ಸಿಎಂ ವಿರುದ್ಧ ನಾನು ಕರಪತ್ರ ಹಂಚಿಲ್ಲ- ನಾಗೇಶ್ ಸ್ಪಷ್ಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‍ನ ಯಾವುದೇ ಮುಖಂಡರ ವಿರುದ್ಧ ನಾನು ಯಾವುದೇ ಕರಪತ್ರವನ್ನಾಗಲೀ ಅಥವಾ ಆರೋಪಗಳನ್ನಾಗಲೀ ಮಾಡಿಲ್ಲ ಎಂದು ನಲ್ಲೂರಳ್ಳಿ ನಾಗೇಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಬೆಂಗಳೂರು, ಮೇ 12: ಸಿಎಂ ವಿರುದ್ಧ ನಾನು ಯಾವುದೇ ಕರಪತ್ರವನ್ನು ಹಂಚಿಲ್ಲ. ನನಗೆ ಟಿಕೆಟ್ ತಪ್ಪಿಸಲು ನನ್ನ ಹೆಸರಿನಲ್ಲಿ ಕರಪತ್ರ ಹಂಚಲಾಗಿದೆ ಎಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ನಲ್ಲೂರಳ್ಳಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‍ನ ಯಾವುದೇ ಮುಖಂಡರ ವಿರುದ್ಧ ನಾನು ಯಾವುದೇ ಕರಪತ್ರವನ್ನಾಗಲೀ ಅಥವಾ ಆರೋಪಗಳನ್ನಾಗಲೀ ಮಾಡಿಲ್ಲ. ರಾಜ್ಯದ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಕೆ.ಸಿ ವೇಣುಗೋಪಾಲ್ ಬೆಂಗಳೂರಿಗೆ ಬಂದಾಗ ನನ್ನ ಬೆಳವಣಿಗೆ ಸಹಿಸದ ಕೆಲವು ಕಿಡಿಗೇಡಿಗಳು ನನ್ನ ಹೆಸರಿನಲ್ಲಿ ಕರಪತ್ರ ಹಂಚಿದ್ದಾರೆ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಲ್ಲೂರಳ್ಳಿ ನಾಗೇಶ್, ಕಾಂಗ್ರೆಸ್ ನಾಯಕರ ಜತೆ ಸನ್ಮಾನ್ಯ ವೇಣುಗೋಪಾಲ್ ಅವರು ಸಮಾಲೋಚನೆ ನಡೆಸುವ ವೇಳೆ ಕೆಲವು ದುಷ್ಕರ್ಮಿಗಳು ಮುಖ್ಯಮಂತ್ರಿಗಳ ವಿರುದ್ಧ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪರವಾಗಿ ನಾನು ಮತ್ತು ಮಾಗಡಿ ಜಯರಾಂ ಹೆಸರಿನಲ್ಲಿ ಹೇಳಿಕೆ ನೀಡಿರುವ ರೀತಿಯಲ್ಲಿ ಕರಪತ್ರಗಳನ್ನು ಹಂಚಿದ್ದಾರೆ.
ಈ ಕರಪತ್ರದಲ್ಲಿ ನನ್ನ ಮತ್ತು ಮಾಗಡಿ ಜಯರಾಂ ಎಂಬುವರ ಭಾವಚಿತ್ರಗಳನ್ನೂ ಮುದ್ರಿಸಿ ದುರುಪಯೋಗಪಡಿಸಿಕೊಂಡಿದ್ದಾರೆ. ಈ ಮೂಲಕ ದುಷ್ಕರ್ಮಿಗಳು ನನ್ನ ತೇಜೋವಧೆ ಮಾಡುವ ಕುತಂತ್ರ ನಡೆಸಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದು, ಶಿಸ್ತಿನ ಸಿಪಾಯಿಯಂತೆ ನನ್ನ ಮಹದೇವಪುರ ಕ್ಷೇತ್ರದಲ್ಲಿ ಪಕ್ಷದ ಬೆಳವಣಿಗೆಗೆ ಕೆಲಸ ಮಾಡುತ್ತಿದ್ದೇನೆ. ಪಕ್ಷದ ಯಾವುದೇ ಹಿರಿಯ ಮತ್ತು ಪ್ರಭಾವಿ ಮುಖಂಡರ ವಿರುದ್ಧ ಹೇಳಿಕೆ ನೀಡುವಷ್ಟು ನಾನು ದೊಡ್ಡ ನಾಯಕನಲ್ಲ ಎಂದು ಅವರು ಹೇಳಿದರು.

2013 ರ ವಿಧಾನಸಭೆ ಚುನಾವಣೆ ವೇಳೆ ನಾನು ಮಹದೇವಪುರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ, ಪಕ್ಷದ ಸೂಚನೆಯಂತೆ ಅಂದು ಪಕ್ಷದ ಅಭ್ಯರ್ಥಿಯಾಗಿದ್ದ ಎ.ಸಿ.ಶ್ರೀನಿವಾಸ್ ಅವರ ಗೆಲುವಿಗೆ ತನು-ಮನ-ಧನ ಅರ್ಪಿಸಿ ಸಾಕಷ್ಟು ಕೆಲಸ ಮಾಡಿದ್ದೇನೆ. ಆದಾಗ್ಯೂ ಬೇರೆ ಕ್ಷೇತ್ರದಿಂದ ವಲಸೆ ಬಂದವರು ಎಂಬ ಕಾರಣಕ್ಕೆ ಶ್ರೀನಿವಾಸ್ ಅವರು ಸೋಲನುಭವಿಸಬೇಕಾಯಿತು.
ಅಂದಿನಿಂದ ನಾನು ಸ್ಥಳೀಯವಾಗಿ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಪಕ್ಷವನ್ನು ಸಂಘಟಿಸುತ್ತಾ ಬಂದಿದ್ದೇನೆ. ಈ ಬಾರಿಯೂ ಅಂದರೆ 2018 ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದೇನೆ. ಕೆ.ಆರ್.ಪುರಂ ಕ್ಷೇತ್ರದ ಶಾಸಕರಾಗಿರುವ ಬೈರತಿ ಬಸವರಾಜ್ ಸೇರಿದಂತೆ ಕಾಂಗ್ರೆಸ್‍ನ ಅನೇಕ ಮುಖಂಡರು ನಮ್ಮ ಕ್ಷೇತ್ರದ ಸ್ಥಳೀಯರ ಪರವಾಗಿದ್ದಾರೆ ಎಂದರು.
ಆದರೆ, ನನ್ನ ಈ ಏಳ್ಗೆಯನ್ನು ಸಹಿಸದ ಎ.ಸಿ.ಶ್ರೀನಿವಾಸ್ ಅವರು ನನಗೆ ಈ ಬಾರಿ ಟಿಕೆಟ್ ತಪ್ಪಿಸಬೇಕೆಂಬ ಕುತಂತ್ರ ನಡೆಸಿ ನಕಲಿ ಪತ್ರಕರ್ತ ಬೈರಪ್ಪ ಎಂಬುವರನ್ನು ಬಳಸಿಕೊಂಡು ಅವರ ಮೂಲಕ ನನ್ನ ಹೆಸರಿನಲ್ಲಿ ಕರಪತ್ರವನ್ನು ಹಂಚಿಸಿದ್ದಾರೆ.
ಈ ಕುತಂತ್ರ ನಡೆಸಿರುವ ಶ್ರೀನಿವಾಸ್ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ಪಕ್ಷದ ವರಿಷ್ಠರಿಗೆ ಈ ಮೂಲಕ ಮನವಿ ಮಾಡುತ್ತಿದ್ದೇನೆ ಎಂದು ತಿಳಿಸಿದ ನಾಗೇಶ್, ಯಾವುದೇ ಕಾರಣಕ್ಕೂ ನಾನು ಹಿಂದೆಯೂ, ಮುಂದೆಯೂ ಪಕ್ಷದ ಯಾವುದೇ ನಾಯಕರ ವಿರುದ್ಧ ಇಂತಹ ಕುತಂತ್ರದ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದರು.












Click it and Unblock the Notifications