ಅಮೆರಿಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್, ಬಿಡುವಿನ ವೇಳೆಯಲ್ಲಿ ಮೆಹಂದಿ ಆರ್ಟಿಸ್ಟ್: 10 ಗಂಟೆಗೆ 1 ಲಕ್ಷ ರೂ. ಗಳಿಸುವ ಭಾರತದ ಯುವತಿ
ವಿದೇಶಗಳಿಗೆ ಹೋಗಬೇಕು, ಹೆಚ್ಚಿನ ಸಂಬಳಕ್ಕೆ ದುಡಿಯಬೇಕು ಎನ್ನುವುದ ಭಾರತೀಯ ಅದೆಷ್ಟೋ ವಿದ್ಯಾರ್ಥಿಗಳು ಉದ್ಯೋಗಾಂಕ್ಷಿಗಳ ಕನಸು. ಆದ್ರೆ ಅಲ್ಲಿಗೆ ಹೋದ ನಂತರ ಅಲ್ಲಿನ ಜೀವನ ವೆಚ್ಚವನ್ನ ನಿಭಾಯಿಸಲು ಏನು ಮಾಡಬೇಕು. ಕೇವಲ ಒಂದು ಉದ್ಯೋಗವನ್ನಾ ನಂಬಿಕೊಂಡರೇ ಸಾಕಾಗುತ್ತದೆಯೇ?... ಈ ರೀತಿ ಹಲವು ಗೊಂದಲಗಳಿರುತ್ತದೆ. ಆದ್ರೆ ಭಾರತದ ಈ ಯುವತಿ ಅಮೆರಿಕಾದಲ್ಲಿ ಗಂಟೆಗೆ ಲಕ್ಷ ಲಕ್ಷ ಗಳಿಸುತ್ತಿದ್ದಾರೆ ಎಂದರೆ ನೀವು ನಂಬುತ್ತೀರಾ?
ಹೌದು, ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ತಮ್ಮ ದೈನಂದಿನ ವೆಚ್ಚವನ್ನ ನೀಭಾಯಿಸಲು ವೃತ್ತಿಪರ ಕೆಲಸಗಳ ಜೊತೆಗೆ ತಮ್ಮ ಆಸಕ್ತಿ ಮತ್ತು ಪ್ರತಿಭೆಯನ್ನ ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಿಕೊಳ್ಳುತ್ತಿರುವ ಉದಾಹರಣೆಗಳು ಹೆಚ್ಚುತ್ತಿವೆ. ಅದೇ ಹಾದಿಯಲ್ಲಿ ಸಾಗಿರುವ ಭಾರತೀಯ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಪ್ರಿಯಾಂಕಾ ಜೈನ್, ಅಮೆರಿಕದಲ್ಲಿ ಪೂರ್ಣಾವಧಿ ಉದ್ಯೋಗದ ಜೊತೆಗೆ ಮೆಹಂದಿ ಆರ್ಟಿಸ್ಟ್ ಆಗಿ ಸೈಡ್ ಬಿಸಿನೆಸ್ ನಡೆಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ತಮ್ಮ ಕಲೆಗೆ ಸಿಗುತ್ತಿರುವ ಮನ್ನಣೆ ಮತ್ತು ಗಳಿಕೆಯ ಕುರಿತು ಅವರು ಹಂಚಿಕೊಂಡಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.
ಸಾಫ್ಟ್‌ವೇರ್ ಎಂಜಿನಿಯರಿಂಗ್ ಜೊತೆಗೆ ಸೈಡ್ ಬಿಸಿನೆಸ್
ಪ್ರಿಯಾಂಕಾ ಜೈನ್ ಅವರು ಅಮೆರಿಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. "ನನ್ನ ಮುಖ್ಯ ಆದಾಯ ಸಾಫ್ಟ್‌ವೇರ್ ಉದ್ಯೋಗದಿಂದಲೇ ಬರುತ್ತಿದೆ. ಆದರೆ ಮೆಹಂದಿ ಹಾಕುವುದು ನನ್ನ ಹವ್ಯಾಸ ಮತ್ತು ಪ್ಯಾಷನ್. ನನ್ನ ಈ ಆಸಕ್ತಿಯನ್ನೇ ನಾನು ಬಿಡುವಿನ ವೇಳೆಯಲ್ಲಿ ಸಣ್ಣ ಸೈಡ್ ಬಿಸಿನೆಸ್ ರೂಪದಲ್ಲಿ ಮುಂದುವರಿಸುತ್ತಿದ್ದೇನೆ. ಇದು ನನಗೆ ನೆಮ್ಮದಿಯ ಜೊತೆಗೆ ಉತ್ತಮ ಹೆಚ್ಚುವರಿ ಆದಾಯವನ್ನೂ ತಂದುಕೊಡುತ್ತಿದೆ" ಎಂದು ಅವರು ತಮ್ಮ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ತಿಳಿಸಿದ್ದಾರೆ.
ಕೇವಲ ಕಚೇರಿಯ ಕೆಲಸಕ್ಕೆ ಸೀಮಿತವಾಗದೆ, ವಾರಾಂತ್ಯಗಳಲ್ಲಿ ಹಾಗೂ ಬಿಡುವಿನ ಸಮಯದಲ್ಲಿ ಮೆಹಂದಿ ಆರ್ಡರ್‌ಗಳನ್ನು ತೆಗೆದುಕೊಂಡು ಅವರು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಬ್ರೈಡಲ್ ಬುಕ್ಕಿಂಗ್ ಮತ್ತು ಭರ್ಜರಿ ಮೆಹಂದಿ ಆದಾಯ
ಅಮೆರಿಕದಲ್ಲಿ ಮೆಹಂದಿ ಕಲೆಗೆ ಇರುವ ಬೇಡಿಕೆಯ ಬಗ್ಗೆ ಮಾತನಾಡಿರುವ ಪ್ರಿಯಾಂಕಾ, ತಮ್ಮ ಗಳಿಕೆಯ ವಿವರಗಳನ್ನ ಮುಕ್ತವಾಗಿ ಬಿಚ್ಚಿಟ್ಟಿದ್ದಾರೆ. ಮೆಹಂದಿ ಹಾಕಲು ಅವರು ಪ್ರತಿ ಗಂಟೆಗೆ 100 ಡಾಲರ್‌ನಷ್ಟು ಹಣ ತೆಗೆದುಕೊಳ್ಳುತ್ತಾರೆ. ಇದು ಭಾರತೀಯ ರೂಪಾಯಿ ಮೌಲ್ಯದಲ್ಲಿ ಸರಿಸುಮಾರು 9,000 ದಿಂದ 10,000 ರೂಪಾಯಿಗಳಾಗುತ್ತದೆ. ಅಷ್ಟೇ ಅಲ್ಲದೆ, ಗ್ರಾಹಕರು ಅವರ ಕೆಲಸ ಮೆಚ್ಚಿ ಶೇಕಡಾ 20ರಷ್ಟು ಹೆಚ್ಚುವರಿ ಟಿಪ್ಸ್ ಕೂಡ ನೀಡುತ್ತಾರಂತೆ.
ವಿಶೇಷವಾಗಿ ಮದುವೆ ಸಮಾರಂಭಗಳು ಮತ್ತು ವಧುವಿನ ಮೆಹಂದಿ ಅಲಂಕಾರದಂತಹ ದೊಡ್ಡ ಪ್ರಾಜೆಕ್ಟ್‌ಗಳಿಗೆ ಭಾರಿ ಮೊತ್ತದ ಸಂಭಾವನೆ ಸಿಗುತ್ತದೆ. ಕೇವಲ 10 ಗಂಟೆಗಳ ಬ್ರೈಡಲ್ ಮೆಹಂದಿ ಕೆಲಸಕ್ಕೆ ಅವರು ಸುಮಾರು 1 ಲಕ್ಷ ರೂಪಾಯಿಗಳವರೆಗೂ ಗಳಿಸುತ್ತಾರೆ. ಆದರೆ, ಅಮೆರಿಕದಲ್ಲಿ ಗಳಿಕೆ ಹೆಚ್ಚಿರುವಂತೆಯೇ ಅಲ್ಲಿನ ಜೀವನ ವೆಚ್ಚವೂ ಅಧಿಕವಾಗಿರುತ್ತದೆ ಎಂಬುದನ್ನು ಅವರು ನೆನಪಿಸಿದ್ದಾರೆ.
ಅಮೆರಿಕದಲ್ಲಿ ಕಲಾವಿದರಿಗೆ ಸಿಗುವ ಗೌರವ: ಭಾರತದೊಂದಿಗಿನ ಹೋಲಿಕೆ
ಕೇವಲ ಹಣ ಗಳಿಸುವುದಷ್ಟೇ ಅಲ್ಲದೆ, ಈ ಕೆಲಸ ತಮಗೆ ನೀಡುವ ಗೌರವ ಮತ್ತು ಆತ್ಮತೃಪ್ತಿಯೇ ಮುಖ್ಯ ಎನ್ನುತ್ತಾರೆ ಪ್ರಿಯಾಂಕಾ. "ಭಾರತಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಕಲಾವಿದರಿಗೆ ಮತ್ತು ಅವರ ಪ್ರತಿಭೆಗೆ ಸಿಗುವ ಗೌರವ ಅತ್ಯಂತ ದೊಡ್ಡದು. ಭಾರತದಲ್ಲಿ ಮೆಹಂದಿ ಹಾಕುವ ವೃತ್ತಿಯನ್ನ ಇಂದಿಗೂ ಒಂದು ಪ್ರತಿಷ್ಠಿತ ಕೆಲಸ ಎಂದು ಪರಿಗಣಿಸುವುದು ಕಡಿಮೆ. ಆದರೆ, ಅಮೆರಿಕದಲ್ಲಿ ನನ್ನನ್ನು ಒಬ್ಬ ಗೌರವಾನ್ವಿತ ಕಲಾವಿದೆಯಾಗಿ ಕಾಣುತ್ತಾರೆ. ಇಲ್ಲಿ ಯಾರೂ ನನ್ನ ಕೆಲಸವನ್ನು ಕೀಳಾಗಿ ಕಂಡಿಲ್ಲ. ಹಣಕ್ಕಿಂತ ಹೆಚ್ಚಾಗಿ ನನಗೆ ಈ ಗೌರವ ಮತ್ತು ಮನ್ನಣೆಯೇ ದೊಡ್ಡ ತೃಪ್ತಿ ನೀಡಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ
ಪ್ರಿಯಾಂಕಾ ಜೈನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಸದ್ಯ ಭಾರೀ ವೈರಲ್ ಆಗಿದ್ದು, ಬರೋಬ್ಬರಿ 1 ಕೋಟಿಗೂ ಅಧಿಕ ವೀಕ್ಷಣೆಗಳನ್ನ ಪಡೆದುಕೊಂಡಿದೆ. ತಮ್ಮ ಪ್ರತಿಭೆಯನ್ನ ಬಳಸಿಕೊಂಡು ವಿದೇಶದ ನೆಲದಲ್ಲಿಯೂ ಭಾರತೀಯ ಸಾಂಪ್ರದಾಯಿಕ ಕಲೆಯನ್ನ ಎತ್ತಿಹಿಡಿಯುತ್ತಿರುವ ಅವರ ಕಾರ್ಯಕ್ಕೆ ನೆಟ್ಟಿಗರು ಮುಕ್ತಕಂಠದಿಂದ ಪ್ರಶಂಸಿಸುತ್ತಿದ್ದಾರೆ.


Click it and Unblock the Notifications
