾಗಿದೆ ಎಂದು ಶಾಸಕರು ಆರೋಪಿಸಿದರು.
-
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications