Bengaluru Suburban Rail: ಸಬ್ ಅರ್ಬನ್ ರೈಲು ಯೋಜನೆಗೆ ಎಸಿ ಬೋಗಿ, ವಿಶೇಷತೆಗಳು
ಬೆಂಗಳೂರು, ಮಾರ್ಚ್ 22: ಸುಮಾರು 148 ಕಿ. ಮೀ. ಉದ್ದದ ರೈಲು ಜಾಲ, 4 ಕಾರಿಡಾರ್ 64 ನಿಲ್ದಾಣಗಳು, 15,767 ಕೋಟಿ ರೂ. ಮೊತ್ತದ ಬೃಹತ್ ಯೋಜನೆ ಇದು ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲಿದೆ ಎಂದು ಅಂದಾಜಿಸಲಾದ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ವಿವರ. 2026ರಲ್ಲಿ ಸಬ್ ಅರ್ಬನ್ ರೈಲು ಯೋಜನೆಯ ಮೊದಲ ರೈಲು ಸಂಚಾರ ನಡೆಸಲಿದೆ ಎಂದು ಅಂದಾಜಿಸಲಾಗಿದೆ.
ಸಬ್ ಅರ್ಬನ್ ರೈಲು ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಮೂಲಕ ಅನುಷ್ಠಾನ ಮಾಡುತ್ತಿವೆ. ಸಬ್ ಅರ್ಬನ್ ರೈಲು ಯೋಜನೆಯ ರೈಲು ಬೋಗಿ ಹೇಗಿರಲಿವೆ? ಎಂಬುದು ಸದ್ಯದ ಚರ್ಚೆ.

ಸಬ್ ಅರ್ಬನ್ ರೈಲು ಬೋಗಿ: ಸದ್ಯದ ಮಾಹಿತಿ ಪ್ರಕಾರ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ನಮ್ಮ ಮೆಟ್ರೋ ಮಾದರಿಯ ಎಸಿ ರೈಲು ಬೋಗಿಯನ್ನು ಸಬ್ ಅರ್ಬನ್ ರೈಲು ಯೋಜನೆಗೆ ಪೂರೈಕೆ ಮಾಡಲಿದೆ. ರೈಲ್ವೆ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಣೆ ಮಾಡುವ ಐಸಿಎಫ್ ಆಸಕ್ತ ಕಂಪನಿಗಳಿಂದ ಬೋಗಿಯ ವಿನ್ಯಾಸವನ್ನು ನೀಡುವಂತೆ ಆಹ್ವಾನಿಸಿದೆ.
ಈ ಮಾದರಿ ಬೋಗಿಗಳು ವಂದೇ ಮೆಟ್ರೋ ಮಾದರಿಯಲ್ಲಿ ಇರುವುದಿಲ್ಲ. ಕೆ-ರೈಡ್ ನಿಗದಿಪಡಿಸಿದ ವಿನ್ಯಾಸದಂತೆ ಇರಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬೋಗಿಗಳ ಪೂರೈಕೆ ಸಹ ಕರ್ನಾಟಕ ಮತ್ತು ಕೇಂದ್ರ ಸರ್ಕಾರಗಳು ವೆಚ್ಚ ಹಂಚಿಕೆ ಮಾಡಿಕೊಳ್ಳಲಿವೆ.
21.7 ಮೀಟರ್ ಉದ್ದದ ಬೋಗಿ ಗಂಟೆಗೆ 95 ಕಿ. ಮೀ. ವೇಗದಲ್ಲಿ ಸಂಚಾರ ನಡೆಸುವಂತೆ ವಿನ್ಯಾಸ ಮಾಡಲಾಗುತ್ತದೆ. ಕಾರ್ಯಾಚರಣೆಯ ವೇಗ ಗಂಟೆಗೆ 85 ಕಿ. ಮೀ. ಎಂದು ಅಂದಾಜಿಸಲಾಗಿದೆ. ಬೋಗಿ 17 ಟನ್ ತೂಕವಿರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. 6 ಬೋಗಿಯ ರೈಲು ಒಟ್ಟು 1052 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿರುತ್ತದೆ.
ಬೋಗಿಯ ಒಳಾಂಗಣ ವಿನ್ಯಾಸ, ದೀಪಗಳು, ಘೋಷಣಾ ವ್ಯವಸ್ಥೆ ಸೇರಿದಂತೆ ಇತರ ಅಂಶಗಳನ್ನು ಕಂಪನಿಗಳು ಬೋಗಿಯ ವಿನ್ಯಾಸ ನೀಡುವಾಗ ವಿವರಿಸಲಿವೆ. ಒಂದು ಸಬ್ ಅರ್ಬನ್ ರೈಲು 6 ಬೋಗಿಯನ್ನು ಹೊಂದಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಫೆಬ್ರವರಿಯಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದರು. ಆಗ ಕೆ-ರೈಡ್ ಅಧಿಕಾರಿಗಳ ಜೊತೆ ಡಿಸೆಂಬರ್ 2026ರೊಳಗೆ ಕಾರ್ಯಾರಂಭ ಮಾಡಲು ಉದ್ದೇಶಿಸಿರುವ ಸಬ್ ಅರ್ಬನ್ ರೈಲು ಬೋಗಿಯ ಬಗ್ಗೆ ಮಾಹಿತಿಗಳನ್ನು ಪಡೆದಿದ್ದರು. ಬೋಗಿ ಖರೀದಿ ಮತ್ತು ಸರಬರಾಜು ಮಾಡುವ ಕುರಿತು ಪ್ರಕ್ರಿಯೆಯ ವೇಗ ಹೆಚ್ಚಿಸಲು ಸೂಚಿಸಿದ್ದರು.
ಸಬ್ ಅರ್ಬನ್ ರೈಲು ಯೋಜನೆಯ ಕಾರಿಡಾರ್-2 (ಬೈಯಪ್ಪನಹಳ್ಳಿ-ಚಿಕ್ಕಬಣಾವರ) ಡಿಸೆಂಬರ್ 2026ರೊಳಗೆ ಕಾರ್ಯನಿರ್ವಹಣೆಗೆ ಸಿದ್ಧವಾಗಲಿದೆ. ಕಾರಿಡಾರ್-4 (ಹೀಲಲಿಗೆ-ರಾಜನಕುಂಟೆ) ಮಾರ್ಗ ಬಳಿಕ ಕಾರ್ಯಾಚರಣೆಗೆ ಮುಕ್ತವಾಗಲಿದೆ ಎಂದು ಅಂದಾಜಿಸಲಾಗಿದೆ. ಮೊದಲ ಹಂತದಲ್ಲಿ 2 ಕಾರಿಡಾರ್‌ಗಳಿಗೆ ಮೂರು ಕೋಚ್‌ಗಳ ಮಾದರಿಗಳನ್ನು ಪೂರೈಕೆ ಮಾಡಲಾಗುತ್ತದೆ. ವಿನ್ಯಾಸ ಒಪ್ಪಿಗೆ ಆದರೆ ಮೊದಲ ಹಂತದಲ್ಲಿ 51 ರೈಲುಗಳನ್ನು ಖರೀದಿ ಮಾಡಲಾಗುತ್ತದೆ.
ಈಗಾಗಲೇ ಕರ್ನಾಟಕ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ306 ರೈಲುಗಳನ್ನು ಖರೀದಿ ಮಾಡಲು 2,135 ಕೋಟಿ ಅನುದಾನಕ್ಕೆ ಅನುಮೋದನೆ ನೀಡಿದೆ. ಒಟ್ಟು ಬೋಗಿಯ ಖರೀದಿಗೆ 4,300 ರೂ. ಎಂದು ಅಂದಾಜಿಸಲಾಗಿದ್ದು, ಉಳಿದ ಪಾಲನ್ನು ಕೇಂದ್ರ ಸರ್ಕಾರ ನೀಡಬೇಕಿದೆ.












Click it and Unblock the Notifications