BREAKING: ವಿದ್ಯಾರ್ಥಿಗೆ ಹಲ್ಲು ಮುರಿಯುವಂತೆ ಹೊಡೆದ ಶಾಲಾ ಶಿಕ್ಷಕಿ, ಠಾಣೆಗೆ ಬಂದ್ರು ಪೋಷಕರು
ಬೆಂಗಳೂರು, ನವೆಂಬರ್ 08: ಶಿಕ್ಷಕರೆಂದರೆ ಮಕ್ಕಳ ಪಾಲಿಗೆ, ಅವರ ಜೀವನಕ್ಕೆ ದಾರಿ ದೀಪ ಆಗಬೇಕು. ಉತ್ತಮ ಮಾರ್ಗದರ್ಶನ ಮಾಡಿ ಮಕ್ಕಳ ಏಳಿಗೆಗೆ ಶ್ರಮಿಸಬೇಕು. ಆದರೆ ಇಂದಿನ ಕಾಲದಲ್ಲಿ ಕೆಲವು ಶಿಕ್ಷಕರು ವೃತ್ತಿಗೌರವ ಮರೆತು ಅನಾಚಾರಾ, ಮಕ್ಕಳ ಮೇಲೆ ಹಲ್ಲೆ ಮಾಡಿ ಪೇಚಿಗೆ ಸಿಲುಕುತ್ತಿದ್ದಾರೆ. ಅಂತದ್ದೇ ಘಟನೆ ಇದೀಗ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ.
ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಆಟವಾಡಿದ್ದಾನೆ ಎಂಬ ಕಾರಣಕ್ಕೆ ಗದರಿಸುವುದು ಬಿಟ್ಟು ಕೋಲಿನಿಂದ ಮುಖಕ್ಕೆ ಹೊಡೆದಿದ್ದಾರೆ. ಪರಿಣಾಮ ವಿದ್ಯಾರ್ಥಿಯ ಹಲ್ಲು ಮುರಿದಿದೆ. ಆತನನ್ನು ಪೋಷಕರು ಆಸ್ಪತ್ರೆಗೆ ಸೇರಿಸಿ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಈ ಹಿಂದೆಯು ಅದೇ ವಿದ್ಯಾರ್ಥಿಯ ಸಹೋದರಿಗೆ (ತಂಗಿ) ಇದೇ ಹಿಂದಿ ಶಿಕ್ಷಕಿಯೊಬ್ಬರು ಥಳಿಸಿದ್ದರು. ಇದೀಗ ಮತ್ತೆ ಅಂತದ್ದೇ ವರ್ತನೆ ತೋರುವ ಮೂಲಕ ಪೋಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸದ್ಯ ಹಿಂದಿ ಶಿಕ್ಷಕಿ ಅಜ್ಮತ್ ಎಂಬುವವರ ವಿರುದ್ಧ ವಿದ್ಯಾರ್ಥಿಯ ಪೋಷಕರು ಜಯನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಆರೋಪ ಮಾಡಿ ದೂರು ದಾಖಲಿಸಿದ್ದಾರೆ. ಇದರಿಂದ ಶಾಲಾ ಆಡಳಿತ ಮಂಡಳಿಯು ಅಗೌರವಕ್ಕೆ ಪಾತ್ರವಾಗಿದೆ.
ವಿದ್ಯಾರ್ಥಿ ಮೇಲೆ ಶಿಕ್ಷಕಿ ಹಲ್ಲೆ ಆರೋಪ: ಆಗಿದ್ದೇನು?
ಬೆಂಗಳೂರಿನ ಜಯನಗರದ ಹೋಲಿ ಕ್ರಿಸ್ಟ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ಅಜ್ಮತ್ ಎಂಬ ಹಿಂದಿ ಶಿಕ್ಷಕಿಯೊಬ್ಬರು ಆರನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಕೋಲಿನಲ್ಲಿ ಹೊಡೆದು ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರನೇ ತರಗತಿ ವಿದ್ಯಾರ್ಥಿಯು ಗುರುವಾರ ಮಧ್ಯಾಹ್ನದ ಊಟದ ಬಳಿಕ ನೀರಿನಲ್ಲಿ ಆಟವಾಡುತ್ತಿದ್ದಾನೆ. ಈ ವೇಳೆ ಆತನನ್ನು ಕರೆದು ಕೋಲಿನಿಂದ ಮುಖಕ್ಕೆ ಹೊಡೆದಿದ್ದಾರೆ. ಇದರಿಂದ ಆ ಬಾಲಕನ ಹಲ್ಲು ಮುರಿದಿದ್ದು, ತಟಿಗೆ, ಬಾಯಿಗೆ ಗಾಯವಾಗಿದೆ. ಬಾಲಕನಿಗೆ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಘಟನೆ ಬಳಿಕ ವಿದ್ಯಾರ್ಥಿಯು ಮನೆಗೆ ಬಂದು ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಈ ವೇಳೆ ಬಾಲಕ ಹಲ್ಲು ಮುರಿದಿರುವುದು ಗೊತ್ತಾಗಿದೆ. ಕೂಡಲೇ ಅವರು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅಲ್ಲದೇ, ಶಾಲಾ ಆಡಳಿತ ಮಂಡಳಿ ವಿರುದ್ಧವು ಆಕ್ರೋಶ ಹೊರ ಹಾಕಿದ್ದಾರೆ.
ವಿಶೇಷವೆಂದರೆ ಈ ಹಿಂದೆ ಇದೇ ಬಾಲಕನ ತಂಗಿದೆ ಇದೇ ಹಿಂದಿ ಶಿಕ್ಷಕಿ ಅಜ್ಮತ್ ಅವರು ಥಳಿಸಿದ್ದರು. ಆಗಲೂ ಪೋಷಕರು ಶಾಲೆಗೆ ಬಂದು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆಗ ಆಡಳಿತ ಮಂಡಳಿ ಪೋಷಕರನ್ನು ಸಮಾಧಾನ ಮಾಡಿತ್ತು. ಶಿಕ್ಷಕಿ ಪೋಷಕರಲ್ಲಿ ಕ್ಷಮಾಪಣೆ ಕೇಳಿದ ಬಳಿಕ ಎಲ್ಲವು ಸುಖಾಂತ್ಯಗೊಂಡಿತ್ತು.
ಇದೀಗ ಮತ್ತದೇ ಶಿಕ್ಷಕಿಯಿಂದ ಅಂತದ್ದೇ ಘಟನೆ ಮರುಕಳಿಸಿದ ಕಾರಣಕ್ಕೆ ಆತಂಕಗೊಂಡಿರುವ ಬಾಲಕನ ಪೋಷಕರು ಈ ಸಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ವರದಿ ಆಗಿದೆ.












Click it and Unblock the Notifications