IRF: ಗೋವಾ ರೇಸ್‌ಗೆ ಸಜ್ಜಾದ 'ಕಿಚ್ಚಾಸ್ ಕಿಂಗ್ಸ್ ಬೆಂಗಳೂರು'; ತಂಡದ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದಿಷ್ಟು
ಬೆಂಗಳೂರು: ಗೋವಾದ ರಸ್ತೆಗಳು ಇದೇ ಫೆಬ್ರವರಿ 14 ಮತ್ತು 15ರಂದು ಇಂಡಿಯನ್ ರೇಸಿಂಗ್ ಫೆಸ್ಟಿವಲ್ (IRF) ಗಾಗಿ ಹೈ-ಇಂಟೆನ್ಸಿಟಿ ರೇಸಿಂಗ್ ಕಣವಾಗಿ ಬದಲಾಗಲಿವೆ. ಸ್ಟ್ರೀಟ್ ರೇಸಿಂಗ್ ಎನ್ನುವುದು ಸಮಯಸ್ಪೂರ್ತಿ, ಧೈರ್ಯ ಮತ್ತು ಸಂಯಮದ ಪರಮ ಪರೀಕ್ಷೆಯಾಗಿದೆ. ಇವೇ ಮೌಲ್ಯಗಳು 'ಕಿಚ್ಚಾಸ್ ಕಿಂಗ್ಸ್ ಬೆಂಗಳೂರು' (Kichcha's Kings Bengaluru) ತಂಡವನ್ನು ನಿರ್ಧರಿಸುತ್ತವೆ ಎಂದು ತಂಡದ ಮಾಲೀಕರಾದ ನಟ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ.
ಪರ್ಮನೆಂಟ್ ಸರ್ಕ್ಯೂಟ್‌ನಲ್ಲಿ ಎಲ್ಲವೂ ನಿಯಂತ್ರಣದಲ್ಲಿ ಇರುತ್ತದೆ. ಆದರೆ ಸ್ಟ್ರೀಟ್ ರೇಸಿಂಗ್ ಮಾನಸಿಕ ಸ್ಥಿತಿಯನ್ನೇ ಸಂಪೂರ್ಣವಾಗಿ ಬದಲಿಸುತ್ತದೆ. ಇಲ್ಲಿ ಕೇವಲ ಪರಿಪೂರ್ಣತೆ ಮುಖ್ಯವಲ್ಲ. ಎದುರಾಗುವ ಸವಾಲುಗಳನ್ನು ಎದುರಿಸಿ ನಿಲ್ಲುವ ಚಾಕಚಕ್ಯತೆ ಅತ್ಯಂತ ಮುಖ್ಯ. ಇದು ಕೇವಲ ರೇಸ್ ಅಲ್ಲ, ಇದು ಮನೋಭಾವ ಮತ್ತು ಧೈರ್ಯದ ಪರೀಕ್ಷೆ. ಇಡೀ ನಗರವೇ ಬೆಂಬಲಿಸಲು ಮುಂದಾದಾಗ ತಂಡವೂ ಅದಕ್ಕೆ ತಕ್ಕಂತೆ ಸ್ಪರ್ಧೆ ಒಡ್ಡಬೇಕಾಗುತ್ತದೆ ಎಂದು ಸುದೀಪ್ ಹೇಳಿದ್ದಾರೆ.

ನಟ ಸುದೀಪ್ ಅವರ ಪ್ರಕಾರ, ಸ್ಟ್ರೀಟ್ ರೇಸಿಂಗ್ ಮೋಟಾರ್‌ಸ್ಪೋರ್ಟ್ ಜನರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ. ಈ ಕ್ರೀಡೆಯನ್ನು ಮುಚ್ಚಿದ ಸರ್ಕ್ಯೂಟ್‌ಗಳಿಂದ ಹೊರತಂದು ನಗರದ ಹೃದಯಭಾಗಕ್ಕೆ ಕರೆದೊಯ್ಯುತ್ತದೆ. ಇದು ಭಾರೀ ಅಬ್ಬರದ ಸ್ಪರ್ಧೆಯಾಗಿದೆ. ಇಲ್ಲಿ ಸಣ್ಣ ತಪ್ಪಿಗೂ ಜಾಗವಿಲ್ಲ. ಜನರ ಶಕ್ತಿಯೇ ತಂಡವನ್ನು ಸದಾ ಜಾಗೃತವಾಗಿಯೂ ಶಾರ್ಪ್ ಆಗಿಯೂ ಇಡುತ್ತದೆ. ಆ ಶಕ್ತಿ ಪ್ರತಿಕ್ಷಣವೂ ಎಲ್ಲರನ್ನೂ ಎಚ್ಚರದಲ್ಲಿರಿಸುತ್ತದೆ.
ಗೋವಾ ಸ್ಟ್ರೀಟ್ ರೇಸ್‌ಗೆ ಸಿದ್ಧತೆ ನಡೆಸುವುದು ಬೆಂಗಳೂರು ಮೂಲದ ಈ ತಂಡಕ್ಕೆ ಹೊಸ ಸವಾಲಾಗಿದೆ. ಈ ಸರ್ಕ್ಯೂಟ್‌ಗೆ ಸಂಬಂಧಿಸಿದ ಯಾವುದೇ ಹಳೆಯ ಡೇಟಾ ಲಭ್ಯವಿಲ್ಲ. ನಾವು ನಮ್ಮ ಚಾಲಕರ ಅಂತಃಪ್ರಜ್ಞೆ, ಅನುಭವ ಮತ್ತು ಶಿಸ್ತಿನ ಮೇಲೆ ನಂಬಿಕೆ ಇಟ್ಟಿದ್ದೇವೆ. ಅತಿಯಾದ ವೇಗಕ್ಕಿಂತ ಇಲ್ಲಿ ನಿಖರತೆ ಮತ್ತು ನಿಯಂತ್ರಣವೇ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ. ಎಲ್ಲವೂ ಕಂಟ್ರೋಲ್ ಮತ್ತು ಕ್ಲಾರಿಟಿ ಮೇಲೆ ಅವಲಂಬಿತವಾಗಿದೆ ಎಂದರು.
ಈ ಅಭಿಯಾನದ ಮುಂಚೂಣಿಯಲ್ಲಿ ಫ್ರೆಂಚ್ ರೇಸರ್ ಸಚೆಲ್ ರೊಟ್ಗೆ (Sachel Rotge) ಇದ್ದಾರೆ. ಅವರು ಯುರೋಪಿನ ಉದಯೋನ್ಮುಖ ಸಿಂಗಲ್-ಸೀಟರ್ ಪ್ರತಿಭೆಯಾಗಿದೆ. 2025ರ ಎಫ್4 ಇಂಡಿಯಾ ವೈಸ್ ಚಾಂಪಿಯನ್. RPPLನ ಎಫ್4 ಶೂಟೌಟ್ ಕಾರ್ಯಕ್ರಮದ ಮೂಲಕ ಪೂರ್ಣ ಪ್ರಮಾಣದ ವಿದ್ಯಾರ್ಥಿ ವೇತನವನ್ನು ಕೂಡ ಪಡೆದಿದ್ದಾರೆ. ಒಬ್ಬ ಯುವ ಯುರೋಪಿಯನ್ ರೇಸರ್ ಭಾರತವನ್ನು ತನ್ನ ಪ್ರತಿಭೆ ಸಾಬೀತುಪಡಿಸುವ ವೇದಿಕೆಯಾಗಿ ಆಯ್ಕೆ ಮಾಡುತ್ತಿರುವುದು, ಜಾಗತಿಕ ಮಟ್ಟದ ಪ್ರತಿಭೆಗಳಿಗೆ ನಮ್ಮ ರೇಸಿಂಗ್ ವ್ಯವಸ್ಥೆಯ ಮೇಲೆ ಇರುವ ವಿಶ್ವಾಸವನ್ನು ತೋರಿಸುತ್ತದೆ ಎಂದು ವಿವರಿಸಿದರು.
ತಂಡದಲ್ಲಿದ್ದಾರೆ ಕಿರಿಯ ವಯಸ್ಸಿನ ರೇಸ್ ವಿಜೇತ
ಬೆಂಗಳೂರು ಹಾಗೂ ಭಾರತದ ಭರವಸೆಯ ಆಶಾಕಿರಣವಾಗಿ ರುಹಾನ್ ಆಳ್ವಾ (Ruhaan Alva) ಮುಂದಿದ್ದಾರೆ. ಅವರು ಇಂಡಿಯನ್ ರೇಸಿಂಗ್ ಲೀಗ್ ಇತಿಹಾಸದಲ್ಲೇ ಅತಿ ಕಿರಿಯ ವಯಸ್ಸಿನ ರೇಸ್ ವಿಜೇತ ಹಾಗೂ 2024ರ ಎಫ್4 ಇಂಡಿಯಾ ವೈಸ್ ಚಾಂಪಿಯನ್. ಈಗಾಗಲೇ ಬ್ರಿಟನ್‌ನ ರೇಸ್‌ಗಳಲ್ಲಿ ಪೋಡಿಯಂ ಫಿನಿಶ್ ಸಾಧಿಸುವ ಮೂಲಕ ಜಾಗತಿಕ ಗಮನ ಸೆಳೆದಿದ್ದಾರೆ. 'ರುಹಾನ್ ಭವಿಷ್ಯದ ಪ್ರತೀಕ - ಯುವ, ನಿರ್ಭಯಿ ಮತ್ತು ಜಾಗತಿಕ ದೃಷ್ಟಿಕೋನ ಹೊಂದಿರುವವನು. ಬೆಂಗಳೂರು ಜನರು ಅವನ ಪ್ರಯಾಣವನ್ನು ನೋಡಿ ಹೆಮ್ಮೆಪಡಬೇಕು' ಎಂದು ಸುದೀಪ್ ಹೇಳಿದರು.
ತಂಡಕ್ಕೆ ಇನ್ನಷ್ಟು ಬಲ ತುಂಬುತ್ತಿರುವವರು ಕೈಲ್ ಕುಮಾರನ್. ಅವರು ಮಧ್ಯ ಪ್ರಾಚ್ಯದಾದ್ಯಂತ ಕಾರ್ಟಿಂಗ್‌ನಲ್ಲಿ ವೈಸ್ ವರ್ಲ್ಡ್ ಚಾಂಪಿಯನ್ ಆಗಿದ್ದು, ಅಂತಾರಾಷ್ಟ್ರೀಯ ಮಟ್ಟದ ತೀವ್ರ ಪೈಪೋಟಿಗಳ ಮೂಲಕ ತಮ್ಮ ರೇಸಿಂಗ್ ಕೌಶಲವನ್ನು ರೂಪಿಸಿಕೊಂಡಿದ್ದಾರೆ. 'ಕೈಲ್‌ನ ವಿಶ್ವಮಟ್ಟದ ಅನುಭವವು ಪಕ್ವತೆ ಮತ್ತು ಶಾಂತತೆಯನ್ನು ತರುತ್ತದೆ. ಇವು ಸ್ಟ್ರೀಟ್ ರೇಸಿಂಗ್‌ಗೆ ಅತ್ಯಗತ್ಯವಾದ ಗುಣಗಳು ಎಂದು ಸುದೀಪ್ ಅಭಿಪ್ರಾಯಪಟ್ಟರು.
ರೇಸ್‌ಗೆ ಇಳಿಯಲಿದ್ದಾರೆ ತಂಡದ ಮಹಿಳಾ ಚಾಲಕಿ
ತಂಡವನ್ನು ಪೂರ್ಣಗೊಳಿಸುವ ಬ್ರಿಟಿಷ್ ರೇಸರ್ ಹಾಗೂ ತಂಡದ ಮಹಿಳಾ ಚಾಲಕಿ ಜೆಮ್ ಹೆಪ್ವರ್ತ್ ಅವರು, ರಾಫಾ ರೇಸಿಂಗ್ (Rafa Racing) ತಂಡದ ಚಾಲಕಿಯಾಗಿದ್ದಾರೆ. ಮೆಕ್ಲಾರೆನ್ ಟ್ರೋಫಿ (McLaren Trophy) ಸ್ಪರ್ಧೆಯಲ್ಲಿ ಪೋಡಿಯಂ ಫಿನಿಶ್ ಸಾಧಿಸಿರುವ ಅನುಭವ ಹೊಂದಿದ್ದಾರೆ. ವಿಶ್ವದ ಅತ್ಯಂತ ಕಠಿಣ ರೇಸಿಂಗ್ ಗ್ರಿಡ್‌ಗಳಲ್ಲಿ ಸ್ಪರ್ಧಿಸಿದ ಅನುಭವವನ್ನು ಜೆಮ್ ತಂಡಕ್ಕೆ ತರುತ್ತಾರೆ. ಅಂತಹ ಅನುಭವವು ಗ್ಯಾರೇಜ್ ಒಳಗಿನ ಮಟ್ಟವನ್ನು ಹೆಚ್ಚಿಸಿ, ಪ್ರತಿಯೊಬ್ಬರನ್ನೂ ಇನ್ನಷ್ಟು ಉತ್ತಮವಾಗಿ ಪ್ರದರ್ಶನ ನೀಡಲು ಪ್ರೇರೇಪಿಸುತ್ತದೆ ಎಂದರು.
ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡ ಗೋವಾ ವಾರಾಂತ್ಯಕ್ಕೆ ಕಾಲಿಡುತ್ತಿದ್ದಂತೆ, ತಂಡವು ನಗರದ ಚೈತನ್ಯವನ್ನೇ ತಮ್ಮೊಂದಿಗೆ ಕೊಂಡೊಯ್ಯಲಿದೆ. ಬೆಂಗಳೂರಿನ ಸ್ಪಿರಿಟ್ ಅನ್ನು ನಾವು ಟ್ರ್ಯಾಕ್ ಮೇಲೆ ತರಲಿದ್ದೇವೆ. ಇದೇ ಹುಮ್ಮಸ್ಸಿನೊಂದಿಗೆ ನಾವು ಗೋವಾದಲ್ಲಿನ ರೇಸ್‌ಗೆ ತೆರಳುತ್ತಿದ್ದೇವೆ ಎಂದು ತಮ್ಮ ತಂಡದ ಕುರಿತು ವಿಶ್ವಾಸದ ಮಾತುಗಳನ್ನು ನಟ ಸುದೀಪ್ ಹೇಳಿದರು.
---------
ಕ್ರಿಕೆಟ್ ಬಗ್ಗೆ ನಿಮಗೇನು ಬೇಕೋ ಅದೆಲ್ಲ 'ಮೈಖೇಲ್' ವೆಬ್‌ಸೈಟ್‌ನಲ್ಲಿದೆ
ಕ್ರಿಕೆಟ್ ಆಟವನ್ನು ಲೈವ್ ನೋಡುವುದಷ್ಟೇ ಅಲ್ಲ, ರಿಪೋರ್ಟ್ ಓದುವುದೂ ಸಹ ಅಭಿಮಾನಿಗಳ ಪಾಲಿಗೆ ಸುಖ. ಕನ್ನಡದಲ್ಲಿ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ 'ಮೈಖೇಲ್' ಜಾಲತಾಣದಲ್ಲಿ ಲಭ್ಯ. ಇಲ್ಲಿ ಲೈವ್ ಸ್ಕೋರ್, ಬ್ರೇಕಿಂಗ್ ನ್ಯೂಸ್, ಪಂದ್ಯಗಳ ವೇಳಾಪಟ್ಟಿ, ಮ್ಯಾಚ್ ರಿಪೋರ್ಟ್, ಆಟಗಾರರ ಹೇಳಿಕೆ, ವಿವಾದ, ಗಾಸಿಪ್, ಪ್ರೊಫೈಲ್, ಆಕರ್ಷಕ ಫೋಟೊಗಳು, ಇನ್‌ಫೋಗ್ರಾಫಿಕ್ಸ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಬಯಸುವ ಎಲ್ಲವೂ ಇದೆ. ಕ್ರಿಕೆಟ್ ಬಗ್ಗೇ ಏನೇ ಬೇಕಿದ್ದರೂ 'ಮೈಖೇಲ್' ವೆಬ್‌ಸೈಟ್ ನೋಡಿ. ನೆನಪಿರಲಿ: ಕನ್ನಡದಲ್ಲಿ ಕ್ರಿಕೆಟ್, 'ಮೈಖೇಲ್' ವೆಬ್‌ಸೈಟ್ ಬೆಸ್ಟ್.
ಕ್ರೀಡಾಲೋಕದ ತಾಜಾ ಮಾಹಿತಿಗಾಗಿ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲೂ ಮೈಖೇಲ್ ಫಾಲೊ ಮಾಡಿ.












Click it and Unblock the Notifications