ಜಯನಗರ ಚುನಾವಣೆ : ಪ್ರಚಾರದಿಂದ ದೂರವುಳಿದ ಬಿಜೆಪಿ ಬಿಬಿಎಂಪಿ ಸದಸ್ಯರು!
ಬೆಂಗಳೂರು, ಮೇ 30 : ಜಯನಗರದ ಚುನಾವಣೆ ಗೆಲ್ಲುವ ಬಿಜೆಪಿ ಕನಸಿಗೆ ಹಿನ್ನಡೆ ಉಂಟಾಗಿದೆ. ಸ್ವತಃ ಬಿಜೆಪಿಯ ಬಿಬಿಎಂಪಿ ಸದಸ್ಯರು ಪ್ರಚಾರದಿಂದ ದೂರವುಳಿದಿದ್ದಾರೆ. ಜೂನ್ 11ರಂದು ಜಯನಗರ ಕ್ಷೇತ್ರದ ಚುನಾವಣೆ ನಡೆಯಲಿದೆ.
ಬಿ.ಎನ್.ಪ್ರಹ್ಲಾದ್ ಅವರು ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಅಭ್ಯರ್ಥಿ ಘೋಷಣೆ ಬಳಿಕ ಬಿಜೆಪಿಯ ಬಿಬಿಎಂಪಿ ಸದಸ್ಯರು ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದರು. ಈಗ ಅವರು ಪ್ರಚಾರದಿಂದ ದೂರವುಳಿದಿದ್ದಾರೆ.
ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಬಿಎಂಪಿ ಸದಸ್ಯರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿಲ್ಲ. ಕೇಂದ್ರ ಸಚಿವ ಅನಂತ್ ಕುಮಾರ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರವನ್ನು ಕೈಗೊಂಡಿದ್ದಾರೆ.

ಕಾಂಗ್ರೆಸ್‌ನಿಂದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಅಭ್ಯರ್ಥಿಯಾಗಿದ್ದಾರೆ. ರಾಮಲಿಂಗಾ ರೆಡ್ಡಿ ಅವರು ಪುತ್ರಿಯನ್ನು ಗೆಲ್ಲಿಸಲೇಬೇಕು ಎಂದು ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ನೂರಾರು ಕಾಂಗ್ರೆಸ್ ಕಾರ್ಯಕರ್ತರು ಎರಡು ತಂಡದಲ್ಲಿ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ.
ಜಯನಗರ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಕಾಳೇಗೌಡ, ಪಕ್ಷೇತರ ಅಭ್ಯರ್ಥಿಯಾಗಿ ರವಿಕೃಷ್ಣಾ ರೆಡ್ಡಿ ಅವರು ಕಣದಲ್ಲಿದ್ದಾರೆ. ಒಟ್ಟು 14 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಜೂನ್ 11ರಂದು ಚುನಾವಣೆ ನಡೆಯಲಿದೆ, ಜೂನ್ 16ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಬಿಬಿಎಂಪಿ ಸದಸ್ಯರು ಚುನಾವಣಾ ಪ್ರಚಾರದಿಂದ ದೂರವುಳಿದಿದ್ದು ಬಿಜೆಪಿಗೆ ಹಿನ್ನಡೆ ಉಂಟು ಮಾಡಿದೆ. ಚುನಾವಣಾ ಪ್ರಚಾರ ನಡೆಸುವ ಜೊತೆಗೆ ಪಕ್ಷದೊಳಗಿನ ಅಸಮಾಧಾನ ಬಗೆಹರಿಸುವ ಸವಾಲು ನಾಯಕರ ಮುಂದಿದೆ.












Click it and Unblock the Notifications