"ಒಳ್ಳೆಯ ಹವಾಮಾನವಿದ್ರೆ ಏನ್ ಮಾಡೋದು, ಉಪ್ಪಿನಕಾಯಿ ಹಾಕೋದಾ?": ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತು ಹೈದರಾಬಾದೇ ಬೆಸ್ಟ್ ಎಂದ ಟೆಕ್ಕಿ
ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಯಾವುದು ಉತ್ತಮ ನಗರ ಎಂಬ ಬಗ್ಗೆ ನಡೆಯುವ ಚರ್ಚೆ ಇಂದು ನಿನ್ನೆಯದ್ದಲ್ಲ. ಐಟಿ ಉದ್ಯೋಗಿಗಳಿಗಂತೂ ಈ ಎರಡೂ ನಗರಗಳು ಸ್ವರ್ಗವೇ ಸರಿ. ಆದರೆ ಮೂಲಭೂತ ಸೌಕರ್ಯ ಮತ್ತು ದೈನಂದಿನ ಜೀವನದ ವಿಚಾರಕ್ಕೆ ಬಂದಾಗ ಜನರ ಅಭಿಪ್ರಾಯಗಳು ಭಿನ್ನವಾಗಿರುತ್ತವೆ. ಇದೀಗ ಇದೇ ವಿಚಾರವಾಗಿ ಹೈದರಾಬಾದ್ ಮೂಲದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಬೆಂಗಳೂರಿನ ಟ್ರಾಫಿಕ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇವಲ ಒಂದು ವಾರಗಳ ಕಾಲ ಬೆಂಗಳೂರಿನಲ್ಲಿ ಉಳಿದ್ದಿದ್ದ ಅವರು, ಇಲ್ಲಿನ ಟ್ರಾಫಿಕ್‌ಗೆ ರೋಸಿಹೋಗಿದ್ದು, ಎಷ್ಟೇ ಒಳ್ಳೆಯ ವಾತಾವರಣವಿದ್ದರೂ ಬೆಂಗಳೂರಿಗಿಂತ ಹೈದರಾಬಾದ್ ನಗರವೇ ವಾಸಿಸಲು ಯೋಗ್ಯವಾಗಿದೆ ಎಂದು ಹೇಳಿದ್ದಾರೆ. ಈ ಕುರಿತು ಅವರು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಹೊಸ ಚರ್ಚೆಗೆ ಹುಟ್ಟುಹಾಕಿದೆ.

ಹೈದರಾಬಾದ್ vs ಬೆಂಗಳೂರು : ವಾತಾವರಣಕ್ಕಿಂತ ಟ್ರಾಫಿಕ್ ಸಮಸ್ಯೆಯೇ ದೊಡ್ಡದು
ಬೆಂಗಳೂರು ನಗರವು ತನ್ನ ಆಹ್ಲಾದಕರ ವಾತಾವರಣಕ್ಕೆ ವಿಶ್ವದಾದ್ಯಂತ ಹೆಸರುವಾಸಿಯಾಗಿದೆ. ಇಲ್ಲಿನ ತಂಪಾದ ಹವಾಮಾನವೇ ಅನೇಕರು ಈ ನಗರವನ್ನ ಪ್ರೀತಿಸಲು ಮುಖ್ಯ ಕಾರಣ. ಆದರೆ, ಹೈದರಾಬಾದ್‌ನಿಂದ ಬಂದಿದ್ದ ಚೇತನಾ ಸಿಂಗ್ ಎಂಬ ಟೆಕ್ಕಿಗೆ ಇಲ್ಲಿನ ಟ್ರಾಫಿಕ್ ಸಮಸ್ಯೆ ಆಹ್ಲಾದಕರ ವಾತಾವರಣದ ಮೇಲಿನ ಪ್ರೀತಿಯನ್ನು ನುಂಗಿಹಾಕಿದೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಒಂದು ವಾರದ ತಮ್ಮ ಬೆಂಗಳೂರು ಪ್ರವಾಸದ ಅನುಭವವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
"ಹೈದರಾಬಾದ್‌ಗಿಂತ ಬೆಂಗಳೂರು ಉತ್ತಮ ಎಂದು ಯಾರು ಹೇಳಿದ್ದು? ಕಳೆದ ಒಂದು ವಾರದಿಂದ ನಾನು ಇಲ್ಲೇ ಇದ್ದೇನೆ. ಇಲ್ಲಿನ ಟ್ರಾಫಿಕ್ ನೋಡಿ ನನಗೆ ನಿಜಕ್ಕೂ ಸಾಕಾಗಿ ಹೋಗಿದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಒಂದೂವರೆಯಿಂದ ಎರಡು ಗಂಟೆಗಳ ಕಾಲ ಬೇಕಾಗುತ್ತದೆ" ಎಂದು ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ವೈರಲ್ ವಿಡಿಯೋ: ಒಳ್ಳೆಯ ಹವಾಮಾನವನ್ನು ಉಪ್ಪಿನಕಾಯಿ ಹಾಕಬೇಕಾ?
ಯಾವುದೇ ಒಂದು ನಗರವನ್ನ ಸುತ್ತಾಡಲು ಅಥವಾ ಆನಂದಿಸಲು ಸುಲಭವಾದ ಪ್ರಯಾಣದ ವ್ಯವಸ್ಥೆ ಇರಬೇಕು. ಆದರೆ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಲುಕಿದರೆ ಹೊರಗೆ ಹೋಗುವುದೇ ಬೇಡ ಎನಿಸುತ್ತದೆ ಎಂಬುದು ಚೇತನಾ ಅವರ ವಾದ. ವಿಡಿಯೋದಲ್ಲಿ ಮಾತನಾಡಿರುವ ಅವರು, "ಒಳ್ಳೆಯ ಹವಾಮಾನ ಇದೆ ಎಂದು ನಾನೇನು ಮಾಡಲಿ? ನಾನು ಎಲ್ಲೂ ಹೊರಗೆ ಹೋಗಲು ಸಾಧ್ಯವಾಗದಿದ್ದಾಗ ಈ ಹವಾಮಾನವನ್ನು ಉಪ್ಪಿನಕಾಯಿ ಹಾಕಬೇಕಾ? ನನಗೆ ಹೊರಗೆ ಹೋಗಲು ಆಗುತ್ತಿಲ್ಲ, ಯಾವುದೇ ಕೆಲಸ ಮಾಡಲು ಆಗುತ್ತಿಲ್ಲ. ನಿಜ ಹೇಳಬೇಕೆಂದರೆ ನಾನು ಇಲ್ಲಿನ ಟ್ರಾಫಿಕ್ ಅನ್ನ ದ್ವೇಷಿಸುತ್ತೇನೆ" ಎಂದು ಕಟುವಾಗಿ ಟೀಕಿಸಿದ್ದಾರೆ.
ಇಲ್ಲಿನ ಟ್ರಾಫಿಕ್ ಸಮಸ್ಯೆ ಬಗೆಹರಿಯುವವರೆಗೂ ಎಷ್ಟೇ ಒಳ್ಳೆಯ ವಾತಾವರಣವಿದ್ದರೂ ಅದು ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನನಗೆ ಬೆಂಗಳೂರಿಗಿಂತ ಹೈದರಾಬಾದ್ ತುಂಬಾನೇ ಉತ್ತಮ ಎನಿಸುತ್ತಿದೆ ಎಂದು ಚೇತನಾ ಹೇಳಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ
ಚೇತನಾ ಸಿಂಗ್ ಹಂಚಿಕೊಂಡಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರು ಕೂಡ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಅಚ್ಚರಿಯೆಂದರೆ, ಬೆಂಗಳೂರಿನ ಅನೇಕ ನಿವಾಸಿಗಳು ಕೂಡ ಇವರ ಮಾತಿಗೆ ದನಿಗೂಡಿಸಿದ್ದು, ದೈನಂದಿನ ಟ್ರಾಫಿಕ್ ಕಿರಿಕಿರಿಯನ್ನ ಒಪ್ಪಿಕೊಂಡಿದ್ದಾರೆ.
"ಈ ಸುತ್ತಿನಲ್ಲಿ ಹೈದರಾಬಾದ್ ಗೆದ್ದಿದೆ" ಎಂದು ಒಬ್ಬ ಬಳಕೆದಾರರು ಕಮೆಂಟ್ ಮಾಡಿದರೆ, ಮತ್ತೊಬ್ಬರು "ಎಷ್ಟೇ ಒಳ್ಳೆಯ ವಾತಾವರಣವಿದ್ದರೂ ಅದು ಟ್ರಾಫಿಕ್ ಸಮಸ್ಯೆಯನ್ನ ಸರಿಪಡಿಸಲು ಸಾಧ್ಯವಿಲ್ಲ" ಎಂದು ಬರೆದುಕೊಂಡಿದ್ದಾರೆ. ದೈನಂದಿನ ಕಚೇರಿ ಪ್ರಯಾಣ ಅಥವಾ ಸಾಮಾನ್ಯ ಓಡಾಟವು ಕಷ್ಟಕರವಾದಾಗ ಆ ನಗರದ ಮೇಲಿನ ಅಭಿಪ್ರಾಯವೇ ಬದಲಾಗುತ್ತದೆ ಎನ್ನುವುದಕ್ಕೆ ಈ ಘಟನೆ ಉದಾಹರಣೆ.
ಐಟಿ ಕಾರಿಡಾರ್‌ಗಳಾದ ಔಟರ್ ರಿಂಗ್ ರೋಡ್, ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಭಾಗಗಳಲ್ಲಿ ಟ್ರಾಫಿಕ್ ಸಮಸ್ಯೆ ಮಿತಿಮೀರಿದೆ. ಕೇವಲ ಐದಾರು ಕಿಲೋಮೀಟರ್ ದೂರದ ಕಚೇರಿ ತಲುಪಲು ಗಂಟೆಗಟ್ಟಲೆ ವಾಹನದಲ್ಲಿಯೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೆಟ್ರೋ ಕಾಮಗಾರಿಗಳು ಮತ್ತು ರಸ್ತೆ ಗುಂಡಿಗಳಿಂದಾಗಿ ದಟ್ಟಣೆ ಮತ್ತಷ್ಟು ಹೆಚ್ಚಾಗಿದೆ.
ಹೈದರಾಬಾದ್‌ನಲ್ಲಿ ರಸ್ತೆ ಮೂಲಸೌಕರ್ಯಗಳು ಮತ್ತು ಫ್ಲೈಓವರ್‌ಗಳ ನಿರ್ಮಾಣ ತ್ವರಿತಗತಿಯಲ್ಲಿ ಸಾಗುತ್ತಿರುವುದರಿಂದ ಅಲ್ಲಿ ಟ್ರಾಫಿಕ್ ನಿಯಂತ್ರಣದಲ್ಲಿದೆ. ಹೀಗಾಗಿಯೇ ಹೊರರಾಜ್ಯದ ಟೆಕ್ಕಿಗಳು ಬೆಂಗಳೂರಿನ ಹವಾಮಾನವನ್ನ ಮೆಚ್ಚಿದರೂ, ಟ್ರಾಫಿಕ್ ವಿಚಾರದಲ್ಲಿ ಹೈದರಾಬಾದ್ ನಗರಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತಿದ್ದಾರೆ.


Click it and Unblock the Notifications
