ಜಯನಗರದಲ್ಲಿ ಮಳೆಯ ಜೊತೆ ಬಲವಾಗಿ ಬೀಸಿರುವ ಗಾಳಿಸುದ್ದಿ
ಬೆಂಗಳೂರು, ಜೂನ್ 04 : ಜಯನಗರ ವಿಧಾನಸಭೆ ಚುನಾವಣೆಗೆ ಕೇವಲ ವಾರ ಬಾಕಿಯಿರುವಾಗ ಸಂಜೆ ಆಗಾಗ ಸುರಿಯುವ ಮಳೆಯ ಜೊತೆ ಬಲವಾಗಿ ಬೀಸುತ್ತಿದೆ ರಾಜಕೀಯದ ಗಾಳಿಸುದ್ದಿ.
ಬರೀ ಅಂತೆಕಂತೆಗಳು, ಯಾರನ್ನು ನಂಬುವುದು ಯಾರನ್ನು ಬಿಡುವುದು. ಟಿಕೆಟ್ ಸಿಗದೆ ಅಸಮಾಧಾನದ ಸುದ್ದಿ ಒಂದು ಕಿವಿಗೆ ಅಪ್ಪಳಿಸಿ ಇನ್ನೊಂದು ಕಿವಿಯಿಂದ ಹೊರಬರುವ ಹೊತ್ತಿನಲ್ಲಿ ಅಸಾಮಾಧಾನಗಳು ಶಮನವಾಗಿರುತ್ತವೆ. ಏನೂ ನಡೆದೇ ಇಲ್ಲ ಎಂಬ ಹಾಗೆ ಬದಲಾವಣೆಗಳಾಗಿರುತ್ತವೆ, ಮತದಾರರು ಕಕ್ಕಾಬಿಕ್ಕಿಯಾಗಿರುತ್ತಾರೆ.
ಇಲ್ಲಿನ ಮತದಾರರ ಫೆವರಿಟ್ ಶಾಸಕರಾಗಿದ್ದ ಬಿಎನ್ ವಿಜಯಕುಮಾರ್ ಅವರ ಹಠಾತ್ ನಿಧನದಿಂದಾಗಿ ಇಲ್ಲಿನ ಚುನಾವಣೆ ಒಂದಿಷ್ಟು ರೋಚಕತೆ ಕಳೆದುಕೊಂಡಿದೆಯಾದರೂ, ಎಲ್ಲ ಅಭ್ಯರ್ಥಿಗಳಿಂದ ಪ್ರಚಾರದ ಭರಾಟೆ ಜೋರಾಗಿಯೇ ಇದೆ. ಆಗಾಗ, ಹಣ ಹಂಚುತ್ತಿರುವದು, ಕುಕ್ಕರ್ ಒಬ್ಬರ ಕೈಯಿಂದ ಮತ್ತೊಬ್ಬರ ಕೈಪಾಲಾಗುತ್ತಿರುವ ಸುದ್ದಿಗಳೂ ಅಪ್ಪಳಿಸುತ್ತಿರುತ್ತವೆ.
ಜಯನಗರದ ಅಭ್ಯರ್ಥಿ ಘೋಷಣೆ : ಬಿಜೆಪಿಯಲ್ಲಿ ಅಸಮಾಧಾನ!
ಈ ನಡುವೆ, ಬೈರಸಂದ್ರ ವಾರ್ಡ್ ಬಿಜೆಪಿ ಸದಸ್ಯ ಎನ್.ನಾಗರಾಜು ಅವರು ಸಹ ಬಿ.ಎನ್.ಪ್ರಹ್ಲಾದ್ ಅವರ ಆಯ್ಕೆ ವಿರುದ್ಧ ಅಸಮಾಧಾನಗೊಂಡು, ಚುನಾವಣೆ ಹತ್ತಿರವಾಗುತ್ತಿರುವಾಗ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ ಎಂಬ ತಲೆಬುಡವಿಲ್ಲದ ಸುದ್ದಿ ಕೂಡ ಹಬ್ಬಿತ್ತು. ಅದನ್ನವರು ತಳ್ಳಿಹಾಕಿದ್ದಾರೆ.
ಜಯನಗರ ಚುನಾವಣೆ : ಪ್ರಚಾರದಿಂದ ದೂರವುಳಿದ ಬಿಜೆಪಿ ಬಿಬಿಎಂಪಿ ಸದಸ್ಯರು!
ಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ, ಜೆಡಿಎಸ್‌ನಿಂದ ಕಾಳೇಗೌಡ, ಪಕ್ಷೇತರ ಅಭ್ಯರ್ಥಿಯಾಗಿ ರವಿ ಕೃಷ್ಣಾರೆಡ್ಡಿ ಕಣದಲ್ಲಿದ್ದಾರೆ. ಜೂನ್ 11ರಂದು ಚುನಾವಣೆ ನಡೆಯಲಿದ್ದು, ಜೂನ್ 16ರಂದು ಫಲಿತಾಂಶ ಪ್ರಕಟವಾಗಲಿದೆ.

ಬೈರಸಂದ್ರ ವಾರ್ಡ್ ಬಿಜೆಪಿ ಸದಸ್ಯ ಎನ್.ನಾಗರಾಜು
ಬೈರಸಂದ್ರ ವಾರ್ಡ್ ಬಿಜೆಪಿ ಸದಸ್ಯ ಎನ್.ನಾಗರಾಜು ಅವರು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರೊಂದಿ ಫೋಟೋ ತೆಗೆಸಿಕೊಂಡಿದ್ದು, ಆ ಫೋಟೋವನ್ನು ಸೌಮ್ಯ ಅವರೇ ಎಲ್ಲರಿಗೂ ಅನುಮಾನ ಬರುವ ರೀತಿಯಲ್ಲಿ ಫೇಸ್ ಬುಕ್ಕಿನಲ್ಲಿ ಹಾಕಿಕೊಂಡಿದ್ದು ಟಾಕ್ ಆಫ್ ದಿ ಜಯನಗರ ಆಗಿತ್ತು.
ಮಾಜಿ ಸಚಿವ ಎಚ್.ಎಂ.ರೇವಣ್ಣ, ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಮತ್ತು ನಾಗರಾಜು ಎಲ್ಲರೂ ಒಟ್ಟಾಗಿರುವ ಪೋಟೋವನ್ನು ಸೌಮ್ಯಾ ರೆಡ್ಡಿ ಅವರ ಫೇಸ್‌ಬುಕ್ ಪೇಜ್‌ನಲ್ಲಿ ಹಾಕಲಾಗಿದೆ.

ಬಿಬಿಎಂಪಿ ಸದಸ್ಯರ ಅಸಮಾಧಾನ
ಜಯನಗರ ಕ್ಷೇತ್ರಕ್ಕೆ ಬಿಜೆಪಿ ಬಿ.ಎನ್.ಪ್ರಹ್ಲಾದ್ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದ ಬಳಿಕ ಪಕ್ಷದಲ್ಲಿ ಅಸಮಾಧಾನ ಉಂಟಾಗಿದೆ. ಅದರಲ್ಲೂ ಬಿಬಿಎಂಪಿ ಸದಸ್ಯರು ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಬಿಬಿಎಂಪಿ ಸದಸ್ಯರಲ್ಲಿಯೇ ಯಾರಿಗಾದರೂ ಟಿಕೆಟ್ ನೀಡಬಹುದಿತ್ತು ಎಂಬುದು ಅವರ ವಾದವಾಗಿದೆ.
ಜಯನಗರದ 3ನೇ ಬ್ಲಾಕ್‌ನಲ್ಲಿರುವ ಪೈ ವೈಸ್‌ರಾಯ್ ಹೋಟೆಲ್‌ನಲ್ಲಿ ಬಿಬಿಎಂಪಿ ಸದಸ್ಯರು ಸಭೆ ನಡೆಸಿ, ಪಕ್ಷದ ನಾಯಕರ ಮೇಲೆ ಒತ್ತಡ ಹಾಕಲು ಪ್ರಯತ್ನ ನಡೆಸಿದ್ದರು. ಆದರೆ, ಪಕ್ಷ ಅಂತಿಮವಾಗಿ ಬಿ.ಎನ್.ಪ್ರಹ್ಲಾದ್ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು.

ಜೂನ್ 11ರಂದು ಚುನಾವಣೆ
ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್.ವಿಜಯಕುಮಾರ್ ಮೇ 4ರಂದು ಮೃತಪಟ್ಟಿದ್ದರು. ಆದ್ದರಿಂದ ಮೇ 12ರಂದು ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಲಾಗಿತ್ತು. ಜೂನ್ 11ರಂದು ಚುನಾವಣೆ ನಡೆಯಲಿದ್ದು, 16ರಂದು ಫಲಿತಾಂಶ ಪ್ರಕಟವಾಗಲಿದೆ.
ಕ್ಷೇತ್ರಕ್ಕೆ ಬಿಜೆಪಿ ಬಿ.ಎನ್.ಪ್ರಹ್ಲಾದ್ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಬಿ.ಎನ್.ವಿಜಯಕುಮಾರ್ ಅವರ ಸಹೋದರ ಬಿ.ಎನ್.ಪ್ರಹ್ಲಾದ್ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಚುನಾವಣೆಯಲ್ಲಿ ಅನುಕಂಪದ ಅಲೆ ಕೆಲಸ ಮಾಡಲಿದೆಯೇ? ಕಾದು ನೋಡಬೇಕು.

ಪ್ರಚಾರದಿಂದ ದೂರವುಳಿದ ಬಿಬಿಎಂಪಿ ಸದಸ್ಯರು
ಬಿಜೆಪಿಯ ಹಿರಿಯ ನಾಯಕರ ವಿರುದ್ಧ ಅಸಮಾಧಾನಗೊಂಡಿರುವ ಕೆಲವು ಬಿಬಿಎಂಪಿ ಸದಸ್ಯರು ಚುನಾವಣಾ ಪ್ರಚಾರದಿಂದಲೂ ದೂರ ಉಳಿದಿದ್ದಾರೆ. ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಸೋಲು ಕಂಡಿರುವ ಬಿಜೆಪಿ ಜಯನಗರ ಚುನಾವಣೆಯಲ್ಲಿ ಗೆದ್ದು, ಕ್ಷೇತ್ರವನ್ನು ಉಳಿಸಿಕೊಳ್ಳುವ ಉತ್ಸಾಹದಲ್ಲಿದೆ.

ಸೌಮ್ಯಾ ರೆಡ್ಡಿ ಅಭ್ಯರ್ಥಿ
ಸೌಮ್ಯಾ ರೆಡ್ಡಿ ಅವರ ಪರವಾಗಿ ವಾರ್ಡ್‌ನಲ್ಲಿ ಮನೆ-ಮನೆ ಪ್ರಚಾರ ಆರಂಭಿಸಿದ್ದಾರೆ. ಬಿಜೆಪಿಯಿಂದ ಬಿ.ಎನ್.ಪ್ರಹ್ಲಾದ್, ಜೆಡಿಎಸ್‌ನಿಂದ ಕಾಳೇಗೌಡ, ಪಕ್ಷೇತರ ಅಭ್ಯರ್ಥಿಯಾಗಿ ರವಿಕೃಷ್ಣಾ ರೆಡ್ಡಿ ಅವರು ಕಣದಲ್ಲಿದ್ದಾರೆ. ರವಿ ಕೃಷ್ಣಾ ರೆಡ್ಡಿ ಅವರು ಜಯನಗರದಲ್ಲಿ ಮತದಾರರಿಗೆ ನೀಡಲಾಗುತ್ತಿರುವ ಆಮಿಷದ ವಿರುದ್ಧ ಯುದ್ಧವನ್ನೇ ಸಾರಿದ್ದಾರೆ. ಚುನಾವಣಾ ಆಯೋಗಕ್ಕೂ ದೂರು ನೀಡಿದ್ದಾರೆ. ಕಡೆಗೆ ಗೆಲ್ಲುವವರು ಯಾರು?
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !