ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಲಮಂಡಳಿ ಅಕ್ರಮದ ಬಗ್ಗೆ ನ್ಯಾಯಾಂಗ ತನಿಖೆ ನಡೆಯಲಿ

|
Google Oneindia Kannada News

ಬೆಂಗಳೂರು, ನ.17 : ಬೆಂಗಳೂರು ಜಲಮಂಡಳಿಯಲ್ಲಿ ನೂರಾರು ಕೋಟಿ ರೂಪಾಯಿಗಳ ಅಕ್ರಮ ನಡೆದಿದ್ದು, ಇವುಗಳ ಕುರಿತು ದೂರುಗಳು ಕೇಳಿಬಂದಿದ್ದರೂ, ಮುಖ್ಯಮಂತ್ರಿಗಳು ಮೌನವಾಗಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ. ಜಲಮಂಡಳಿ ಭ್ರಷ್ಟಾಚಾರಗಳ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಜೆಡಿಎಸ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಜೆಡಿಎಸ್ ವಕ್ತಾರ ರಮೇಶ್ ಬಾಬು ಅವರು, ಜಲಮಂಡಳಿಯು ಪ್ರತಿನಿತ್ಯ ಸರಾಸರಿ ಸುಮಾರು 1300 ದಶಲಕ್ಷ ನೀರನ್ನು ಬೆಂಗಳೂರು ನಗರಕ್ಕೆ ಪೂರೈಕೆ ಮಾಡುತ್ತಿದೆ. ಶೇ.50ಕ್ಕೂ ಹೆಚ್ಚು ನೀರು ವಾಣಿಜ್ಯ ಬಳಕೆಗೆ ಉಪಯೋಗವಾಗುತ್ತಿದೆ. ಭ್ರಷ್ಟ ಅಧಿಕಾರಿಗಳು ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ನೀರಿನ ಶುಲ್ಕವಿಲ್ಲದೇ ವಾಣಿಜ್ಯ ಉದ್ದೇಶಗಳಿಗೆ ಅಕ್ರಮವಾಗಿ ನೀರು ಪೂರೈಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಧಿಕಾರಿಗಳು ಭ್ರಷ್ಟರ ಜೊತೆ ಕೈ ಜೋಡಿಸಿರುವುದರಿಂದ ಜಲಮಂಡಳಿಗೆ ವಾರ್ಷಿಕ ಸುಮಾರು 100 ಕೋಟಿ ರೂಪಾಯಿಗೂ ಹೆಚ್ಚು ಹಣ ನಷ್ಟವಾಗುತ್ತಿದೆ. ಬಹುತೇಕ ವಾಣಿಜ್ಯ ಬಳಕೆಯ ಕೈಗಾರಿಕೆಗಳಿಗೆ ದೋಷಪೂರಿತ ಮೀಟರ್‌ಗಳನ್ನು ಅಳವಡಿಸಲಾಗಿದೆ, ಇವುಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರಿದ್ದಾರೆ. [ಹೊಸದಾಗಿ ನೀರಿನ ಸಂಪರ್ಕ ಪಡೆಯುವುದು ಹೇಗೆ?]

JDS

ಜಲಮಂಡಳಿ ವ್ಯಾಪ್ತಿಗೆ ಹೊಸದಾಗಿ ಸೇರಿದ ಬಡಾವಣೆಗಳಲ್ಲಿ ಹೊಸ ನೀರಿನ ಸಂಪರ್ಕ ನೀಡಬೇಕಾದರೆ, ಅಧಿಕಾರಿಗಳು ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಖಾಸಗಿ ಬಡಾವಣೆಗಳಲ್ಲಿ ಲಂಚ ಪಡೆದು ನಿಯಮಗಳನ್ನು ಗಾಳಿಗೆ ತೂರಿ ನೀರಿನ ಹಾಗೂ ಒಳಚರಂಡಿಯ ಸಂಪರ್ಕಗಳನ್ನು ಕಲ್ಪಿಸಲಾಗಿದೆ. ಈ ಬಗ್ಗೆ ದೂರು ಬಂದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಮೇಶ್ ಬಾಬು ಹೇಳಿದ್ದಾರೆ.

ಜಲಮಂಡಳಿಯ ನಿಯಮಗಳಿಗೆ ಅನುಗುಣವಾಗಿ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಅಧಿಕೃತ ಹಾಗೂ ಅನುಮೋದಿತ ಬಡಾವಣೆಗಳಿಗೆ ಮಾತ್ರ ನಿಯಮಾನುಸಾರ ನೀರಿನ ಸಂಪರ್ಕ ಮತ್ತು ಒಳಚರಂಡಿ ಸಂಪರ್ಕವನ್ನು ನೀಡಬೇಕಾಗಿರುತ್ತದೆ. [ಜೆಡಿಎಸ್ ಕೋರ್ ಕಮಿಟಿಯ ಕಾರ್ಯಗಳೇನು?]

ಆದರೆ, ಕೆಲವು ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿ ಅನಧಿಕೃತ ಬಡಾವಣೆಗಳಿಗೆ ಅನುಮೋದನೆಗೊಂಡ ಬಡಾವಣೆಗಳ ದಾಖಲೆಗಳನ್ನು ಜೋಡಿಸಿ ನೀರು ಮತ್ತು ಒಳಚರಂಡಿ ಸಂಪರ್ಕಗಳನ್ನು ನೀಡಿರುವುದು ತಿಳಿದುಬಂದಿರುತ್ತದೆ. ಇದರಿಂದಾಗಿ ಜಲಮಂಡಳಿಗೆ ಬರಬೇಕಾಗಿದ್ದ ವಾರ್ಷಿಕ ಸುಮಾರು 120 ರಿಂದ 150 ಕೋಟಿ ರೂ. ನಷ್ಟವಾಗುತ್ತಿದೆ ಎಂದು ಜೆಡಿಎಸ್ ದೂರಿದೆ.

ಬೆಂಗಳೂರು ಜಲಮಂಡಳಿಯ ಅಕ್ರಮಗಳ ಬಗ್ಗೆ ವರದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ಆದರೆ, ರಾಜ್ಯ ಸರ್ಕಾರವು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮಗಳನ್ನು ಕೈಗೊಂಡಿರುವುದಿಲ್ಲ. ಸರ್ಕಾರ ಬೆಂಗಳೂರು ಜಲಮಂಡಳಿಯ ಅವ್ಯವಹಾರಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಪಕ್ಷ ಒತ್ತಾಯಿಸಿದೆ.

ಜಲಮಂಡಳಿ ಹೊಸ ನೀರಿನ ಸಂಪರ್ಕ ಪಡೆಯಲು ಹೆಚ್ಚು ಶುಲ್ಕವನ್ನು ಪಡೆಯುತ್ತಿದ್ದು, ಇದು ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ. ಕುಡಿಯುವ ನೀರಿನ ಪೂರೈಕೆ ಮಾಡುವುದು ಸರ್ಕಾರದ ಹೊಣೆಯಾಗಿದ್ದು, ಬೆಂಗಳೂರು ಜಲಮಂಡಳಿಯಲ್ಲಿ ನೀರಿನ ಮತ್ತು ಒಳಚರಂಡಿ ಸಂಪರ್ಕಕ್ಕೆ ನಿಗದಿಗೊಳಿಸಿರುವ ಶುಲ್ಕವನ್ನು ಶೇ.50ರಷ್ಟು ಕಡಿಮೆ ಮಾಡಬೇಕೆಂದು ಪಕ್ಷ ಆಗ್ರಹಿಸಿದೆ.

English summary
The Janatha Dal (Secular) Karnataka called for an independent judicial inquiry on The Bangalore Water Supply And Sewerage Board (BWSSB) scam on new water and sewerage connection. JDS spokesperson Ramesh Babu alleged that Govt not tacking any action on scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X