ಬೆಂಗಳೂರಿನ ಸಮೀಪ ಐಫೋನ್ 17 ಉತ್ಪಾದನೆ: ₹ 25,000 ಕೋಟಿ ಹೂಡಿಕೆ, ಈ ಭಾಗದಲ್ಲಿ ಭೂಮಿ ಬೆಲೆ ಹೆಚ್ಚಳ ನಿರೀಕ್ಷೆ!
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕುತಂತ್ರಗಳ ಹೊರತಾಗಿಯೂ ಬೆಂಗಳೂರು ಹಾಗೂ ಕರ್ನಾಟಕಕ್ಕೆ ವಿವಿಧ ಕ್ಷೇತ್ರಗಳಿಂದ ಹೂಡಿಕೆಯ ಮಹಾಪೂರವೇ ಹರಿದು ಬರುತ್ತಿದೆ. ಮಾತ್ರವಲ್ಲ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದಲ್ಲಿ ಕಂಪನಿಗಳನ್ನು ವಿಸ್ತರಣೆ ಮಾಡಬೇಡಿ ಎಂದು ಐಫೋನ್ ಸಂಸ್ಥೆಗೆ ಸೂಚನೆ ನೀಡಿದ್ದರು. ಇದರ ಹೊರತಾಗಿಯೂ ಬೆಂಗಳೂರಿನ ಸಮೀಪದಲ್ಲೇ ಐಫೋನ್ 17ರ ಉತ್ಪಾದನೆಗೆ ಧಮಾಕ ಬಂದಿದೆ. ಇದರಿಂದ ಬೆಂಗಳೂರು ಹಾಗೂ ಬೆಂಗಳೂರಿನ ಪ್ರಮುಖ ಪ್ರದೇಶದಲ್ಲಿ ಭೂಮಿ ಬೆಲೆ ಹೆಚ್ಚಳವಾಗುವ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಅಭಿವೃದ್ಧಿಯಾಗುವ ನಿರೀಕ್ಷೆಯೂ ಮೂಡಿದೆ. ಇದರ ವಿವರವನ್ನು ತಿಳಿಯೋಣ.
ವಿಶ್ವದ ಬಹುಬೇಡಿಕೆಯ ಫೋನ್‌ಗಳಲ್ಲಿ ಒಂದಾಗಿರುವ ಐಫೋನ್ 17 ಈಗ ಇರುವ ಮುಂದಿನ ನಿರೀಕ್ಷೆ. ಅದರ ಉತ್ಪಾದನೆ ಇದೀಗ ಕರ್ನಾಟಕದಲ್ಲಿಯೇ ನಡೆಯಲಿದೆ. ತೈವಾನೀಸ್ ಎಲೆಕ್ಟ್ರಾನಿಕ್ ಉತ್ಪಾದನಾ ದೈತ್ಯ ಫಾಕ್ಸ್‌ಕಾನ್ ಕರ್ನಾಟಕದ ರಾಜಧಾನಿ ಬೆಂಗಳೂರಿನ ಸಮೀಪದ ದೇವನಹಳ್ಳಿಯಲ್ಲಿ ತನ್ನ ಎರಡನೇ ಅತಿದೊಡ್ಡ ಉತ್ಪಾದನಾ ಘಟಕದಲ್ಲಿ ಆಪಲ್‌ನ ಐಫೋನ್ 17 ಉತ್ಪಾದನೆಯನ್ನು ಪ್ರಾರಂಭಿಸಿದೆ. ಫಾಕ್ಸ್‌ಕಾನ್ ಬೆಂಗಳೂರು ಘಟಕವು ಐಫೋನ್ 17 ಉತ್ಪಾದನೆ ಮಾಡುವುದರೊಂದಿಗೆ ಹೊಸ ಕಾರ್ಯಚಾರಣೆಯನ್ನು ಪ್ರಾರಂಭ ಮಾಡಿದೆ. ಈಗಾಗಲೇ ತಮಿಳುನಾಡಿನ ಚೆನ್ನೈನಲ್ಲೂ ಐಫೋನ್ 17 ಉತ್ಪಾದನೆ ಪ್ರಾರಂಭವಾಗಿದೆ.

ಫಾಕ್ಸ್‌ಕಾನ್ ಪ್ರಪಂಚದಾದ್ಯಂತ ಐಫೋನ್‌ಗಳ ಉತ್ಪಾದನೆ ಮಾಡುವ ಪ್ರಮುಖ ಹಾಗೂ ಅತ್ಯಂತ ದೊಡ್ಡ ತಯಾರಕ ಸಂಸ್ಥೆಯಾಗಿದೆ. ಬೆಂಗಳೂರಿನಲ್ಲಿ ಪ್ರಾರಂಭವಾಗುತ್ತಿರುವ ಕಾರ್ಖಾನೆಯು ಚೀನಾದ ಹೊರಗೆ ಕಂಪನಿಗೆ ಎರಡನೇ ಅತಿದೊಡ್ಡ ಉತ್ಪಾದನಾ ಘಟಕವಾಗಿದೆ ಕಂಪನಿಯು ಭಾರತದಲ್ಲಿ ಘಟಕವನ್ನು ಸ್ಥಾಪಿಸಲು ಅಂದಾಜು 25,000 ಕೋಟಿ ರೂಪಾಯಿ ಮೊತ್ತದ ಬೃಹತ್ ಹೂಡಿಕೆಯನ್ನು ಮಾಡಿದೆ ಎಂದು ಹೇಳಲಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕರ್ನಾಟಕದ ಐಫೋನ್‌ಗಳು: ಇನ್ನು ಈ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿರುವ ಸಚಿವ ಎಂ.ಬಿ ಪಾಟೀಲ್ ಅವರು, ಬೆಂಗಳೂರು ಸಮೀಪದ ದೇವನಹಳ್ಳಿಯ ಹೊಸ ಘಟಕದಲ್ಲಿ ಫಾಕ್ಸ್ ಕಾನ್ ತನ್ನ ಇತ್ತೀಚಿನ #iPhone17 ಉತ್ಪಾದನೆಯನ್ನು ಪ್ರಾರಂಭಿಸಿರುವುದನ್ನು ಹರ್ಷದಿಂದ ಹಂಚಿಕೊಳ್ಳುತ್ತಿದ್ದೇನೆ. ಇದು ಚೀನಾದ ಹೊರಗಿನ ಫಾಕ್ಸ್ ಕಾನ್ ನ ಎರಡನೇ ಅತಿದೊಡ್ಡ ಘಟಕವಾಗಿದೆ. $2.8 ಬಿಲಿಯನ್ (₹25,000 ಕೋಟಿ) ಹೂಡಿಕೆಯಿಂದ ನಿರ್ಮಿತವಾಗಿದೆ ಎಂದಿದ್ದಾರೆ.
ಈ ಸಾಧನೆ ಕೇವಲ ಸ್ಮಾರ್ಟ್ ಫೋನ್‌ಗಳ ಅಸೆಂಬ್ಲಿ ಕುರಿತು ಮಾತ್ರವಲ್ಲ, ಕರ್ನಾಟಕವು ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುತ್ತಿರುವುದಕ್ಕೆ ಮತ್ತೊಂದ ಮಹತ್ವದ ಸಾಕ್ಷಿಯಾಗಿದೆ. ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುತ್ತಿದ್ದು, ಪೂರೈಕೆ ಸರಪಳಿಗಳು ಬಲವಾಗುತ್ತಿವೆ.
ಭಾರತದ ರಫ್ತು ಗುರಿಗಳಿಗೆ ಹೊಸ ಶಕ್ತಿ ಸಿಗುತ್ತಿದೆ. ಆಪಲ್ ಭಾರತದ ತನ್ನ ಉತ್ಪಾದನೆಯನ್ನು ವೇಗವಾಗಿ ವಿಸ್ತರಿಸುತ್ತಿದ್ದು, "ಭಾರತವೇ ವಿಶ್ವದ ಐಫೋನ್ ರಾಜಧಾನಿ" ಆಗುವ ಹಾದಿಯಲ್ಲಿ #ನಮ್ಮಬೆಂಗಳೂರು ನಿರ್ಣಾಯಕ ಪಾತ್ರ ವಹಿಸಲಿದೆ. ಆರಂಭಿಕ ಸವಾಲುಗಳಿದ್ದರೂ, ಫಾಕ್ಸ್ ಕಾನ್ ಕಾರ್ಯಾಚರಣೆಗಳು ಯಶಸ್ವಿಯಾಗಿ ಮುಂದುವರಿಯುತ್ತಿದೆ. ಇದರೊಂದಿಗೆ ಕರ್ನಾಟಕದ ಬಲಿಷ್ಠ ಕೈಗಾರಿಕಾ ಪರಿಸರದ ಮೇಲೆ ಹೂಡಿಕೆದಾರರ ವಿಶ್ವಾಸ ಮತ್ತಷ್ಟು ವೃದ್ಧಿಯಾಗುತ್ತಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications