ಉಪ ಕದನಕ್ಕೆ ಮುನ್ನ ಬಂದ ಐಟಿ, ಜೆಡಿಎಸ್ ಅಭ್ಯರ್ಥಿಗೆ ನೋಟಿಸ್
ಬೆಂಗಳೂರು, ನವೆಂಬರ್ 20 : 15 ಕ್ಷೇತ್ರಗಳ ಉಪ ಚುನಾವಣೆಗೆ ಕೆಲವು ದಿನಗಳು ಬಾಕಿ ಇರುವಾಗಲೇ ಆದಾಯ ತೆರಿಗೆ ಇಲಾಖೆ ಆಗಮನವಾಗಿದೆ. ಯಶವಂತಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗೆ ನೋಟಿಸ್ ನೀಡಿದ್ದು, ಉತ್ತರ ನೀಡಿದ್ದಾರೆ.
ಯಶವಂತಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಟಿ. ಎನ್. ಜವರಾಯಿ ಗೌಡ ಬುಧವಾರ ಆದಾಯ ತೆರಿಗೆ ಇಲಾಖೆಗೆ ವಿಚಾರಣೆಗೆ ಹಾಜರಾಗಿದ್ದರು. ಡಿಸೆಂಬರ್ 5ರಂದು ನಡೆಯಲಿರುವ ಚುನಾವಣೆಗೆ ಅವರು ಕಣಕ್ಕಿಳಿದಿದ್ದಾರೆ.
ಬಿಜೆಪಿ ಕಾಂಗ್ರೆಸ್, ಜೆಡಿಎಸ್ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆ ಎಂಬ ಆರೋಪದ ನಡುವೆಯೇ ಜೆಡಿಎಸ್ ನಾಯಕನಿಗೆ ಐಟಿ ನೋಟಿಸ್ ನೀಡಿದ್ದು, ಚರ್ಚೆಗೆ ಕಾರಣವಾಗಿದೆ. ಎಸ್. ಟಿ. ಸೋಮಶೇಖರ್ ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.
ಟಿ. ಎನ್. ಜವರಾಯಿ ಗೌಡ 59.30 ಕೋಟಿ ರೂ. ಆಸ್ತಿ ಒಡೆಯರಾಗಿದ್ದಾರೆ. ಐಟಿ ಇಲಾಖೆ ವಿಚಾರಣೆ ಎದುರಿಸಿದ ಅವರು, ಎಲ್ಲಾ ಮಾಹಿತಿಗಳನ್ನು ಕೊಟ್ಟು ಬಂದಿದ್ದಾರೆ. ಉಪ ಚುನಾವಣೆ ಸಮಯದಲ್ಲಿಯೇ ಐಟಿ ಇಲಾಖೆಯ ಈ ಕ್ರಮ ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.

ಜವರಾಯಿ ಗೌಡ ಹೇಳಿದ್ದೇನು?
ಮಾಧ್ಯಮಗಳ ಜೊತೆ ಮಾತನಾಡಿದ ಟಿ. ಎನ್. ಜವರಾಯಿ ಗೌಡ, "ವೈಯಕ್ತಿಕ ವಿಚಾರಕ್ಕೆ ಮಾತ್ರ ನೋಟಿಸ್ ನೀಡಿದ್ದಾರೆ. ಕೆಲ ವರ್ಷಗಳ ಹಿಂದೆ ನೋಟ್ ಬ್ಯಾನ್ ಆದಾಗ ಆಸ್ತಿ ಪಡೆದಿದ್ದೆ. ಅದರ ಹಣಕಾಸಿನ ವ್ಯವಹಾರದ ಬಗ್ಗೆ ಮಾಹಿತಿ ಕೇಳಿದ್ದರು" ಎಂದು ಹೇಳಿದರು.

ಅಭ್ಯರ್ಥಿ ಸ್ಫೋಟಕ ಹೇಳಿಕೆ
"ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್. ಟಿ. ಸೋಮಶೇಖರ್ ಪರವಾಗಿ ಕೆಲಸ ಮಾಡುವಂತೆ ಬಿಜೆಪಿ ನಾಯಕರು ಆಫರ್ ಕೊಟ್ಟಿದ್ದರು. ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುತ್ತೇವೆ, ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಆದರೆ, ನಾನು ಪಕ್ಷ ನಿಷ್ಠೆಯ ಕಾರಣದಿಂದಾಗಿ ಪಕ್ಷಕ್ಕೆ ಹೋಗಿಲ್ಲ" ಎಂದು ಟಿ. ಎನ್. ಜವರಾಯಿ ಗೌಡ ಹೇಳಿದರು.

59.30 ಕೋಟಿ ರೂ. ಒಡೆಯ
ಯಶವಂತಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಟಿ. ಎನ್. ಜವರಾಯಿ ಗೌಡ 59.03 ಕೋಟಿ ರೂ. ಆಸ್ತಿ ಒಡೆಯರು. ಚರಾಸ್ತಿ 15.93 ಕೋಟಿ ರೂ., ಪತ್ನಿ ಗಾಯತ್ರಿ ಬಳಿ 8.33 ಕೋಟಿ ಆಸ್ತಿ ಇದೆ. 44.37 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಒಟ್ಟು 32 ಕೋಟಿ ಸಾಲವಿದೆ ಎಂದು ಚುನಾವಣಾ ಅಫಿಡೆವಿಟ್‌ನಲ್ಲಿ ಘೋಷಣೆ ಮಾಡಿದ್ದಾರೆ.

ಎರಡು ಬಾರಿ ಸೋಲು
ಟಿ. ಎನ್. ಜವರಾಯಿ ಗೌಡ ಯಶವಂತಪುರ ಕ್ಷೇತ್ರದ ಜೆಡಿಎಸ್‌ನ ಪ್ರಭಾವಿ ನಾಯಕ. 2013ರ ಚುನಾವಣೆಯಲ್ಲಿ 91,280 ಮತ, 2018ರಲ್ಲಿ 104562 ಮತಗಳನ್ನು ಪಡೆದು ಎಸ್. ಟಿ. ಸೋಮಶೇಖರ್ ವಿರುದ್ಧ ಸೋತಿದ್ದರು. ಈ ಬಾರಿ ಉಪ ಚುನಾವಣೆಯಲ್ಲಿ ಮತ್ತೆ ಮುಖಾಮುಖಿಯಾಗಿದ್ದಾರೆ. ಆದರೆ, ಸೋಮಶೇಖರ್ ಬಿಜೆಪಿ ಅಭ್ಯರ್ಥಿ.












Click it and Unblock the Notifications