Illegal electricity connection case: ಕರೆಂಟ್ ಕಳ್ಳ ಎಂದು ಕರೆಯುವುದನ್ನು ನಿಲ್ಲಿಸಿ, ನಾನು ದಂಡ ಕಟ್ಟಿದ್ದೇನೆಂದ ಹೆಚ್‌ಡಿಕೆ
ಬೆಂಗಳೂರು ನವೆಂಬರ್ 17: ಅಕ್ರಮ ವಿದ್ಯುತ್ ಸಂಪರ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಬೆಸ್ಕಾಂಗೆ ದಂಡ ಪಾವತಿ ಮಾಡಿದ್ದಾರೆ. ದೀಪಾವಳಿ ಪ್ರಯುಕ್ತ ಜೆ.ಪಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ದೀಪಾವಳಿ ಅಲಂಕಾರಕ್ಕಾಗಿ ವಿದ್ಯುತ್ ಕಂಬದಿಂದ ನೇರ ಸಂಪರ್ಕ ಪಡೆದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು.
ಹೆಚ್‌ಡಿ ಕುಮಾರಸ್ವಾಮಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಾರೆ ಎಂದು ಕಾಂಗ್ರೆಸ್ ವಿಡಿಯೋ ಸಮೇತ 'ವಿದ್ಯುತ್ ಕಳ್ಳ' ಎನ್ನುವ ಆರೋಪ ಮಾಡಿತ್ತು. ಇದರ ಬೆನ್ನಲ್ಲೆ ಬೆಸ್ಕಾಂ ವಿಧಿಸಿದ 68,526 ರೂಪಾಯಿ ದಂಡದ ಮೊತ್ತವನ್ನು ಕುಮಾರಸ್ವಾಮಿ ಪಾವತಿಸಿದ್ದಾರೆ.

ಬೆಂಗಳೂರಿನ ಜೆಪಿ ಭವನ ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೆಚ್‌ಡಿ ಕುಮಾರಸ್ವಾಮಿ ಅವರು, ನಾನು ಪ್ರಾಮಾಣಿಕವಾಗಿ ದಂಡ ಕಟ್ಟಿದ್ದೇನೆ. ಬೆಸ್ಕಾಂ ಅವರು ಸೂಚಿಸಿದ ದಂಡವನ್ನು ಕಟ್ಟಿದ್ದೇನೆ. ಕರೆಂಟ್ ಕಳ್ಳ ಎಂದು ಕರೆಯುವುದು ನಿಲ್ಲಿಸಿ. ನಿಮ್ಮಷ್ಟು ಕಳ್ಳತನ ಮಾಡಿಲ್ಲ. ನೀವು ಹಗಲು ದರೋಡೆಕೋರರು ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಈ ಹಿಂದೆ ನಡೆದ ಮೇಕೆದಾಟು ಪಾದಯಾತ್ರೆಯ ಸಂದರ್ಭದಲ್ಲಿ ಊರಿಡೀ ಅಲಂಕಾರಕ್ಕೆ ಎಲ್ಲಿಂದ ಕರೆಂಟ್ ಪಡೆದುಕೊಂಡಿದ್ದರು? ಕನಕಪುರಲ್ಲಿ ಪ್ರತಿ ವರ್ಷ ನಡೆಯುವ ಕನಕೋತ್ಸವಕ್ಕೆ ಅಲಂಕಾರ ಮಾಡಲು ಎಲ್ಲಿಂದ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದೀರಿ? ಎಂದು ಪ್ರಶ್ನಿಸಿದರು. ಡಿಕೆಶಿ ಅವರು ಈ ಅಲಂಕಾರಕ್ಕೆ ವಿದ್ಯುತ್‌ಗಾಗಿ ಜನರೇಟರ್ ಬಳಕೆ ಮಾಡಿದ್ದರಾ? ಬೇಕಾದರೆ ವಿಡಿಯೋ ಕೊಡೋಣ ಎಂದೂ ಸವಾಲು ಹಾಕಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್‌ಡಿ ಕುಮಾರಸ್ವಾಮಿ ಅವರು ದೀಪಾವಳಿಗೆ ಮನೆಗೆ ದೀಪಾಲಂಕಾರ ಮಾಡಲು ಬೀದಿ ದೀಪದ ಕಂಬದಿಂದ ನೇರವಾಗಿ ವಿದ್ಯುತ್ ಪಡೆದಿರುವ ಆರೋಪವನ್ನು ಕಾಂಗ್ರೆಸ್ ಮಾಡಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ರಾಜ್ಯ ಕಾಂಗ್ರೆಸ್ ಘಟಕ, ಒಬ್ಬ ಮಾಜಿ ಸಿಎಂ ಆಗಿ ವಿದ್ಯುತ್ ಕಳ್ಳತನ ಮಾಡುವ ದಾರಿದ್ರ್ಯ ಬಂದಿದ್ದು ದುರಂತ. ಇಷ್ಟೊಂದು ದಾರಿದ್ರ್ಯ ಬಂದಿದ್ದರೆ ಗೃಹ ಜ್ಯೋತಿಗೆ ಅರ್ಜಿ ಹಾಕಬಹುದಿತ್ತು ಎಂದು ಚಾಟಿ ಬೀಸಿತ್ತು.
ಜಗತ್ತಿನ ಏಕೈಕ ಮಹಾಪ್ರಾಮಾಣಿಕ ಹೆಚ್.ಡಿ ಕುಮಾರಸ್ವಾಮಿಯವರ ಜೆ ಪಿ ನಗರದ ನಿವಾಸದ ದೀಪಾವಳಿಯ ದೀಪಾಲಂಕಾರಕ್ಕೆ ನೇರವಾಗಿ ವಿದ್ಯುತ್ ಕಂಬದಿಂದ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದಾರೆ.
— Karnataka Congress (@INCKarnataka) November 14, 2023
ಒಬ್ಬ ಮಾಜಿ ಸಿಎಂ ಆಗಿ ವಿದ್ಯುತ್ ಕಳ್ಳತನ ಮಾಡುವ ದಾರಿದ್ರ್ಯ ಬಂದಿದ್ದು ದುರಂತ!@hd_kumaraswamy ಅವರೇ ನಮ್ಮ ಸರ್ಕಾರ ಗೃಹಜ್ಯೋತಿಯಲ್ಲಿ 200 ಯೂನಿಟ್… pic.twitter.com/7GKHeRyQuS
ಇದರ ಬೆನ್ನಲ್ಲೆ ಜಯನಗರ ಬೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಕುಮಾರಸ್ವಾಮಿ ಮನೆಗೆ ತೆರಳಿ ಪರಿಶೀಲನೆ ಮಾಡಿ ಎಫ್‌ಐಆರ್ ದಾಖಲಿಸಿದ್ದರು. ಬಳಿಕ ದಂಡ ವಿಧಿಸಿದ್ದರು. ಇದರ ನಡುವೆ 'ವಿದ್ಯುತ್ ಕಳ್ಳ' ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ ಹೆಚ್‌ಡಿ ಕುಮಾರಸ್ವಾಮಿ ಅವರು ಆನ್‌ಲೈನ್ ಮೂಲಕ ದಂಡ ಪಾವತಿ ಮಾಡಿದ್ದಾರೆ. ಜೊತೆಗೆ ತಮ್ಮನ್ನು ವಿದ್ಯುತ್ ಕಳ್ಳ ಎಂದು ಕರೆಯುವುದನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.












Click it and Unblock the Notifications