ಬೆಂಗಳೂರಿಗೆ 1885ರ ನಂತರ ಶೇ.90ರಷ್ಟು ಮಳೆ ಕೊರತೆ: ಇದು 'ಶುಷ್ಕ ಮಾನ್ಸೂನ್ ತಿಂಗಳು'
ಬೆಂಗಳೂರು, ಆಗಸ್ಟ್ 30: ಉದ್ಯಾನ ನಗರಿ ಎಂದು ಪ್ರಸಿದ್ಧವಾಗಿರುವ ಐಟಿ ಕೇಂದ್ರ ಬೆಂಗಳೂರಿಗೆ ಈ ಆಗಸ್ಟ್ ತಿಂಗಳು ಪ್ರತಿ ವರ್ಷಕ್ಕಿಂತಲೂ ಈ ವರ್ಷ ಭಿನ್ನವಾಗಿದೆ. 1885 ರ ನಂತರ ಈ ಆಗಸ್ಟ್ ತಿಂಗಳಲ್ಲಿ ಶೇಕಡಾ 90ರಷ್ಟು ಮಳೆ ಕೊರತೆ ಆಗಿದೆ. ಇದರಿಂದಾಗಿ ಅಸಾಧಾರಣ ತಾಪಮಾನ ದಾಖಲಾಗುವ ಮೂಲಕ ಮಳೆಗಾಲವು ಬೇಸಿಗೆಯಾಗಿ ಪರಿವರ್ತನೆ ಆಗಿದೆ. ಜನರು ಬಿರು ಬಿಸಿಲಿಗೆ ತತ್ತಿಸಿದ್ದಾರೆ.
ಸಾಮಾನ್ಯವಾಗಿ ಬೆಂಗಳೂರಿಗೆ ಆಗಸ್ಟ್‌ನಲ್ಲಿ ಅತ್ಯಧಿಕ ಮಳೆ ದಾಖಲಾಗುತ್ತದೆ. ಈ ಬಾರಿ ಆಗಸ್ಟ್ ಒಣ ಮಾನ್ಸೂನ್ ತಿಂಗಳಿಗೆ ಸಾಕ್ಷಿಯಾಗಿದೆ. ಇದು ರಾಜಧಾನಿಯ ಇಹಾಸದಲ್ಲಿಯೇ ಅತ್ಯಧಿಕ ತಾಪಮಾನ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಐಎಂಡಿ ಪ್ರಕಾರ ಆಗಸ್ಟ್ ನಲ್ಲಿ ವಾಡಿಕೆ 163 ಮಿಲಿ ಮೀಟರ್ ಮಳೆ ಆಗಬೇಕಿತ್ತು, ಆದರೆ ಬದಲಾದ ವಾತಾವರಣದಿಂದಾಗಿ ಕೇವಲ 12 ಮಿಮೀ ಮಳೆ ಬಿದ್ದಿದೆ. ಇದರಿಂದಾಗಿ ಶೇಕಡಾ 90% ರಷ್ಟು ಮಳೆ ಕೊರತೆಯನ್ನು ಬೆಂಗಳೂರು ಎದುರಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಆಗಸ್ಟ್‌ನಲ್ಲಿ ತಂಪಾಗಿರಬೇಕಿದ್ದ ಬೆಂಗಳೂರು ಅಧಿಕ ತಾಪಮಾನ ನಗರವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ಭಾರಿ ಬೆಂಗಳೂರಿನಲ್ಲಿ ಶುಷ್ಕ ವಾತಾವರಣ ಮತ್ತು ತಡೆದುಕೊಳ್ಳಲಾಗದಷ್ಟು ಬಿಸಿಯ ಅನುಭವವಾಗಿದೆ. ನಗರದಲ್ಲಿ ಗರಿಷ್ಠ 31 ಡಿಗ್ರಿ ಸೆಲ್ಸಿಯಸ್‌ಗೆ ದಾಖಲಾಗಿದ್ದನ್ನು ಉಲ್ಲೇಖಿಸಿದ ವ್ಯಕ್ತಿಯೊಬ್ಬರು 'ಬೆಂಗಳೂರಿನಲ್ಲಿ ಬೇಸಿಗೆ ಆರು ತಿಂಗಳು' ಮುಂದುವರಿದಂತೆ ಭಾಸವಾಗುತ್ತಿದೆ ಎಂದು ಹೇಳಿಕೊಂಡಿದ್ದರು.
ಮಳೆ ಕಡಿಮೆ, ತಾಪಮಾನ ವಿಪರೀತ ಏರಿಕೆ
ಈ ಆಗಸ್ಟ್ ತಿಂಗಳನ್ನು ಇತ್ತೀಚಿನ ದಿನಗಳಲ್ಲಿ ಅತ್ಯಂತ ಒಣ ಮಾನ್ಸೂನ್ ತಿಂಗಳು ಎನ್ನಬಹುದು. ಸಾಮಾನ್ಯವಾಗಿ ಮುಂಗಾರು ಮಳೆ ಕೆಲವು ದಿನವಷ್ಟೇ ವಿಶ್ರಾಂತಿ ಪಡೆದು ಉಳಿದೆಲ್ಲ ದಿನ ಉತ್ತಮವಾಗಿ ಸುರಿಯುತ್ತದೆ. ಆದರೆ ಈ ವರ್ಷ ಎಲ್ಲವು ಭಿನ್ನವಾಗಿದ್ದು, ಮಳೆ ಆಗದೇ ತಾಪಮಾನ ವಿಪರೀತ ಏರಿಕೆ ಕಂಡಿದೆ. ಇದರಿಂದ ಒಣ ಹವೆಯ ವಾತಾವರಣ ಕಂಡು ಬರುತ್ತಿದೆ ಎಂದು ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ (IMD) ಹವಾಮಾನ ತಜ್ಞ ಪ್ರಸಾದ್ ಮಾಹಿತಿ ನೀಡಿದ್ದಾರೆ.

ಪ್ರಸಕ್ತ ತಿಂಗಳಿನಲ್ಲಿ ನಗರದಲ್ಲಿ ದಾಖಲಾದ ಉಷ್ಣಾಂಶವು ಕಳೆದ 124 ವರ್ಷಗಳ ಹಿಂದೆ ಆಗಸ್ಟ್ ನಲ್ಲಿ ದಾಖಲಾಗಿದ್ದ ತಾಪಮಾನದ ಸಾರ್ವಕಾಲಿಕ ದಾಖಲೆಯನ್ನು ಮುರಿದೆ. ಇತ್ತೀಚಿನ ದಿನಮಾನಗಳಲ್ಲಿ ಹವಾಮಾನದ ವ್ಯಾಪಕ ಬದಲಾವಣೆಗಳನ್ನು ನಾವು ಕಾಣುತ್ತಿದ್ದೇವೆ. ಹೆಚ್ಚು ಕೆರೆ, ನದಿಗಳನ್ನು ಹಾಗೂ ಉದ್ಯಾನಗಳನ್ನು ಹೊಂದಿರುವಂಥಹ ನಗರಗಳಲ್ಲಿ ಸಹ ಅಧಿಕ ಬಿಸಿಲ ಬೇಗೆಯ ಸನ್ನಿವೇಶ ಎದುರಿಸುತ್ತಿದ್ದೇವೆ ಎಂದು ಪರಿಸರ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
1899ರ ಬಳಿಕ ಆಗಸ್ಟ್‌ನಲ್ಲಿ ಅತ್ಯಧಿಕ ತಾಪಮಾನ
ಆಗಸ್ಟ್ ತಿಂಗಳ 30 ದಿನಗಳಲ್ಲಿ ಸುಮಾರು 19 ದಿನಗಳಲ್ಲಿ ಸಾಮಾನ್ಯಕ್ಕಿಂತ ಕನಿಷ್ಠ 2-3 ಡಿಗ್ರಿಗಳಷ್ಟು ತಾಪಮಾನ ಇಳಿಕೆ ಆಗಿದೆ. ತಿಂಗಳ ದಾಖಲೆಯ ತಾಪಮಾನವು 1899ರ ಆಗಸ್ಟ್ 6 ರಂದು ಗರಿಷ್ಠ 33.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಅದಾದ ಬಳಿಕ ಮೊನ್ನೆ ಆಗಸ್ಟ್ 28ರಂದು ಬೆಂಗಳೂರು ಗರಿಷ್ಠ 32.6 ಡಿಸೆ ತಾಪಮಾನ ಕಂಡಿದೆ. ಇದು ಶುಷ್ಕ ಹವಾಮಾನ ಮತ್ತು ತೇವಾಂಶದ ಅನುಪಸ್ಥಿತಿಯ ಕಾರಣದಿಂದ ಹೀಗೆ ಅಧಿಕ ಬಿಸಿ ದಾಖಲಾಗಿದೆ ಎಂದು ಐಎಂಡಿ ಹೇಳಿದೆ.
ಆಗಸ್ಟ್ ತಿಂಗಳ ಆರಂಭಿಕ ದಿನಗಳಲ್ಲಿ ಹೆಚ್ಚುವರಿ ಮಳೆ ದಾಖಲಾಗುವ ಲಕ್ಷಣಗಳು ಕಂಡು ಬಂದಿದ್ದವು. ನಂತರ ಸಾಮಾನ್ಯ ಮಳೆಗಿಂತಲೇ ಕಡಿಮೆ ಪ್ರಯಾಣಕ್ಕಿಂತಲೂ ಮಳೆ ಇಳಿಕೆ ಆಯಿತು. ಮಳೆ ವಾತಾವರಣದಲ್ಲಿ ಇಳಿಕೆ ಆಗುತ್ತಿದ್ದಂತೆ ತಾಪಮಾನದ ನೇರವಾದ ಪ್ರಭಾವ ಸೃಷ್ಟಿಯಾಗುತ್ತಾ ಸಾಗಿತು.
ಮೊದಲ ಎರಡು ವಾರಗಳಲ್ಲಿ ಆರ್ದ್ರತೆ (ಹ್ಯುಮಿಡಿಟಿ) ವಾತಾವರಣವು ತೇವಾಂಶವನ್ನು ಹೀರಿಕೊಳ್ಳುವುದರಿಂದ ನಗರದ ವಾತಾವರಣವು ಸಂಪೂರ್ಣವಾಗಿ ಶುಷ್ಕವಾಗುತ್ತದೆ. ಇದರಿಂದ ಮಳೆಗಾಲವು ಬೇಸಿಗೆಯಾಗಿ ಪರಿವರ್ತನೆ ಆದಂತೆ ಭಾಸವಾಗುತ್ತದೆ ಎಂದು ಮತ್ತೊಬ್ಬ ತಜ್ಞರು ವಿವರಿಸಿದರು.












Click it and Unblock the Notifications