IT Raid: ಬೆಂಗಳೂರಿನ 15ಕ್ಕೂ ಹೆಚ್ಚು ಕಡೆ ಐಟಿ ದಾಳಿ: ಕಾಫಿ ಬೋರ್ಡ್ ನಿರ್ದೇಶಕರ ನಿವಾಸದಲ್ಲಿ ತೀವ್ರ ಶೋಧ
ಬೆಂಗಳೂರು ಅಕ್ಟೋಬರ್ 12: ಬೆಂಗಳೂರಿನಲ್ಲಿ ಒಂದು ವಾರದ ಹಿಂದಷ್ಟೇ ಕೆಲವು ಕಡೆಗಳಲ್ಲಿ ಐಟಿ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು (IT Raid) ಗುರುವಾರ ಬೆಳಂಬೆಳಗ್ಗೆ ನಗರದ 15ಕ್ಕೂ ಹೆಚ್ಚಿನ ಕಡೆಗಳಲ್ಲಿ ಏಕಕಾಲಕ್ಕೆ ಐಟಿ ದಾಳಿ ಮಾಡಲಾಗಿದೆ. ಈ ಪೈಕಿ ಕಾಫಿ ಬೋರ್ಡ್ ನಿರ್ದೇಶಕರ ಮನೆ ಮೇಲೂ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಬೆಂಗಳೂರಿಗೆ ಏಕಕಾಲಕ್ಕೆ ಬಂದ ಅಧಿಕಾರಿಗಳು ತೆರಿಗೆ ವಂಚನೆ ಸಂಬಂಧ ನಗರದ ಸದಾಶಿವನಗರ, ಡಾಲರ್ಸ್ ಕಾಲೋನಿ, ಮಲ್ಲೇಶ್ವರಂ, ಸರ್ಜಾಪುರ ರಸ್ತೆ, ಮತ್ತಿಕೆರೆ ಸೇರಿದಂತೆ ಸುಮಾರು 15ಕ್ಕೂ ಹೆಚ್ಚಿನ ಕಡೆ ದಾಳಿ ನಡೆಸಿ ತೀವ್ರ ಶೋಧ ಮಾಡಿದ್ದಾರೆ.

ಈ ಪೈಕಿ ರಾಜ್ಯ ಕಾಫಿ ಬೋರ್ಡ್ ನಿರ್ದೇಶಕ ಚಂದ್ರಶೇಖರ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಮನೆಯಲ್ಲಿ ದಾಖಲೆ ಪತ್ರಗಳನ್ನು ಅಧಿಕಾರಿಗಳು ತಡಕಾಡಿದ್ದಾರೆ. ಚಂದ್ರಶೇಖರ್ ಅವರ ಚರಾಸ್ತಿ ಮತ್ತು ಸ್ಥಿರಾಸ್ತಿಗಳನ್ನು ಕುರಿತು ಮಾಹಿತಿ, ದಾಖಲೆಗಳನ್ನು ಕಲೆ ಹಾಕಿದ್ದಾರೆ.
ಚಿನ್ನದ ವ್ಯಾಪಾರಿಗಳ ಮೇಲೆ ಐಟಿ ದಾಳಿ
ಕಳೆದ ವಾರ ಅಕ್ಟೋಬರ್ 6ರಂದು ಸಹ ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಅಂದು ಚಿನ್ನದಂಗಡಿ ವ್ಯಾಪಾರಿಗಳು, ಮನೆಗಳ ಮೇಲೆ ದಾಳಿ ನಡೆಸಿದ್ದರು. ಅಲ್ಲದೇ ಮೊನ್ನೆ ಹೊಸಕೋಟೆಯ ಬಿರಿಯಾನಿ ಅಂಗಡಿಗಳ ಮಾಲೀಕರ ದಾಳಿ ನಡೆಸಿದ್ದರು. ತೆರಿಗೆ ವಂಚನೆ ಮಾಡಲಾಗಿದೆ ಎಂಬ ಮಾಹಿತಿ ಮೇರೆಗೆ ಅಧಿಕಾರಿಗಳು ಶೋಧಿಸಿದ್ದರು. ಇವುಗಳ ದಾಳಿ ವೇಳೆ ಸಿಕ್ಕ ಮಾಹಿತಿ ಮೇರೆಗೆ ಮತ್ತೆ ಗುರುವಾರ ಆದಾಯ ತೆರಿಗೆ ಇಲಾಖೆ ಅನುಮಾನಿತ ವ್ಯಕ್ತಿ, ನಿವಾಸಗಳ ಮೇಲೆ ದಾಳಿ ಮುಂದುವರಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications