'ಮೇಡೇ' ಘೋಷಣೆ; ಗುವಾಹಟಿ-ಚೆನ್ನೈ ಇಂಡಿಗೋ ವಿಮಾನ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ
Indigo flight emergency landing: ಇತ್ತೀಚೆಗಷ್ಟೇ ಅಹಮದಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ 240ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಒಂದಲ್ಲ ಒಂದು ಅಡೆತಡೆಗಳು ಎದುರಾಗುತ್ತಲಿವೆ. ಗುರುವಾರ ಪೈಲಟ್‌ಗಳು ಮೇಡೇ ಎಂದು ಘೋಷಿಸಿದ ಬಳಿಕ ಗುವಾಹಟಿ-ಚೆನ್ನೈ ಇಂಡಿಗೋ ವಿಮಾನ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇತ್ತೀಚೆಗಷ್ಟೇ ಲಂಡನ್‌ಗೆ ಪ್ರಯಾಣ ಬೆಳೆಸಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್‌ನಲ್ಲಿ ಟೇಕ್ ಆಫ್ ಆದ ಸ್ವಲ್ಪ ಸಮಯದ ಬಳಿಕ ಅಪಘಾತಕ್ಕೊಳಗಾಗಿತ್ತು. ಆ ವೇಳೆ ಸಹ ಪೈಲಟ್ ಮೇಡೇ ಘೋಷಿಸಿದ್ದರು. ಆದರೆ, ಅದಕ್ಕೆ ಪ್ರತಿಕ್ರಿಯಿಸುವ ಮುನ್ನವೇ ವಿಮಾನ ಅಪಘಾತಕ್ಕೆ ಒಳಗಾಗಿತ್ತು. ಇದಾದ ಕೆಲವು ದಿನಗಳ ಬಳಿಕ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಇಂಡಿಗೋ ವಿಮಾನ ಭೂಸ್ಪರ್ಷ ಮಾಡಿರುವ ಈ ಘಟನೆ ಗುರುವಾರ ರಾತ್ರಿಯೇ ನಡೆದಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಮೇಡೇ ಕರೆ ಬಂದ ಬಳಿಕ ಎಟಿಸಿ ವಿಮಾನ ನಿಲ್ದಾಣದ ಸಿಬ್ಬಂದಿಗೆ ಎಚ್ಚರಿಕೆ ನೀಡಿತು. ಆಗ ಅವರು ಕಾರ್ಯಪ್ರವೃತ್ತರಾದರು. ವೈದ್ಯಕೀಯ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದರು. ಈ ವಿಮಾನವು ಗುರುವಾರ ರಾತ್ರಿ 8.20ಕ್ಕೆ ಸುರಕ್ಷಿತವಾಗಿ ಇಳಿಯಿತು ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಗಳಿಂದ ತಿಳಿದುಬಂದಿದೆ.
ಇನ್ನು ಇಂಧನದ ಪರೀಕ್ಷೆ ಮಾಡಿಕೊಳ್ಳದೆ ವಿಮಾನ ಹಾರಾಟಕ್ಕೆ ಮುಂದಾದ ಹಿನ್ನೆಲೆ ಇಬ್ಬರು ಪೈಲಟ್ಗಳನ್ನೂ ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ. ಆದರೆ. ಇಂಡಿಗೋ ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಮತ್ತೊಂದೆಡೆ ಇದೇ ರೀತಿ ಶುಕ್ರವಾರ ಮಧುರೈಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನ ತಾಂತ್ರಿಕ ದೋಷವನ್ನು ಅನುಭವಿಸಿತು. ನಂತರ ಚೆನ್ನೈಗೆ ಹಿಂತಿರುಗಲು ಮತ್ತು ಲ್ಯಾಂಡ್ ಆಗಲು ಅನುಮತಿ ಕೋರಿತು. ಸುಮಾರು 68 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಸುರಕ್ಷಿತವಾಗಿ ಇಳಿದಿತ್ತು ಎಂದು ತಿಳಿದುಬಂದಿದೆ.
ಯಾವಾಗ 'ಮೇಡೇ' ಬಳಕೆ ಮಾಡಲಾಗುತ್ತದೆ?: 'ಮೇಡೇ' ಪದವು ಫ್ರೆಂಚ್ ಮೂಲದಾಗಿದ್ದು, ಇದರ ಅರ್ಥ ನನಗೆ ಸಹಾಯ ಮಾಡಿ ಎನ್ನುವುದಾಗಿದೆ. ತುರ್ತು ಪರಿಸ್ಥಿತಿ ಬಗ್ಗೆ ವಿಮಾನ ಸಂಚಾರ ನಿಯಂತ್ರಣ ಅಥವಾ ಇತರ ವಿಮಾನಗಳಿಗೆ ತಿಳಿಸಲು 'ಮೇಡೇ' ಅನ್ನು ಬಳಸುತ್ತಾರೆ. ಇದು ತಕ್ಷಣದ ಅಗತ್ಯವಿರುವ ಸಹಾಯದ ಬಗ್ಗೆ ಸೂಚಿಸುತ್ತದೆ.
ಯಾವುದೇ ವಿಮಾನ ಅಥವಾ ಹೆಲಿಕಾಪ್ಟರ್ ತುರ್ತು ಸಂದರ್ಭಗಳಲ್ಲಿ ಬಳಕೆ ಈ ಪದವನ್ನು ಬಳಕೆ ಮಾಡಲಾಗುತ್ತದೆ. ತುರ್ತಾಗಿ ನನಗೆ ಸಹಾಯ ಮಾಡಿ ಎಂಬುದನ್ನು ಸುಲಭವಾಗಿ ತಿಳಿಸಲು ಈ ಪದವನ್ನು ಬಳಕೆ ಮಾಡಲು ಆರಂಭಿಸಿದರು. ಇದರ ಉದ್ದೇಶ ಸುಲಭವಾಗಿ ಸಂದೇಶ ಕಳುಹಿಸುವುದು, ಸರಳವಾಗಿ ಅರ್ಥ ಮಾಡಿಸುವುದಾಗಿದೆ.
ಹೇಗೆ ಸಹಾಯ ಆಗಲಿದೆ?: ಯಾವುದೇ ವಿಮಾನದ ಪೈಲಟ್ ಮೇಡೇ ಎಂದು ಸಂದೇಶ ಕಳುಹಿಸುತ್ತುದ್ದಾರೆ ಅಂದ್ರೆ ಅವರು ತಕ್ಷಣದ ಸಹಾಯ ಕೇಳುತ್ತಿದ್ದಾರೆ. ಮಾರಣಾಂತಿಕ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡುತ್ತಿದ್ದಾರೆ ಎಂಬರ್ಥವಾಗಿದೆ. ಈ ಸಂದೇಶ ಕಳುಹಿಸಿದ ಸಮಯದಲ್ಲಿ ಅನಿವಾರ್ಯವ ಅಲ್ಲದ ರೇಡಿಯೋ ಎಲ್ಲಾ ಸಂವಹನಗಳೂ ಸ್ಥಗಿತಗೊಳ್ಳಬೇಕು ಮತ್ತು ಎಟಿಸಿ ಎಂದು ಕರೆಯಲ್ಪಡುವ ವಾಯು ಸಂಚಾರ ನಿಯಂತ್ರಣವು ಆ ಕರೆಗೆ ಆದ್ಯತೆಯನ್ನು ನೀಡುತ್ತದೆ.












Click it and Unblock the Notifications