Namma Metro: ನಿಲ್ದಾಣದಲ್ಲಿ ಕಾಲಿಡಲು ಜಾಗವಿಲ್ಲ...ಭಾರೀ ದಟ್ಟಣೆ! ಆಕ್ರೋಶ
ಬೆಂಗಳೂರು, ಏಪ್ರಿಲ್ 14: ಬೆಂಗಳೂರು ನಗರದ ಪ್ರಮುಖ ಇಂಟರ್‌ಚೇಂಜ್ ನಿಲ್ದಾಣವಾಗಿರುವ ನಾಡಪ್ರಭು ಕೆಂಪೇಗೌಡ ನಿಲ್ದಾಣದಲ್ಲಿ (ಮೆಜೆಸ್ಟಿಕ್) ಸೋಮವಾರ ಕಾಲಿಡಲು ಜಾಗವಿಲ್ಲದಷ್ಟು ದಟ್ಟಣೆ ಕಂಡು ಬಂತು. ನೆಲಮಹಡಿಯಿಂದ ಮೇಲಿನ ಮಹಡಿವರೆಗೂ ಜನವೋ ಜನ...ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತಲ್ಲ, ಬಿಜೆಪಿ ಸಂಸದ ಪಿಸಿ ಮೋಹನ್ ಅವರು ಈ ಅವ್ಯವಸ್ಥೆ ವಿರುದ್ಧ ಕಿಡಿ ಕಾರಿದರು. ಇದರ ಬೆನ್ನಲ್ಲೆ BMRCL ಒಂದಷ್ಟು ವಿವರಣೆ ನೀಡಿದೆ.
ನಗರದಲ್ಲಿ ಸೋಮವಾರ ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯ ಜನರ ಮೆಟ್ರೋದಲ್ಲಿ ಓಡಾಡುತ್ತಾರೆ. ವಾರದ ಮೊದಲ ದಿನ ಅದರಲ್ಲೂ ಪೀಕ್ ಸಮಯದಲ್ಲಿ ಅಂತೂ ಕೇಳೋದೆ ಬೇಡ ಅಷ್ಟರ ಮಟ್ಟಿಗೆ ಜನ ಮೆಜೆಸ್ಟಿಕ್ ನಿಲ್ದಾಣದಲ್ಲಿ ನಿಂತಿರುತ್ತಾರೆ. ಇಂಟರ್‌ಚೇಜ್ ನಿಲ್ದಾಣ ಆಗಿದ್ದರಿಂದ ನಿತ್ಯ ಲಕ್ಷಾಂತರ ಜನರು ಇಲ್ಲಿಗೆ ಬರುತ್ತಾರೆ. ಹೀಗೆ ಬಂದವರು ಇಂದು ಸೋಮವಾರ ಲಾಕ್ ಆಗಿದ್ದಾರೆ.

ಪೀಕ್ ಸಮಯದಲ್ಲಿ ಮೆಟ್ರೋ 3.5 ನಿಮಿಷಕ್ಕೆ ಒಂದರಂತೆ ಮೆಜೆಸ್ಟಿಕ್ ನಿಲ್ದಾಣದಿಂದ ಸಂಚರಿಸುತ್ತವೆ. ಆದರೆ ಸೋಮವಾರ ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ ಇದೆ. ಎಲ್ಲ ಕಂಪನಿ, ಕಚೇರಿಗಳಿಗೆ, ಸಾರ್ವಜನಿಕ ರಜೆ ಇದೆ. ಸಾರ್ವಜನಿಕರು ಇಂದಿನ ಓಟಾಟ ಅಷ್ಟಾಗಿ ಇರುವುದಿಲ್ಲ ಎಂದು ಭಾವಿಸಿದ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) 10 ನಿಮಿಷಗಳಿಗೆ ಒಮ್ಮೆಯಂತೆ ರೈಲಿನ ಆವರ್ತನ ಬಿಟ್ಟಿತು.
ಇದರಿಂದ ಪೀಕ್ ಸಮಯದಲ್ಲಿ ಜನರಿಗೆ ನೂಕು ನುಗ್ಗಲಿನ ಅನುಭವ ಆಯಿತು. ನೋಡು ನೋಡುತ್ತಿದ್ದಂತೆ ನೆಲಮಹಡಿ, ಮೊದಲ ಮಹಡಿ ತುಂಬ ಜನವೋ ಜನ....ಕಾಲಿಡದಷ್ಟು ಜಾಗ ಇಲ್ಲದಂತಾಯಿತು. ಅನೇಕ ಪ್ರಮಾಣಿಕರು ಇಂದಿನ ಸಮಸ್ಯೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಸಮೇತ ಹಂಚಿಕೊಂಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದಿನ ವ್ಯವಸ್ಥೆ ಸ್ವೀಕಾರಾರ್ಹವ್ಲಲ: ಪಿಸಿ ಮೋಹನ್
ಸೋಮವಾರ ಬೆಳಗ್ಗೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಅಸಹನೀಯ ಘಟನೆ ನಡೆದಿದೆ. ಇದು ಸ್ವೀಕಾರಾರ್ಹವಲ್ಲ. ಎಲ್ಲರಿಗೂ ರಜೆ ಇದೆ ಎಂದು ಭಾವಿಸಿ, ಪೀಕ್ ಸಮಯದಲ್ಲಿ ರೈಲುಗಳ ಆವರ್ತನವನ್ನು 10 ನಿಮಿಷಗಳಿಗೆ ಇಳಿಸಲಾಗಿದ್ದೇ ಈ ಸಮಸ್ಯೆ ಕಾರಣ ಎಂದರು. ನಿಲ್ದಾಣ ಸಾರಿಗೆ ಸಂಪೂರ್ಣ ಅವ್ಯವಸ್ಥೆಯನ್ನು ಸೃಷ್ಟಿಯಾಯಿತು. ಇಂತಹ ಸಂದರ್ಭಗಳಲ್ಲಿ ಬಿಎಂಆರ್‌ಸಿಎಲ್ ಉತ್ತಮವಾಗಿ ಯೋಜಿಸಬೇಕು. ಎಂದಿನಂತೆ ಪೀಕ್ ಸಮಯದಲ್ಲಿ ರೈಲುಗಳು ಓಡಾಡುವಂತೆ ಸಾಮಾನ್ಯ ಆವರ್ತನ ತಕ್ಷಣ ಪುನಃಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ. ಅವರು ಸಹ ವಿಡಿಯೋ ಸಮೇತ ಜನದಟ್ಟಣೆಯ ದೃಶ್ಯಾವಳಿ ಹಂಚಿಕೊಂಡಿದ್ದಾರೆ.

BMRCL ಹೇಳಿದ್ದೇನು?
ನಾಡಪ್ರಭು ಕೆಂಪೇಗೌಡ ನಿಲ್ದಾಣದಲ್ಲಿ (ಮೆಜೆಸ್ಟಿಕ್) ಜನಸಂದಣಿ ಹೆಚ್ಚಾಗಿದೆ. ಇಂದು ಸಾರ್ವತ್ರಿಕ ರಜೆ ಇರುವುದರಿಂದ, ಸಾರ್ವಜನಿಕ ಅನುಕೂಲವನ್ನು ಹೆಚ್ಚಿಸಲು ಬಿಎಂಆರ್‌ಸಿಎಲ್ ಬೈಯಪಹನಹಳ್ಳಿಯಿಂದ ನಾಡಪ್ರಭು ಕೆಂಪೇಗೌಡ ನಿಲ್ದಾಣಕ್ಕೆ (ಮೆಜೆಸ್ಟಿಕ್) ನಾಲ್ಕು ಹೆಚ್ಚುವರಿ ರೈಲುಗಳನ್ನು ಓಡಿಸಿದೆ. ಹೆಚ್ಚುವರಿಯಾಗಿ, ಮೆಜೆಸ್ಟಿಕ್‌ರೈಲಿನ ಸಂಚಾರವನ್ನು ಕಡಿಮೆ ಮಾಡಿ ಐಟಿಪಿಎಲ್‌ಗೆ ಹಿಂತಿರುಗಿಸಲಾಗಿದೆ.
ಇದರೊಂದಿಗೆ, ಮೆಜೆಸ್ಟಿಕ್, ಗರುಡಾಚಾರ್‌ಪಾಳ್ಯ ಮತ್ತು ವೈಟ್‌ಫೀಲ್ಡ್‌ನಿಂದ ಒಟ್ಟು 7 ಹೊಸ ಟ್ರಿಪ್‌ಗಳು ಪ್ರಾರಂಭವಾಗುತ್ತವೆ. ಅಲ್ಲದೆ, ಇಂದು ಸಂಜೆ ಐಟಿಪಿಎಲ್ ನಿಂದ ರೈಲುಗಳು ಎಂದಿನಂತೆ 5 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ ಎಂದು ಬೆಂಗಳೂರು ನಮ್ಮ ಮೆಟ್ರೋ ನಿಮಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆದರೆ ಪ್ರಮಾದ ಆಗಲು ಕಾರಣವೇನು, ಸಾರ್ವತ್ರಿಕ ರಜೆ ಇದೆ ಎಂದು ರೈಲುಗಳು ಆವರ್ತನ ಕಡಿಮೆ ಮಾಡಲಾಯಿತಾ? ಎಂಬುದರ ಬಗ್ಗೆ ಪ್ರತಿಕ್ರಿಯಿಸಿಲ್ಲ. ಬದಲಾಗಿ ಹೆಚ್ಚುವರಿ ಟ್ರಿಪ್ ಕುರಿತು ಮಾತ್ರ ತಿಳಿಸಿದೆ...












Click it and Unblock the Notifications