ಅಕ್ರಮ ನಿವೇಶನ ಮಾರಾಟ: 35 ಇಂಜಿನಿಯರ್‌ಗಳ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದ ಬಿಡಿಎ
ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡಿದ 35 ಜನ ಎಂಜಿನಿಯರ್‌ಗಳ ವಿರುದ್ಧ ಬಿಡಿಎ ಪ್ರಕರಣ ದಾಖಲಿಸಲು ಮುಂದಾಗಿದೆ. ಹಾಗಾದರೆ ಎಷ್ಟು ಹೆಕ್ಟೇರ್ ನಿವೇಶನವನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಬೆಂಗಳೂರು, ಫೆಬ್ರವರಿ, 08: ಈ ಹಿಂದೆ 35 ಜನ ಎಂಜಿನಿಯರ್‌ಗಳು ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲಿರುವ ಹಲವು ನಾಗರಿಕ ಸೌಲಭ್ಯಗಳ ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಇದೀಗ 35 ಜನ ಎಂಜಿನಿಯರ್‌ಗಳ ವಿರುದ್ಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪ್ರಕರಣ ದಾಖಲಿಸಲು ಮುಂದಾಗಿದೆ.
ಈ ವಿಚಾರವಾಗಿ ಪೊಲೀಸರನ್ನು ಸಂಪರ್ಕಿಸಲು ನಿರ್ಧರಿಸಲಾಗಿದೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಹೇಳಿದ್ದಾರೆ. ಈ ಕುರಿತು ಇತ್ತೀಚೆಗೆ ಖಾಸಗಿ ಸಂಸ್ಥೆಯ ಸಿಬ್ಬಂದಿ ಬಿಡಿಎಗೆ ಎಚ್ಚರಿಕೆ ನೀಡಿದ ಬಳಿಕ ಹಗರಣ ಬೆಳಕಿಗೆ ಬಂದಿದೆ. ನಾಗರೀಕ ನಿವೇಶನಗಳು ಇದೀಗ ಆಟದ ಮೈದಾನಗಳು, ಜಿಮ್, ಪೋಸ್ಟ್ ಆಫೀಸ್ ಮತ್ತು ಸಮುದಾಯ ಕೇಂದ್ರಗಳಿಗೆ ಮೀಸಲಾಗಿವೆ.
ನಕ್ಷೆಯನ್ನ ಬದಲಿಸಲು ಒತ್ತಡ
ಈ ಸಂಬಂಧ ಬಿಡಿಎ ಅಧ್ಯಕ್ಷ ಎಸ್‌ಆರ್ ವಿಶ್ವನಾಥ್ ಅವರು ಮಾಹಿತಿ ನೀಡಿದ್ದು, ಹಲವು ಇಂಜಿನಿಯರ್ ಹಾಗೂ ದಲ್ಲಾಳಿಗಳು ಬಡಾವಣೆಯ ನಕ್ಷೆಯನ್ನು ಬದಲಿಸಲು ಒತ್ತಡ ಹಾಕಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ 35 ಮಂದಿ ಎಂಜಿನಿಯರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಲಾಗಿದೆ ಎಂದು ಹೇಳಿದ್ದಾರೆ.

ಕೋರ್ಟ್‌ನ ಆದೇಶ ಉಲ್ಲಂಘನೆ
ವರದಿಯ ಪ್ರಾಥಮಿಕ ಅಂಶಗಳ ಪ್ರಕಾರ, ಬಿಡಿಎ ಅಕ್ರಮವಾಗಿ ಕನಿಷ್ಠ 12 ಸಿಎ ನಿವೇಶನಗಳನ್ನು ವಸತಿ ನಿವೇಶನಗಳನ್ನಾಗಿ ಪರಿವರ್ತಿಸಲಾಗಿದೆ. ಇದು ಕೆಟಿಸಿಪಿ ಕಾಯ್ದೆ ಹಾಗೂ ಸುಪ್ರೀಂ ಕೋರ್ಟ್‌ನ ಇತ್ತೀಚಿನ ಆದೇಶ ಉಲ್ಲಂಘನೆಯಾಗಿದೆ. ಬಡಾವಣೆಯಲ್ಲಿ ಒಂದು ಬಾರಿ ಸಿಎ ನಿವೇಶನ, ಉದ್ಯಾನ ಅಥವಾ ಮೈದಾನ ಎಂದು ಅಧಿಸೂಚನೆ ಆದರೆ ಅದನ್ನು ಬದಲಿಸುವ ಅಧಿಕಾರ ಎಂಜಿನಿಯರ್‌ಗೆ ಇರುವುದಿಲ್ಲ. ಸಿಎ ನಿವೇಶನಗಳಲ್ಲದೆ ವಾಣಿಜ್ಯ ಉದ್ದೇಶಕ್ಕೆ ಅಭಿವೃದ್ಧಿಯಾಗಬೇಕಾದ 100 ಅಡಿ ಮತ್ತು 80 ಅಡಿ ರಸ್ತೆಯ ಸುತ್ತಮುತ್ತಲಿನ 180 ಹೆಕ್ಟೇರ್ ಪ್ರದೇಶದ ನಿವೇಶನಗಳನ್ನು ವಸತಿ ನಿವೇಶನಗಳನ್ನಾಗಿ ಎಂಜಿನಿಯರ್‌ಗಳು ಪರಿವರ್ತಿಸಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ.
ಎಸ್.ಆರ್. ವಿಶ್ವನಾಥ್ ಹೇಳಿದ್ದೇನು?
ಸಿಎ ನಿವೇಶನ ಹಾಗೂ ವಾಣಿಜ್ಯ ಬಳಕೆಯ ನಿವೇಶನಗಳನ್ನು ವಸತಿ ನಿವೇಶನಗಳನ್ನಾಗಿ ಪರಿವರ್ತಿಸಿರುವ ಎಂಜಿನಿಯರ್‌ಗಳ ಮೇಲೆ ತನಿಖೆಗೆ ಆಧರಿಸಿ FIR ದಾಖಲಿಸಲಾಗುತ್ತದೆ. ರೈತರಿಗೆ ಪರಿಹಾರ ರೂಪದಲ್ಲಿ ನೀಡಲಾಗಿರುವ ನಿವೇಶನಗಳನ್ನು ಪರಿವರ್ತಿಸಿರುವುದು ಅಕ್ರಮ ಎಂದು ಎಸ್.ಆರ್. ವಿಶ್ವನಾಥ್ ಹೇಳಿದ್ದಾರೆ.
ಅಕ್ರಮವಾಗಿ ನಿವೇಶನ ಪಡೆದವರೂ ಕೂಡ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ಸಿಎ ನಿವೇಶನಗಳನ್ನು ಬೇರೆ ಪ್ರದೇಶಗಳಲ್ಲಿ ಗೊತ್ತುಪಡಿಸುವುದು ಇದಕ್ಕೆ ಇರುವ ಒಂದು ಪರಿಹಾರವಾಗಿದೆ. ಬಿಡಿಎ ಎಂಜಿನಿಯರ್‌ಗಳು, ಉಪಕಾರ್ಯದರ್ಶಿ ಮತ್ತು ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆದ ಅಕ್ರಮದಿಂದ ಒಟ್ಟು 300 ಹೆಕ್ಟೇರ್ ಬಿಡಿಎ ಆಸ್ತಿ ನಷ್ಟವಾಗಿದೆ ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications