ಬೆಂಗಳೂರು ಐಐಎಂಬಿ ವಿದ್ಯಾರ್ಥಿ ಒಡಿಶಾದ ಮೊದಲ ಮುಸ್ಲಿಂ ಶಾಸಕಿ!
ಬೆಂಗಳೂರು, ಜೂನ್ 09: ಒಡಿಶಾ ವಿಧಾನಸಭೆ ಚುನಾವಣೆ 2024ರ ಫಲಿತಾಂಶ ಘೋಷಣೆಯಾಗಿದೆ. ಕಾಂಗ್ರೆಸ್ ಪಕ್ಷ 14 ಸ್ಥಾನಗಳಲ್ಲಿ ಜಯಗಳಿಸಿದೆ. ಬಾರಾಬತಿ-ಕಟಕ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೋಫಿಯಾ ಫಿರ್ದೌಸ್ ಗೆಲುವು ಸಾಧಿಸುವ ಮೂಲಕ ಹೊಸ ಇತಿಹಾಸ ನಿರ್ಮಾಣ ಮಾಡಿದ್ದಾರೆ.
ಬೆಂಗಳೂರಿನ ಐಐಎಂಬಿ ವಿದ್ಯಾರ್ಥಿಯಾಗಿದ್ದ 32 ವರ್ಷದ ಸೋಫಿಯಾ ಫಿರ್ದೌಸ್ ಈಗ ಒಡಿಶಾ ವಿಧಾನಸಭೆಯ ಶಾಸಕಿ. ಅಲ್ಲದೇ ಒಡಿಶಾ ವಿಧಾನಸಭೆಗೆ ಆಯ್ಕೆಯಾದ ಮೊದಲ ಮಹಿಳಾ ಮುಸ್ಲಿಂ ಶಾಸಕಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಸೋಫಿಯಾ ಫಿರ್ದೌಸ್ 53,339 ಮತಗಳನ್ನು ಪಡೆದು, ಎದುರಾಳಿಯಾಗಿದ್ದ ಬಿಜೆಪಿ ಅಭ್ಯರ್ಥಿ ಪುರನ್ ಚಂದ್ರ ಮಹಾಪಾತ್ರ (45,338 ಮತ) ಮತ್ತು ಬಿಜೆಡಿಯ ಪ್ರಕಾಶ್ ಚಂದ್ರ ಬೆಹರಾ (40035 ಮತ) ಸೋಲಿಸಿದ್ದಾರೆ.
ಸೋಫಿಯಾ ಫಿರ್ದೌಸ್ ಪರಿಚಯ: ಮ್ಯಾನೇಜ್‌ಮೆಂಟ್ ಮತ್ತು ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಸೋಫಿಯಾ ಫಿರ್ದೌಸ್ ಈಗ ಒಡಿಶಾ ವಿಧಾನಸಭೆಯ ಮೊದಲ ಮಹಿಳಾ ಮುಸ್ಲಿಂ ಶಾಸಕಿ. ಸೋಫಿಯಾ ಫಿರ್ದೌಸ್ ತಂದೆ ಮೊಹಮ್ಮದ್ ಮೊಕ್ವಿಮ್ ಸಹ ಕಾಂಗ್ರೆಸ್‌ನ ನಾಯಕರು.
ಸೋಫಿಯಾ ಫಿರ್ದೌಸ್ ತಂದೆ ಮೊಹಮ್ಮದ್ ಮೊಕ್ವಿಮ್ ಬಾರಾಬತಿ-ಕಟಕ್ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದರು. ಆದರೆ ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬಾರಾಬತಿ-ಕಟಕ್ ಕ್ಷೇತ್ರದ ಟಿಕೆಟ್ ಅನ್ನು ಸೋಫಿಯಾ ಫಿರ್ದೌಸ್‌ಗೆ ನೀಡಿತು.
ಭುವನೇಶ್ವರದ ಕೆಐಐಟಿ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಕಳಿಂಗ ಇನ್ಸಿಟಿಟ್ಯುಟ್ ಆಫ್ ಇಂಡಿಸ್ಟ್ರಿಯಲ್ ಟೆಕ್ನಾಲಜಿ ಇಂದ ಸೋಫಿಯಾ ಫಿರ್ದೌಸ್ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
2022ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್ಸಿಟಿಟ್ಯುಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂಬಿ)ಯ ವಿದ್ಯಾರ್ಥಿನಿಯಾಗಿದ್ದರು ಸೋಫಿಯಾ ಫಿರ್ದೌಸ್. ಐಐಎಂಬಿಯಲ್ಲಿ ಅವರು ಎಕ್ಸಿಕ್ಯುಟಿವ್ ಜನರಲ್ ಮ್ಯಾನೇಜ್‌ಮೆಂಟ್ ಪ್ರೋಗ್ರಾಂ ಪೂರ್ಣಗೊಳಿಸಿದ್ದಾರೆ.
ರಾಜಕೀಯಕ್ಕೆ ಬರುವ ಮೊದಲು ಸೋಫಿಯಾ ಫಿರ್ದೌಸ್ ತಂದೆ ಮೊಹಮ್ಮದ್ ಮೊಕ್ವಿಮ್ ಒಡೆತನದ ಮೆಟ್ರೋ ಬಿಲ್ಡರ್ಸ್‌ನಲ್ಲಿ ನಿರ್ದೇಶಕಿಯಾಗಿದ್ದರು. ಭುವನೇಶ್ವರ ರಿಯಲ್ ಎಸ್ಟೇಟ್ ಡವಲಪರ್ಸ್ ಅಸೋಸಿಯೇಷನ್‌ನಲ್ಲಿಯೂ ಕೆಲಸ ಮಾಡಿದ್ದಾರೆ.
ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿರುವ ಪ್ರಮಾಣ ಪತ್ರಗಳ ಅನ್ವಯ ಸೋಫಿಯಾ ಫಿರ್ದೌಸ್ 5 ಕೋಟಿ ರೂ. ಆಸ್ತಿಯ ಒಡೆತಿ. 28 ಲಕ್ಷ ರೂ. ಸಾಲವನ್ನು ಅವರು ಹೊಂದಿದ್ದಾರೆ.
2019ರ ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ಸೋಫಿಯಾ ಫಿರ್ದೌಸ್ ತಂದೆ ಮೊಹಮ್ಮದ್ ಮೊಕ್ವಿಮ್ ಬಾರಾಬತಿ-ಕಟಕ್ ಕ್ಷೇತ್ರದಲ್ಲಿ 2,123 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2022ರಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. 2024ರ ಏಪ್ರಿಲ್‌ನಲ್ಲಿ ಒಡಿಶಾ ಹೈಕೋರ್ಟ್ ಈ ತೀರ್ಪು ಎತ್ತಿ ಹಿಡಿಯಿತು.












Click it and Unblock the Notifications