ಯಶವಂತಪುರ ಉಪ ಚುನಾವಣೆ; ಜವರಾಯಿ ಗೌಡ ಕಾಂಗ್ರೆಸ್‌ಗೆ?
ಬೆಂಗಳೂರು, ಸೆಪ್ಟೆಂಬರ್ 22 : ಬೆಂಗಳೂರು ನಗರದ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದೆ. 2018ರಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಜಯಗಳಿಸಿದ್ದ ಎಸ್. ಟಿ. ಸೋಮಶೇಖರ್ ಅನರ್ಹಗೊಂಡಿದ್ದಾರೆ.
ಯಶವಂತಪುರ ಕ್ಷೇತ್ರದ ಚುನಾವಣೆ ಎಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಹೋರಾಟ. ಶೋಭಾ ಕರಂದ್ಲಾಜೆ ಒಮ್ಮೆ ಕ್ಷೇತ್ರಲ್ಲಿ ಗೆದ್ದಿದ್ದು ಬಿಟ್ಟರೆ ಕಳೆದ ಚುನಾವಣೆಯಲ್ಲಿಯೂ ಬಿಜೆಪಿ ನಟ ಜಗ್ಗೇಶ್ ಕಣಕ್ಕಿಳಿಸಿ 3ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು.
ಈ ಉಪ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಜಯಗಳಿಸಲು ಕಾಂಗ್ರೆಸ್ ತಂತ್ರ ರೂಪಿಸುತ್ತಿದೆ. ಅದರಲ್ಲೂ ಎಸ್. ಟಿ. ಸೋಮಶೇಖರ್‌ಗೆ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ. ಅದಕ್ಕಾಗಿ ಜೆಡಿಎಸ್ ನಾಯಕನನ್ನು ಸೆಳೆಯಲು ಸಜ್ಜಾಗಿದ್ದಾರೆ.
ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಟಿ. ಎನ್. ಜವರಾಯಿ ಗೌಡ 104562 ಮತ ಪಡೆದಿದ್ದರು. ಕಾಂಗ್ರೆಸ್‌ನ ಎಸ್. ಟಿ. ಸೋಮಶೇಖರ್ 115273 ಮತಗಳನ್ನು ಪಡೆದು ಜಯಗಳಿಸಿದ್ದರು. ಈ ಉಪ ಚುನಾವಣೆಯಲ್ಲಿ ಯಾರಿಗೆ ಗೆಲುವು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ
ಪ್ರಭಾವಿ ನಾಯಕ ಟಿ. ಎನ್. ಜವರಾಯಿ ಗೌಡರನ್ನು ಕಾಂಗ್ರೆಸ್‌ನಿಂದ ಕಣಕ್ಕಿಳಿಸಲು ಸಿದ್ದರಾಮಯ್ಯ ತಂತ್ರ ರೂಪಿಸಿದ್ದಾರೆ. ಒಕ್ಕಲಿಗ ಸಮುದಾಯದ ನಾಯಕ ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಅವರು ಸೋಲು ಕಾಣುತ್ತಿದ್ದಾರೆ. ಈ ಬಾರಿ ಅವರನ್ನು ಕಾಗ್ರೆಸ್‌ನಿಂದ ಕಣಕ್ಕಿಳಿಸಲು ಚರ್ಚೆ ನಡೆಯುತ್ತಿದೆ.

ಸಾಲು-ಸಾಲು ಸೋಲು
ಟಿ. ಎನ್. ಜವರಾಯಿ ಗೌಡ 2013ರ ಚುನಾವಣೆಯಲ್ಲಿ 91, 280 ಮತಗಳನ್ನು ಪಡೆದು 29100 ಮತಗಳ ಅಂತರದಿಂದ, 2018ರ ಚುನಾವಣೆಯಲ್ಲಿ 104562 ಮತಗಳನ್ನು ಪಡೆದು 10, 711 ಮತಗಳನ್ನು ಪಡೆದು ಕಾಂಗ್ರೆಸ್‌ನ ಎಸ್. ಟಿ. ಸೋಮಶೇಖರ್ ವಿರುದ್ಧ ಸೋಲು ಕಂಡಿದ್ದರು.

ಬಿಜೆಪಿಗೆ ಭಾರಿ ಮುಖಭಂಗ
ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿಗೆ ಪ್ರಭಾವವಿಲ್ಲ. ಕಳೆದ ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ನಟ ಜಗ್ಗೇಶ್ ಕಣಕ್ಕಿಳಿಸಿದ್ದ ಬಿಜೆಪಿ ಪಡೆದಿದ್ದು ಕೇವಲ 59,308 ಮತಗಳು. ಈ ಬಾರಿಯೂ ಅವರೇ ಕಣಕ್ಕಿಳಿಯಲಿದ್ದಾರೆಯೇ? ಕಾದು ನೋಡಬೇಕಿದೆ.

ಎಸ್. ಟಿ. ಸೋಮಶೇಖರ್
2018ರ ಚುನಾವಣೆಯಲ್ಲಿ 115273 ಮತಗಳನ್ನು ಪಡೆದು ಜಯಗಳಿಸಿದ್ದ ಕಾಂಗ್ರೆಸ್‌ನ ಎಸ್. ಟಿ. ಸೋಮಶೇಖರ್ ಶಾಸಕ ಸ್ಥಾನದಿಂದ ಅನರ್ಹಗೊಂಡ ಬಳಿಕ ರಾಜಕೀಯ ನಿವೃತ್ತಿ ಮಾತನಾಡಿದ್ದರು. ಒಂದು ವೇಳೆ ಸುಪ್ರೀಂಕೋರ್ಟ್ ಆದೇಶ ಅವರ ಪರವಾಗಿ ಬಾರದಿದ್ದರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications