Airport: ಬೆಂಗಳೂರಿನಲ್ಲಿ ದೇಶದ ಮೊದಲ ರನ್‌ವೇ ಶುಚಿಗೊಳಿಸುವ ವಾಹನ ತಯಾರು: ಎಂಬಿ ಪಾಟೀಲ್
ಬೆಂಗಳೂರು: ಎಂಜಿನಿಯರಿಂಗ್ ನಾವೀನ್ಯತೆ ಮತ್ತು ಅಧಿಕ ಮೌಲ್ಯದ ಮೂಲಸೌಕರ್ಯ ಉಪಕರಣಗಳ ತಯಾರಿಕೆಯಲ್ಲಿ ತೊಡಗಿರುವ ಬೆಂಗಳೂರು ಮೂಲದ ಆನ್ ಲಾನ್ ಟೆಕ್ನಾಲಜಿ ಸಲ್ಯೂಷನ್ಸ್ ಕಂಪನಿಯು ಈ ಪ್ರಮುಖ ವಾಹನ ಅಭಿವೃದ್ಧಿಪಡಿಸಿದೆ. ಭಾರತದಲ್ಲಿ ಮೊದಲ ಬಾರಿಗೆ ದೇಶೀಯವಾಗಿ ತಯಾರಿಕೆಯಾದ ರನ್ ವೇ ಸ್ವಚ್ಛತಾ ವಾಹನ ಇದಾಗಿದೆ. ಸರ್ಕಾರ ಇಂದು ಸೋಮವಾರ (ಜನವರಿ 5) ಆ ವಾಹನವನ್ನು ನೋಯ್ಡಾ ಕಂಪನಿಗೆ ಹಸ್ತಾಂತರಿಸಿತು.
ದೇಶಿಯವಾಗಿ ತಯಾರಿಸಲಾದ ವಿಮಾನ ನಿಲ್ದಾಣ ರನ್ ವೇ ಸ್ವಚ್ಛತಾ ವಾಹನವನ್ನು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ನೋಯ್ಡಾ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ ಗೆ (ಎನ್.ಐ.ಎ.ಎಲ್) ಹಸ್ತಾಂತರಿಸಿದರು. ಇಂತಹ ವಾಹನ ತಯಾರಾಗಿದ್ದ ಭಾರತದಲ್ಲಿ ಇದೇ ಮೊದಲು. ಕೇಂದ್ರ ಸರ್ಕಾರದ 'ಮೇಕ್ ಇನ್ ಇಂಡಿಯಾ' ಉಪಕ್ರಮದಡಿ ಸ್ವಿಟ್ಜರ್ ಲೆಂಡ್ ನ ಮೆಸರ್ಸ್ ಬುಕರ್ ಮುನಿಸಿಪಲ್ ಸಹಯೋಗದಲ್ಲಿ ತಯಾರಿಸಲಾಗಿದೆ.

ಬೆಂಗಳೂರು ಗ್ರಾಮಾಂತರ ಭಾಗದ ದೊಡ್ಡಬಳ್ಳಾಪುರದ ಆದಿನಾರಾಯಣ ಹೊಸಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಘಟಕದಲ್ಲಿ ಜೋಡಣೆಗೊಂಡು ತಯಾರಾಗಿರುವ ಈ ಮಾದರಿಯ ಎರಡು ವಾಹನಗಳ ಕೀಲಿಕೈಗಳನ್ನು ನೋಯ್ಡಾ ವಿಮಾನ ನಿಲ್ದಾಣದ ಪ್ರತಿನಿಧಿ ಪ್ರದೀಪ್ ರಾಣಾ ಅವರಿಗೆ ನೀಡಿದರು.
ಸ್ವಚ್ಛತಾ ವಾಹನದ ಕಾರ್ಯ, ವೈಶಿಷ್ಟ್ಯತೆ
ವಿಮಾನದ ಟಯರ್ ಗಳಿಗೆ ಅಪಾಯ ತಂದೊಡ್ಡಬಹುದಾದ ಮೊಳೆಗಳು ಹಾಗೂ ಚೂಪಾದ ಲೋಹದ ತುಣುಕುಗಳನ್ನು ರನ್ ವೇ ಮೇಲಿಂದ ತೆರವುಗೊಳಿಸುವ ಕಾರ್ಯವನ್ನು ಈ ವಾಹನ ಮಾಡಲಿದೆ. ರನ್ ವೇ ಮೇಲಿನ ಧೂಳನ್ನೂ ಹೀರಿಕೊಳ್ಳಲಿದೆ. ಜೊತೆಗೆ, ಮುಖ್ಯವಾಗಿ ವಿಮಾನಗಳು ಇಳಿಯುವಾಗ ರನ್ ವೇಯಲ್ಲಿ ಜಾರುವ ಸಾಧ್ಯತೆ ತಂದೊಡ್ಡಬಹುದಾದ ಪಾಚಿಯನ್ನು ತೆಗೆದುಹಾಕುವ ಕಾರ್ಯ ಮಾಡಲಿದೆ ಎಂದು ಕಾರ್ಯಕ್ರಮದಲ್ಲಿ ಸಚಿವರು ತಿಳಿಸಿದರು.
ನಗರದ ರಸ್ತೆಗಳನ್ನು ಸ್ವಚ್ಛ ಮಾಡುವ ಸ್ವೀಪಿಂಗ್ ಮಿಷಿನ್ ವಾಹನಗಳ ತಯಾರಿಕೆಗೂ ಗಮನ ಕೇಂದ್ರೀಕರಿಸಿರುವ ಆನ್ ಲಾನ್ ನಂತಹ ಕಂಪನಿಗಳು ನಮ್ಮ ಪೂರೈಕೆ ಸರಪಳಿಯ ಬುನಾದಿಯಾಗಿವೆ. ಆನ್ ಲಾನ್ ಕಂಪನಿಯು ಸರ್ಕಾರದ ನೀತಿಗಳು ಹಾಗೂ ಕಾರ್ಯಪರಿಸರವನ್ನು ಬಳಸಿಕೊಂಡು ಈಗ ತಯಾರಿಸಿರುವ ವಾಹನಕ್ಕೆ ರಫ್ತು ಮಾರುಕಟ್ಟೆಗಳನ್ನು ಶೋಧಿಸಿಕೊಳ್ಳಬೇಕು. ನಮ್ಮ ಕೈಗಾರಿಕಾ ನೀತಿಯು (2025-30) ಗುರಿ ನಿರ್ದೇಶಿತ ಬೆಂಬಲ ಹಾಗೂ ಗುಣಮಟ್ಟ ಪ್ರಮಾಣಪತ್ರ ಪ್ರೋತ್ಸಾಹಕ ಕ್ರಮಗಳ ಮೂಲಕ ದೊಡ್ಡ ಕಂಪನಿಗಳಿಗೆ ಉತ್ತೇಜನ ನೀಡುತ್ತದೆ ಎಂದರು.
ಫಾಕ್ಸ್‌ಕಾನ್ 20 ಸಾವಿರ ಉದ್ಯೋಗ ಸೃಷ್ಟಿ
ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಫಾಕ್ಸ್‌ಕಾನ್ ಕಂಪನಿಯು ಸದ್ಯ 30,000 ಜನರಿಗೆ ಉದ್ಯೋಗ ನೀಡಿದೆ. ಇದರಲ್ಲಿ ಶೇ 80ರಷ್ಟು ಮಂದಿ ಮಹಿಳೆಯರೇ ಇರುವುದು ಸಂತಸದ ಸಂಗತಿ. ಇದೇ ರೀತಿ ಮುಂದಿನ ದಿನಗಳಲ್ಲಿ ಇನ್ನೂ 20 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ಚೀನಾ ಮತ್ತು ವಿಯೆಟ್ನಾಂ ರೀತಿ ತಯಾರಿಕಾ ವಲಯದಲ್ಲಿ ಮುಂಚೂಣಿಗೆ ತರುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ನಂತರದ ಸ್ಥಳೀಯ ಉದ್ಯಮಿಗಳ ಜತೆಗೂ ಸಚಿವರು ಮಾತನಾಡಿದರು. ಕೆಲವರು ತಮ್ಮ ಉದ್ಯಮ ವಿಸ್ತರಣೆಗೆ ಬೇಕಾದ ಅಗತ್ಯ ಭೂಮಿಯನ್ನು ಒದಗಿಸುವಂತೆ ಅವರು ಸರ್ಕಾರದ ಬಳಿ ಕೋರಿದರು. ಇದಕ್ಕೆ ಸಚಿವರು ಶೀಘ್ರವೇ ಲಭ್ಯ ಭೂಮಿ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.












Click it and Unblock the Notifications