ಸಿಜೆ ರೋಯ್ ಆತ್ಮಹತ್ಯೆ ಸುತ್ತ ಮನಿ ಲಾಂಡರಿಂಗ್ ಮತ್ತು ರಾಜಕೀಯ ನಂಟಿನ ಅನುಮಾನದ ಹುತ್ತ
ಬೆಂಗಳೂರು: ನಗರದ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆ 'ಕಾನ್ಫಿಡೆಂಟ್ ಗ್ರೂಪ್'ನ ಸ್ಥಾಪಕ ಮತ್ತು ಅಧ್ಯಕ್ಷ ಸಿಜೆ ರೋಯ್ (ರಾಯ್ ಚಿರಿಯಂಕಂದತ್ ಜೋಸೆಫ್) ಅವರ ಅಕಾಲಿಕ ಸಾವು ರಿಯಲ್ ಎಸ್ಟೇಟ್ ಮತ್ತು ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದೆ. ಲ್ಯಾಂಗ್‌ಫೋರ್ಡ್ ಟೌನ್‌ನಲ್ಲಿರುವ ತಮ್ಮ ಕಚೇರಿಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ರೋಯ್ ಅವರ ಸಾವಿನ ಹಿಂದೆ ಆದಾಯ ತೆರಿಗೆ ಇಲಾಖೆಯ ತೀವ್ರ ತನಿಖೆ ಮತ್ತು ಅಕ್ರಮ ಹಣ ಸಾಗಣೆ (ಮನಿ ಲಾಂಡರಿಂಗ್) ಆರೋಪಗಳ ಬಲವಾದ ಸಂಬಂಧ ಇರುವುದು ಈಗ ಬೆಳಕಿಗೆ ಬಂದಿದೆ.

ಆದಾಯ ತೆರಿಗೆ ಇಲಾಖೆಯ ಕಣ್ಗಾವಲು
ಕಳೆದ ಎರಡು ವರ್ಷಗಳಿಂದ ಆದಾಯ ತೆರಿಗೆ ಇಲಾಖೆಯು ಸಿಜೆ ರೋಯ್ ಅವರ ವ್ಯವಹಾರಗಳ ಮೇಲೆ ನಿಗಾ ಇಟ್ಟಿತ್ತು. ಮುಖ್ಯವಾಗಿ ಕೇರಳ ಮತ್ತು ಕರ್ನಾಟಕದ ಪ್ರಭಾವಿ ರಾಜಕಾರಣಿಗಳಿಗೆ ಇವರ ಮೂಲಕ ದೊಡ್ಡ ಮಟ್ಟದ ಹಣ ಸಂದಾಯವಾಗುತ್ತಿದೆ ಎಂಬ ಶಂಕೆಯಿತ್ತು. ರೋಯ್ ಅವರು ವಿದೇಶಗಳಿಂದ ಹಣವನ್ನು ತಂದು, ಇಲ್ಲಿನ ರಾಜಕಾರಣಿಗಳಿಗೆ ತಲುಪಿಸುವ 'ಮಧ್ಯವರ್ತಿ' ಆಗಿ ಕೆಲಸ ಮಾಡುತ್ತಿದ್ದರು ಎಂದು ಐಟಿ ಮೂಲಗಳು ತಿಳಿಸಿವೆ.
ರೋಯ್ ಅವರ ಕಚೇರಿಗಳ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ 'ರೌಂಡ್ ಟ್ರಿಪ್ಪಿಂಗ್' ಮೂಲಕ ವಿದೇಶದಿಂದ ಹಣವನ್ನು ತಂದಿರುವ ಬಗ್ಗೆ ಹಲವಾರು ಆಕ್ಷೇಪಾರ್ಹ ದಾಖಲೆಗಳು ಪತ್ತೆಯಾಗಿವೆ. ಭಾರತದಲ್ಲಿ ಆಸ್ತಿಗಳನ್ನು ಅನಿವಾಸಿ ಭಾರತೀಯರಿಗೆ (NRI) ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿ, ಉಳಿದ ಹಣವನ್ನು ತೆರಿಗೆ ಮುಕ್ತ ರಾಷ್ಟ್ರವಾದ ಯುಎಇನಲ್ಲಿ ಪಡೆಯಲಾಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಣವನ್ನು ನಂತರ ಭಾರತದಲ್ಲಿನ ರಾಜಕೀಯ ಪಕ್ಷಗಳಿಗೆ ಮತ್ತು ಅವುಗಳ ಅಂಗಸಂಸ್ಥೆಗಳಿಗೆ ನೀಡಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಆತ್ಮಹತ್ಯೆಗೆ ಕಾರಣವೇನು?
ಆತ್ಮಹತ್ಯೆಯ ದಿನದಂದು ಐಟಿ ಅಧಿಕಾರಿಗಳು ರೋಯ್ ಅವರ ಕಚೇರಿಯಲ್ಲಿ ಪರಿಶೀಲನೆ ನಡೆಸುತ್ತಿದ್ದರು. ಇದು ಕಳೆದ ಎರಡು ತಿಂಗಳಲ್ಲಿ ನಡೆದ ಮೂರನೇ ಕಾರ್ಯಾಚರಣೆಯಾಗಿತ್ತು. ಅಧಿಕಾರಿಗಳು ಅವರ ಲಾಕರ್ ಮತ್ತು ಅಲ್ಮೇರಾಗಳನ್ನು ಪರಿಶೀಲಿಸುವ ತಯಾರಿಯಲ್ಲಿದ್ದರು. ವಿಚಾರಣೆಗೆ ಹಾಜರಾಗುವ ಕೆಲವೇ ಕ್ಷಣಗಳ ಮೊದಲು ರೋಯ್ ತಮ್ಮ ಕ್ಯಾಬಿನ್‌ಗೆ ತೆರಳಿ ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆ. ಐಟಿ ಅಧಿಕಾರಿಗಳ ಕಿರುಕುಳವೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದರೂ, ಇಲಾಖೆಯು ಇದನ್ನು ನಿರಾಕರಿಸಿದೆ. ರೋಯ್ ಇತರರ ಹಣವನ್ನು ನಿರ್ವಹಿಸುತ್ತಿದ್ದರಿಂದ ಅವರ ಮೇಲೆ ತೀವ್ರ ಒತ್ತಡವಿತ್ತು ಎಂದು ಮೂಲಗಳು ತಿಳಿಸಿವೆ.
ತಮ್ಮ ಕಂಪನಿಯು ಸಾಲಮುಕ್ತವಾಗಿದೆ ಎಂದು ರೋಯ್ ಹೇಳಿಕೊಳ್ಳುತ್ತಿದ್ದುದೇ ಐಟಿ ಇಲಾಖೆಗೆ ದೊಡ್ಡ ರೆಡ್ ಫ್ಲ್ಯಾಗ್ ಆಗಿತ್ತು. ಅಷ್ಟು ದೊಡ್ಡ ಸಾಮ್ರಾಜ್ಯವನ್ನು ಯಾವುದೇ ಸಾಲವಿಲ್ಲದೆ ಕಟ್ಟುವುದು ವ್ಯವಹಾರಿಕವಾಗಿ ಸಂಶಯಕ್ಕೆ ಎಡೆಮಾಡಿಕೊಟ್ಟಿತ್ತು. ಸದ್ಯ ಪ್ರಕರಣದ ತನಿಖೆ ಮುಂದುವರಿದಿದ್ದು, ಅವರ ಮೊಬೈಲ್ ದಾಖಲೆಗಳ ವಿಶ್ಲೇಷಣೆಯಿಂದ ಇನ್ನೂ ಹಲವು ಪ್ರಭಾವಿಗಳ ಹೆಸರು ಹೊರಬರುವ ಸಾಧ್ಯತೆಯಿದೆ ಎನ್ನಲಾಗಿದೆ.












Click it and Unblock the Notifications