ಮುನಿರತ್ನಗೆ ಯಾವಾಗ ಸಚಿವ ಸ್ಥಾನ? ಭವಿಷ್ಯ ನುಡಿದ ವಿ.ಸೋಮಣ್ಣ
ಬೆಂಗಳೂರು, ಜೂನ್ 15: ನಾಯಕತ್ವ ಬದಲಾವಣೆಯ ವಿಚಾರದಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದ ಸಚಿವ ವಿ.ಸೋಮಣ್ಣ, ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಅವರು ಮಂತ್ರಿಯಾಗುವುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ.
"ಮುಂದಿನ ಎಂಟತ್ತು ದಿನಗಳಲ್ಲಿ ಮುನಿರತ್ನ ಅವರು ಮಂತ್ರಿಯಾಗುವುದು ಪಕ್ಕಾ. ಪಕ್ಷಾತೀತವಾಗಿ ಮುನಿರತ್ನ ಅವರು ಕ್ಷೇತ್ರದಲ್ಲಿ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ"ಎಂದು ಸೋಮಣ್ಣ ಹೇಳಿದರು.
ಯಾರು ದೆಹಲಿಗೆ ಹೋಗಿದ್ದಾರೋ ಅವರನ್ನೇ ಕೇಳಿ: ಸಚಿವ ಸೋಮಣ್ಣ ಗರಂ
ಆರ್.ಆರ್.ನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಫುಡ್ ಕಿಟ್ ವಿತರಿಸಿ ಮಾತನಾಡುತ್ತಿದ್ದ ಸೋಮಣ್ಣ, "ರಾಜ್ಯದಲ್ಲಿ ಉತ್ತಮ ಅಭಿವೃದ್ದಿ ಕೆಲಸ ನಡೆಯಬೇಕೆಂದರೆ ಮುನಿರತ್ನ ಅವರಂತಹ ಶಾಸಕರು ಸಚಿವರಾಗಬೇಕು"ಎಂದು ಸೋಮಣ್ಣ ಅವರು ಮುನಿರತ್ನ ಅವರ ಬೆಟ್ಟು ತಟ್ಟಿದ್ದಾರೆ.
"ಮುನಿರತ್ನ ಅವರು ಮಂತ್ರಿಯಾಗಲಿ. ಅದಾದ ನಂತರ, ನಾವು ಮತ್ತು ಅವರು ಒಟ್ಟಿಗೆ ಬಂದು ರಾಜರಾಜೇಶ್ವರಿ ತಾಯಿಯ ದರ್ಶನ ಪಡೆಯಲು ಬರುತ್ತೇವೆ"ಎಂದು ಸಚಿವ ಸೋಮಣ್ಣ ಹೇಳಿದರು.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಮೂರು ದಿನಗಳ ಪ್ರವಾಸ ಆರಂಭಕ್ಕೂ ಮುನ್ನ ಸೋಮಣ್ಣ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಭೇಟಿಯ ವೇಳೆ ಸಚಿವರ ಮೌಲ್ಯಮಾಪನವನ್ನೂ ಅರುಣ್ ಸಿಂಗ್ ಮಾಡಲಿದ್ದಾರೆ ಎಂದು ವರದಿಯಾಗಿದೆ.
"ನನ್ನನ್ನೂ ಸೇರಿದಂತೆ ಪ್ರತಿಯೊಬ್ಬರಿಗೂ ಒಂದೊಂದು ಕಾಯಿಲೆ ಇದೆ. ನನಗೆ ಕೆಲಸ ಮಾಡುವ ಕಾಯಿಲೆ. ಅವರಿಗೆ ದೆಹಲಿಗೆ ಹೋಗುವ ಕಾಯಿಲೆ. ಆ ಕಾಯಿಲೆಯ ಮದ್ದು ಗೊತ್ತಿಲ್ಲ'' ಎಂದು ಸೋಮಣ್ಣ, ಕೆಲವರ ದೆಹಲಿ ಭೇಟಿಯ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದರು.