ಸೌಮ್ಯಾ ರೆಡ್ಡಿಗೆ ಹೊಸ ಜವಾಬ್ದಾರಿ ಕೊಟ್ಟ ಕಾಂಗ್ರೆಸ್ ಹೈಕಮಾಂಡ್
ಬೆಂಗಳೂರು, ಆಗಸ್ಟ್ 29: ಜಯನಗರದ ಶಾಸಕಿ ಸೌಮ್ಯಾ ರೆಡ್ಡಿ ಅವರನ್ನು ತಮಿಳುನಾಡು ಪ್ರದೇಶ ಮಹಿಳಾ ಕಾಂಗ್ರೆಸ್ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.
ಐದು ರಾಜ್ಯಗಳಿಗೆ ಉಸ್ತುವಾರಿಗಳನ್ನು ನೇಮಿಸಿ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಬುಧವಾರ ಆದೇಶ ಹೊರಡಿಸಿದೆ. ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಾಜಿ ಸಂಸದೆ ಸುಷ್ಮಿತಾ ದೇವ್ ಅವರು ತಮಿಳುನಾಡು ಪ್ರದೇಶ ಮಹಿಳಾ ಕಾಂಗ್ರೆಸ್ ಉಸ್ತುವಾರಿಯನ್ನಾಗಿ ಸೌಮ್ಯಾ ರೆಡ್ಡಿ ಅವರನ್ನು ನೇಮಕ ಮಾಡಿದ್ದಾರೆ.
'ತಮಿಳುನಾಡು ಪ್ರದೇಶ ಮಹಿಳಾ ಕಾಂಗ್ರೆಸ್ ಉಸ್ತುವಾರಿಯನ್ನಾಗಿ ತತ್‌ಕ್ಷಣದಿಂದಲೇ ನಿಮ್ಮನ್ನು ನೇಮಕ ಮಾಡಲಾಗಿದೆ. ಮಹಿಳಾ ಕಾಂಗ್ರೆಸ್‌ಅನ್ನು ಬಲಗೊಳಿಸಲು ನೀವು ಎಲ್ಲ ಪ್ರಯತ್ನಗಳನ್ನು ಮಾಡುತ್ತೀರಿ ಎಂಬ ಖಾತರಿಯಿದೆ' ಎಂದು ಅವರು ಆದೇಶ ಪತ್ರದಲ್ಲಿ ಹೇಳಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಸೌಮ್ಯಾ ರೆಡ್ಡಿ ಸಂತಸ ಹಂಚಿಕೊಂಡಿದ್ದಾರೆ.

ಸೋನಿಯಾ, ರಾಹುಲ್‌ಗೆ ಧನ್ಯವಾದ
'ತಮಿಳುನಾಡು ಪ್ರದೇಶ ಮಹಿಳಾ ಕಾಂಗ್ರೆಸ್ ಗೆ ಉಸ್ತುವಾರಿಯಾಗಿ ನನ್ನನ್ನು ನೇಮಿಸಿರುವ ನಮ್ಮ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸುಶ್ಮಿತಾ ದೇವ್ ರವರಿಗೆ ನನ್ನ ಅನಂತ ಧನ್ಯವಾದಗಳು ಎಂದು ಅವರು ಹೇಳಿದ್ದಾರೆ.

ಪಕ್ಷ ಬಲಪಡಿಸಲು ಒಗ್ಗಟ್ಟಿನಿಂದ ಕೆಲಸ
'ನನ್ನ ಮೇಲೆ ಅಪಾರ ನಂಬಿಕೆ ಇಟ್ಟು ನನಗೆ ಈ ಜವಾಬ್ದಾರಿಯನ್ನು ನೀಡಿರುವ ನಮ್ಮ ಪಕ್ಷದ ನಿರೀಕ್ಷೆಗಳನ್ನು ಪೂರೈಸಲು ನಾನು ನನ್ನ ಶಕ್ತಿಮೀರಿ ಕೆಲಸ ಮಾಡುತ್ತೇನೆ ಮತ್ತು ನಮ್ಮ ದೇಶಾದ್ಯಂತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಈ ಮೂಲಕ ತಿಳಿಯಪಡಿಸುತ್ತೇನೆ' ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಜಯನಗರ ಚುನಾವಣೆಯಲ್ಲಿ ಗೆಲುವು
ಕಾಂಗ್ರೆಸ್‌ನ ಹಿರಿಯ ಮುಖಂಡ, ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ಅವರ ಮಗಳಾಗಿರುವ ಸೌಮ್ಯಾ ರೆಡ್ಡಿ 2018ರ ವಿಧಾನಸಭಾ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಸೌಮ್ಯಾ ರೆಡ್ಡಿ ಅವರು 54,457 ಮತಗಳನ್ನು ಗಳಿಸಿ ಎದುರಾಳಿ ಬಿಎನ್ ಪ್ರಹ್ಲಾದ್ ಅವರನ್ನು ಸೋಲಿಸಿದ್ದರು. ಬಿಜೆಪಿಯ ಬಿಎನ್ ಪ್ರಹ್ಲಾದ್ ಅವರು 51,568 ಮತಗಳನ್ನು ಪಡೆದುಕೊಂಡಿದ್ದರು.

ರಾಜೀನಾಮೆಯ ಊಹಾಪೋಹ
ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲವಾದ ಸಂದರ್ಭದಲ್ಲಿ ರಾಮಲಿಂಗಾ ರೆಡ್ಡಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ ಸೌಮ್ಯಾ ರೆಡ್ಡಿ ಅವರೂ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಅನೇಕ ಊಹಾಪೋಹಗಳಿದ್ದರೂ ಸೌಮ್ಯಾ ರೆಡ್ಡಿ ಅವರು ಅದನ್ನು ಖಚಿಪಡಿಸಿರಲಿಲ್ಲ. ಈ ನಡುವೆ ಅವರು ದೆಹಲಿಗೆ ತೆರಳಿ ಸುಷ್ಮಿತಾ ದೇವ್ ಮತ್ತು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದು ಕುತೂಹಲ ಕೆರಳಿಸಿತ್ತು. ತಂದೆಗೆ ಸೂಕ್ತ ಗೌರವ ಸಿಕ್ಕಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ರಾಮಲಿಂಗಾ ರೆಡ್ಡಿ ಅವರು ತಮ್ಮ ರಾಜೀನಾಮೆ ವಾಪಸ್ ತೆಗೆದುಕೊಂಡಿದ್ದರು.












Click it and Unblock the Notifications