ಹೈಕೋರ್ಟ್: ₹50 ಸಾವಿರ ದಂಡ ಕಟ್ಟಿದ ಐಎಎಸ್ ಅಧಿಕಾರಿ ರಶ್ಮಿ ಮಹೇಶ್
ಬೆಂಗಳೂರು, ಜನವರಿ 21: ಕೋರ್ಟ್ ಆದೇಶ ಪಾಲಿಸದೇ ಇರದ ಕಾರಣ ಹಿರಿಯ ಐಎಎಸ್ ಅಧಿಕಾರಿ ರಶ್ಮಿ ಮಹೇಶ್ 50 ಸಾವಿರ ರೂಪಾಯಿ ದಂಡವನ್ನು ತಮ್ಮ ಸ್ವಂತ ಹಣದಲ್ಲಿ ಕಟ್ಟಿರುವ ಘಟನೆ ಹೈಕೋರ್ಟ್‌ನಲ್ಲಿ ನಡೆದಿದೆ.
ಇದರಿಂದಾಗಿ ಅವರು ನ್ಯಾಯಾಂಗ ನಿಂದನೆ ತೂಗುಗತ್ತಿಯಿಂದ ಪಾರಾಗಿದ್ದಾರೆ. ಇಲ್ಲವಾದರೆ ಅವರು ನ್ಯಾಯಾಂಗ ನಿಂದನೆ ಕ್ರಮವನ್ನು ಎದುರಿಸಬೇಕಾಗಿತ್ತು ಎನ್ನಲಾಗಿದೆ.
ಸರ್ಕಾರಿ ನೌಕರರಿಗೆ ಸರಿಸಮನಾಗಿ ದಯಾನಂದ ಸಾಗರ್ ಶೈಕ್ಷಣಿಕ ಸಂಸ್ಥೆಗಳ ನೌಕರರಿಗೆ ವೇತನ ನೀಡುವ ಕುರಿತ ಮನವಿ ಪರಿಗಣಿಸಲು ಎರಡು ವರ್ಷ ವಿಳಂಬ ಮಾಡಿದ ಪ್ರಕರಣದಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ.ರಶ್ಮಿ ಮಹೇಶ್ ಹೈಕೋರ್ಟ್‌ಗೆ 50 ಸಾವಿರ ರೂಪಾಯಿ ದಂಡ ಪಾವತಿಸಿದ್ದಾರೆ.

ಏಕಸದಸ್ಯ ನ್ಯಾಯಪೀಠ 2020ರ ಮಾರ್ಚ್ 11ರಂದು ನೀಡಿದ ಆದೇಶ ಪಾಲಿಸಿಲ್ಲ ಎಂದು ಆಕ್ಷೇಪಿಸಿ ದಯಾನಂದ ಸಾಗರ ಕಾಲೇಜ್ ಆಫ್ ಎಂಜಿನಿಯರಿಂಗ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಲ್.ಹರ್ಷ ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ವಿಭಾಗೀಯಪೀಠದ ವಿಚಾರಣೆ ನಡೆಸಿತು.
2022ರ ನವೆಂಬರ್ 8ರಂದು ನ್ಯಾಯಪೀಠ, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ರಶ್ಮಿ ಮಹೇಶ್ ಅವರಿಗೆ 50 ಸಾವಿರ ರೂಪಾಯಿ ದಂಡ ವಿಧಿಸಿತ್ತು. ದಂಡ ಮೊತ್ತವನ್ನು 15 ದಿನದಲ್ಲಿ ಪಾವತಿಸಬೇಕು. ತಪ್ಪಿದಲ್ಲಿ ನ್ಯಾಯಾಂಗ ನಿಂದನೆ ಆರೋಪದಡಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಆದೇಶಿಸಿತ್ತು.
ಈ ಆದೇಶದ ಪಾಲನೆಯ ಹಿನ್ನೆಲೆಯಲ್ಲಿ ರಶ್ಮಿ ಮಹೇಶ್ ಅವರು ತಮ್ಮ ಸ್ವಂತ ಹಣದಿಂದ 50 ಸಾವಿರ ರೂಪಾಯಿ ಪಾವತಿ ಮಾಡಿದ್ದಾರೆ. ಅದನ್ನು ಪರಿಗಣಿಸಿದ ವಿಭಾಗೀಯ ಪೀಠ, ರಶ್ಮಿ ಮಹೇಶ್ ಮತ್ತು ರಾಜ್ಯ ಉನ್ನತ ಶಿಕ್ಷಣ ಇಲಾಖೆ ಮೇಲಿನ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಕೈಬಿಟ್ಟಿದೆ.
ಪ್ರಕರಣದ ವಿವರವೇನು..?
ರಾಜ್ಯ ಸರ್ಕಾರಿ ನೌಕರರಿಗೆ ಸರಿಸಮನಾಗಿ ತಮಗೂ ವೇತನ ಹಾಗೂ ಸೌಲಭ್ಯ ವಿಸ್ತರಿಸಲು ನಿರ್ದೇಶಿಸಬೇಕು ಎಂದು ಕೋರಿ ದಯಾನಂದ ಸಾಗರ ಶಿಕ್ಷಣ ಸಂಸ್ಥೆಗಳ 27 ಬೋಧಕೇತರ ಕಾಯಂ ನೌಕರರು 2019ರಲ್ಲಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಉನ್ನತ ಶಿಕ್ಷಣ ಇಲಾಖೆಯ ಮರು ಪಶೀಲನಾ ಪ್ರಾಧಿಕಾರ (ಇಲಾಖೆ ಪ್ರಧಾನ ಕಾರ್ಯದರ್ಶಿ) ಅರ್ಜಿದಾರ ನೌಕರರ ಮನವಿಯನ್ನು ಕರ್ನಾಟಕ ಶಿಕ್ಷಣ ಕಾಯ್ದೆ-1983ರ ಅಡಿಯಲ್ಲಿ ಪುನರ್ ವಿಮರ್ಶೆ ಮಾಡಿ ನಾಲ್ಕು ತಿಂಗಳಲ್ಲಿ ಸೂಕ್ತ ಆದೇಶ ಹೊರಡಿಸಬೇಕು ಎಂದು 2020ರ ಮಾರ್ಚ್ 3ರಂದು ಹೈಕೋರ್ಟ್ ಏಕ ಸದಸ್ಯಪೀಠವು ಈ ಆದೇಶ ಮಾಡಿತ್ತು.
ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಲ್.ಹರ್ಷ ಅವರು 2021ರ ಡಿಸೆಂಬರ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿ, ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠದ ಆದೇಶವನ್ನು ಮರು ಪರಿಶೀಲನಾ ಪ್ರಾಧಿಕಾರ ಪಾಲಿಸಿಲ್ಲ ಎಂದು ಆರೋಪಿಸಿದ್ದರು. ಹಾಗಾಗಿ ವಿಭಾಗೀಯ ಪೀಠ ಮರು ಪಶೀಲನಾ ಪ್ರಾಧಿಕಾರದ ಅಧಿಕಾರಿಯಾದ ರಶ್ಮಿ ಮಹೇಶ್ ಅವರಿಗೆ 50 ಸಾವಿರ ರೂಪಾಯಿ ದಂಡ ವಿಧಿಸಿತ್ತು. ರಶ್ಮಿ ಮಹೇಶ್ ದಂಡ ಕಟ್ಟಿರುವುದೇ ಅಲ್ಲದೆ, ಏಕಸದಸ್ಯಪೀಠದ ಆದೇಶವನ್ನು ಪಾಲನೆ ಮಾಡಿದ್ದಾರೆ.












Click it and Unblock the Notifications