• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾನೀಗ ಜೆಡಿಎಸ್ ಪಕ್ಷದಿಂದ ಸಂಪೂರ್ಣ ದೂರ; ಜಿ.ಟಿ. ದೇವೇಗೌಡ

|
Google Oneindia Kannada News

ಬೆಂಗಳೂರು, ನವೆಂಬರ್ 15: "ನಾನೀಗ ಜೆಡಿಎಸ್ ಪಕ್ಷದಿಂದ ಸಂಪೂರ್ಣವಾಗಿ ದೂರ ಉಳಿದಿದ್ದೇನೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪಕ್ಷದಲ್ಲೇ ಉಳಿಯುವಂತೆ ಹೇಳಿದ್ದಾರೆ. ಅವರಿಗೂ ನನ್ನ ನೋವು ಹೇಳಿದ್ದೇನೆ," ಎಂದು ಚಾಮುಂಡೇಶ್ವರಿ ಶಾಸಕ ಜಿ.ಟಿ. ದೇವೇಗೌಡ ಹೇಳಿದ್ದು, ಈ ಮೂಲಕ ಜೆಡಿಎಸ್ ಪಕ್ಷ ತೊರೆಯುವ ಬಗ್ಗೆ ಮತ್ತೊಮ್ಮೆ ಸುಳಿವು ನೀಡಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, "ಸದ್ಯ ನಡೆಯುವ ವಿಧಾನ ಪರಿಷತ್ ಚುನಾವಣೆಗೆ ನಮ್ಮ ಕುಟುಂಬದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಯಾರೊಬ್ಬರೂ ಸ್ಪರ್ಧಿಸುವುದಿಲ್ಲ. ಇದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ," ಎಂದರು.

ಮುಂಬರುವ ವಿಧಾನ ಪರಿಷತ್ ಚುನಾವಣೆಯನ್ನು ಮೈಸೂರಿನಲ್ಲಿ ನಮ್ಮ ನಾಯಕ ಜಿ.ಟಿ. ದೇವೇಗೌಡ ನೇತೃತ್ವದಲ್ಲೇ ಎದುರಿಸುತ್ತೇವೆ. ಅವರ ಕುಟುಂಬದ ಸದಸ್ಯರೊಬ್ಬರು ಅಭ್ಯರ್ಥಿ ಆಗಲೂಬಹುದು ಎಂದು ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ನೀಡಿದ್ದ ವ್ಯಂಗ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಜಿ.ಟಿ. ದೇವೇಗೌಡ, "ಪ್ರಚಾರಕ್ಕಾಗಿ ನಮ್ಮ ಕುಟುಂಬದ ಹೆಸರನ್ನು ಸಾ.ರಾ. ಮಹೇಶ್‌ ಪ್ರಸ್ತಾಪಿಸುತ್ತಿದ್ದಾರೆ," ಎಂದು ತಿರುಗೇಟು ನೀಡಿದರು.

"ನಾನು ಈಗಾಗಲೇ ಜೆಡಿಎಸ್ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದೇನೆ. ಅವರೂ ನಮ್ಮನ್ನು ಯಾವುದೇ ಕಾರ್ಯಕ್ರಮಕ್ಕೂ ಕರೆದಿಲ್ಲ. ನಿಖಿಲ್ ಕುಮಾರಸ್ವಾಮಿ ಪಕ್ಷ ಬಿಡಬೇಡಿ ಎಂದಿದ್ದರು. ನಮ್ಮ ಮನೆಗೆ ಬಂದು ಇಲ್ಲೇ ಇರಬೇಕೆಂದು ಹೇಳಿದ್ದರು. ಅವರಿಗೂ ಪಕ್ಷದಲ್ಲಿ ಆಗಿರುವ ಅಪಮಾನ, ನೋವು ಹೇಳಿದ್ದೇನೆ. ಎಲ್ಲಾ ಸಂದರ್ಭಗಳಲ್ಲೂ ನನ್ನನ್ನು ದೂರವಿಟ್ಟು ನಿರ್ಧಾರ ಕೈಗೊಂಡಿದ್ದಾರೆ. ಹೀಗಿರುವಾಗ ಹೇಗೆ ಪಕ್ಷದಲ್ಲಿ ಇರಲು ಸಾಧ್ಯ," ಎಂದು ಹಿರಿಯ ಶಾಸಕ ಜಿ.ಟಿ. ದೇವೇಗೌಡ ಪ್ರಶ್ನಿಸಿದರು.

ವಿಧಾನ ಪರಿಷತ್‌ ಚುನಾವಣೆಗೆ ಸಂಬಂಧಿಸಿದಂತೆ ಶನಿವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಶಾಸಕ ಸಾ.ರಾ. ಮಹೇಶ್‌, "ಜಿ.ಟಿ. ದೇವೇಗೌಡ ನಮ್ಮ ನಾಯಕರು. ನಮ್ಮ ಪಕ್ಷದ ಶಾಸಕರು. ಅವರ ನೇತೃತ್ವದಲ್ಲಿ ಸಭೆ ನಡೆಸಿ ಸಿದ್ಧತೆ ನಡೆಸಲಾಗುವುದು. ವಿಧಾನ ಪರಿಷತ್‌ ಚುನಾವಣೆಯಲ್ಲಿ ಜಿ.ಟಿ. ದೇವೇಗೌಡರ ಕುಟುಂಬದವರು ಕಣಕ್ಕಿಳಿದರೆ ನಮಗೆ ತುಂಬಾ ಸಂತೋಷ. ಅವರು ಪಕ್ಷಕ್ಕಾಗಿ ದುಡಿದಿದ್ದಾರೆ. ಅವರ ಕುಟುಂಬದವರೂ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರೇ (ಜಿ.ಟಿ. ದೇವೇಗೌಡ) ತೀರ್ಮಾನ ಮಾಡಿದರೆ ನಾವು ಕೆಲಸ ಮಾಡುತ್ತೇವೆ," ಎಂದು ಹೇಳಿದ್ದರು.

I am Completely Away From The JDS Party; GT Deve Gowda

ಶಾಸಕ ಸಾ.ರಾ. ಮಹೇಶ್‌ ಸುದ್ದಿಗೋಷ್ಠಿ ಬಳಿಕ ಪ್ರತಿಕ್ರಿಯಿಸಿದ್ದ ಜಿ.ಟಿ. ದೇವೇಗೌಡ, ನಮ್ಮ ಕುಟುಂಬದಿಂದ ಯಾರೂ ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನಮ್ಮ ಕುಟುಂಬಕ್ಕೆ ಟಿಕೆಟ್ ನೀಡುವ ವಿಚಾರ ಯಾರದ್ದು ಎಂಬುದು ನನಗೆ ಗೊತ್ತಿಲ್ಲ. ನಾನು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರೊಂದಿಗೂ ಸಂಪರ್ಕದಲ್ಲಿ ಇಲ್ಲ. ಹಾಗಾಗಿ ನನಗೆ ಅದರ ಮಾಹಿತಿ ಇಲ್ಲ ಎಂದಿದ್ದರು.

ಈಗಾಗಲೇ ಚಾಮುಂಡೇಶ್ವರಿ ಶಾಸಕ ಜಿ.ಟಿ. ದೇವೇಗೌಡ ಜೆಡಿಎಸ್‌ನಿಂದ ಒಂದು ಕಾಲು ಹೊರ ಇಟ್ಟಿದ್ದು, ಕಾಂಗ್ರೆಸ್‌ ಸೇರುತ್ತಾರೆ ಎಂಬ ಸುದ್ದಿ ದಟ್ಟವಾಗಿದೆ. ಇದಕ್ಕೆ ಪೂರಕ ಎಂಬಂತೆ ಇತ್ತೀಚಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿಗೆ ಬಂದಿದ್ದಾಗ ಇಬ್ಬರೂ ಪರಸ್ಪರ ಹೊಗಳಿಕೊಂಡಿದ್ದರು. ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಜಿ.ಟಿ. ದೇವೇಗೌಡ ಬೆಂಬಲಿತ ಅಭ್ಯರ್ಥಿಗಳು ಮತ ಚಲಾವಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ. ದೇವೇಗೌಡ ಅವರ ಎದುರಾಳಿಯೂ ಆಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯನವರೇ ಕಾಂಗ್ರೆಸ್ ತತ್ವ, ಸಿದ್ಧಾಂತಗಳನ್ನು ಒಪ್ಪಿ ನಮ್ಮ ಪಕ್ಷಕ್ಕೆ ಬರುವುದಿದ್ದರೆ ಬರಲಿ ಎಂದು ಹೇಳಿದ್ದರು. 2023ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಯಾರು ಯಾವ ಪಕ್ಷ ಸೇರಲಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿಯಲಿದೆ.

   ಆಸೀಸ್ ವಿರುದ್ಧ ಅಬ್ಬರಿಸಲು ರಿಜ್ವಾನ್ ಗೆ ಭಾರತೀಯ ವೈದ್ಯ ಮಾಡಿದ ಹೆಲ್ಪ್ ಏನು? | Oneindia Kannada
   English summary
   No one would contest from our family for the Legislative Council elections, Chamundeshwari MLA GT Devegowda said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X