ಸ್ಪರ್ಧಿಸಿದ್ದು ಆಕಸ್ಮಿಕ, ಇನ್ನು ಮುಂದೆ ಚುನಾವಣೆಗೆ ನಿಲ್ಲುವುದಿಲ್ಲ: ದೇವೇಗೌಡ
ಬೆಂಗಳೂರು, ಜೂನ್ 29: ತಾವು ಇನ್ನು ಮುಂದೆ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು.
ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿಯೂ ಸ್ಪರ್ಧಿಸುವ ಉದ್ದೇಶ ಇರಲಿಲ್ಲ. ಆದರೆ, ಆಕಸ್ಮಿಕವಾಗಿ ಸ್ಪರ್ಧೆಗೆ ಇಳಿಯಬೇಕಾಯಿತು. ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನಾನು ದೆಹಲಿಗೆ ಹೋಗುವ ಸನ್ನಿವೇಶ ಇಲ್ಲ ಎಂದರು.
ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶ ತಮಗೆ ಇರಲಿಲ್ಲ. ಅವರನ್ನು ಸಿಎಂ ಮಾಡಿ ಎಂದು ಕಾಂಗ್ರೆಸ್‌ನವರ ಬಳಿ ನಾವು ಕೇಳಿರಲಿಲ್ಲ. 37 ಸ್ಥಾನಗಳನ್ನು ಇಟ್ಟುಕೊಂಡು ಸಿಎಂ ಸ್ಥಾನ ಕೇಳಲು ಸಾಧ್ಯವಿಲ್ಲ. ಆದರೆ, ಕಾಂಗ್ರೆಸ್ ಹೈಕಮಾಂಡ್ ಒತ್ತಾಯಕ್ಕೆ ಕುಮಾರಸ್ವಾಮಿ ಸಿಎಂ ಆಗಬೇಕಾಯಿತು ಎಂದು ದೇವೇಗೌಡರು ಪುನರುಚ್ಚರಿಸಿದರು.
ಪಕ್ಷದ ಕಚೇರಿಯಲ್ಲಿಯೇ ಇದ್ದು ಎಲ್ಲ ಬೆಳವಣಿಗೆಗಳನ್ನು ಗಮನಿಸಿದ್ದೇನೆ. ಪಕ್ಷದ ಸಂಘಟನೆಗೆ ಸಾಕಷ್ಟು ದುಡಿದಿದ್ದೇನೆ. ಇನ್ನು ಮುಂದೆ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿ ದೆಹಲಿಗೆ ಹೋಗುವ ಇಚ್ಛೆ ಇಲ್ಲ ಎಂದರು.

ಖರ್ಗೆಯವರೂ ಒತ್ತಡ ಹೇರಿದ್ದರು
37 ಸ್ಥಾನ ಇಟ್ಟುಕೊಂಡು ಮುಖ್ಯಮಂತ್ರಿ ಸ್ಥಾನ ಕೇಳೋಕೆ ಹೋಗ್ತೀವಾ? ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶ ಇರಲಿಲ್ಲ. ಮುಖ್ಯಮಂತ್ರಿ ಸ್ಥಾನ ನಮಗೆ ಬೇಡ ಎಂದಿದ್ದೆ. ಆದರೆ, ರಾಹುಲ್ ಮತ್ತು ಸೋನಿಯಾ ಗಾಂಧಿ ಅವರೇ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು ಎಂದರು. ಮಲ್ಲಿಕಾರ್ಜುನ ಖರ್ಗೆಯವರೂ ಒತ್ತಡ ಹೇರಿದ್ದರು. ಕಾಂಗ್ರೆಸ್‌ನವರೇ ಕುಮಾರಸ್ವಾಮಿ ಸಿಎಂ ಎಂದು ಘೋಷಿಸಿದರು ಎಂದು ದೇವೇಗೌಡ ಹೇಳಿದರು.

ಕುಟುಂಬ ರಾಜಕಾರಣ ಮಾಡಿಲ್ಲ
ನಾನು ಇದುವರೆಗೂ ರಾಜಕೀಯ ಜೀವನದಲ್ಲಿ ಕುಟುಂಬ ರಾಜಕಾರಣ ಮಾಡಿಲ್ಲ. ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗದವರನ್ನು ಗುರುತಿಸಿ ಅವರಿಗೆ ಆದ್ಯತೆ ನೀಡುತ್ತಾ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ ಎಂದು ತಮ್ಮ ಮೇಲಿನ ಕುಟುಂಬ ರಾಜಕಾರಣದ ಆರೋಪವನ್ನು ತಳ್ಳಿಹಾಕಿದರು.

ನಿಖಿಲ್ ಶಕ್ತಿಮೀರಿ ಕೆಲಸ ಮಾಡಿದ್ದಾನೆ
ನಿಖಿಲ್ ಒಬ್ಬ ಯುವಕನಾಗಿ ಶಕ್ತಿ ಮೀರಿ ಕೆಲಸ ಮಾಡಿದ್ದಾನೆ. ಅತ ಒಳ್ಳೆಯ ಹೆಸರು ಪಡೆದುಕೊಳ್ಳುತ್ತಿದ್ದಾನೆ. ನಿಖಿಲ್ ರಾಜಕೀಯಕ್ಕೆ ಬರುತ್ತನೆಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ ಎಂದು ದೇವೇಗೌಡ, ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಹೊಗಳಿದರು.

ಯಾವ ಧರ್ಮ ಹೇಳಿ?
ಬಹಳ ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿ ಎಂದು ನಾನು ಕೇಳಲಿಲ್ಲ. 37 ಸೀಟುಗಳನ್ನು ತೆಗೆದುಕೊಂಡು ಮುಖ್ಯಮಂತ್ರಿ ಆಗು ಎಂದರೆ ಯಾವ ಧರ್ಮ ಹೇಳಿ? ಆದರೆ ದೆಹಲಿಯ ಹೈಕಮಾಂಡ್ ಬಂದು ಕುಮಾರಸ್ವಾಮಿ ಅವರೇ ಸಿಎಂ ಆಗಲಿ ಎಂದು ಒತ್ತಾಯಿಸಿದರು ಎಂಬುದಾಗಿ ದೇವೇಗೌಡ ಅವರು ಶುಕ್ರವಾರ ಹೇಳಿದ್ದರು.












Click it and Unblock the Notifications