ಒಡೆದ ಹುಳಿಮಾವು ಕೆರೆ ದಂಡೆ; ಹಾವು ಹಿಡಿಯಲು ಕರೆ
ಬೆಂಗಳೂರು, ನವೆಂಬರ್ 25 : ಹುಳಿಮಾವು ಕೆರೆ ದಂಡೆ ಒಡೆದು ವಿವಿಧ ಬಡಾವಣೆಗಳಿಗೆ ಭಾನುವಾರ ನೀರು ನುಗ್ಗಿತ್ತು. ನೀರು ಇಳಿದು ಜನರು ಮನೆಗಳತ್ತ ಹೊರಟರೆ ಹಾವುಗಳ ಕಾಟ ಆರಂಭವಾಗಿದೆ. ಹಾವು ಹಿಡಿಯಿರಿ ಎಂದು ಪಾಲಿಕೆಗೆ ಕರೆಗಳು ಹೋಗುತ್ತಿವೆ.
ಕೆರೆ ನೀರಿನಿಂದ ವಿವಿಧ ಬಡಾವಣೆಗಳು ಜಲಾವೃತವಾಗಿತ್ತು. ಸೋಮವಾರ ನೀರು ಇಳಿಮುಖವಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೀರು, ಕಸ ಆವರಿಸಿದ ಜನ ವಸತಿ ಸ್ಥಳದಲ್ಲಿ ಸ್ವಚ್ಚತೆಯ ಕಾರ್ಯವನ್ನು ಕೈಗೊಂಡಿದೆ.

ಹುಳಿಮಾವು ಕೆರೆ ಒಡೆದಿದ್ದರಿಂದ ಸಂತ್ರಸ್ತರಾಗಿ, ಆಶ್ರಯ ತಾಣದಲ್ಲಿ ಉಳಿದು ಕೊಂಡಿರುವ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸಂಚಾರಿ ಶೌಚಾಲಯಗಳ ವ್ಯವಸ್ಥೆಯನ್ನು ಬಿಬಿಎಂಪಿಯಿಂದ ಮಾಡಲಾಗಿದೆ. ನೀರು ಇಳಿಮುಖವಾಗಿದ್ದು, ಜನರು ಮನೆಯತ್ತ ಧಾವಿಸುತ್ತಿದ್ದಾರೆ.

ನೀರು ಇಳಿಮುಖವಾದರೂ ಕಸ ಆವರಿಸಿದೆ. ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಫಾಗಿಂಗ್ ಮಾಡಲಾಗುತ್ತಿದೆ. ನೀರಿನ ಜೊತೆ ಕೆರೆಯಲ್ಲಿದ್ದ ಹಾವುಗಳು ಬಡಾವಣೆಗಳಿಗೆ ನುಗ್ಗಿವೆ. ಅವುಗಳನ್ನು ಹಿಡಿಯಿರಿ ಎಂದು ಪಾಲಿಕೆಗೆ ಕರೆ ಬರುತ್ತಿದೆ.
ವರದಿ ಕೇಳಿದ ಲೋಕಾಯುಕ್ತ : ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಕೆರೆ ಒಡೆದ ಬಗ್ಗೆ ವರದಿ ನೀಡುವಂತೆ ಬಿಬಿಎಂಪಿಗೆ ಸೂಚನೆ ನೀಡಿದ್ದಾರೆ. ಸಂತ್ರಸ್ತರಾದವರಿಗೆ ಪರಿಹಾರ ನೀಡುವ ಕುರಿತು ಚಿಂತನೆ ನಡೆಸುವಂತೆ ತಿಳಿಸಿದ್ದಾರೆ.
ಕಂದಾಯ ಸಚಿವ ಆರ್. ಅಶೋಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. "ಯಾರೋ ಸ್ವಾರ್ಥಕ್ಕೆ ಕೆರೆ ಕಟ್ಟೆ ಒಡೆಯುವ ಕೆಲಸ ಮಾಡಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ಅವರನ್ನು ಹಿಡಿದು ಕ್ರಮ ಕೈಗೊಳ್ಳುತ್ತೇವೆ" ಎಂದು ಹೇಳಿದರು.











Click it and Unblock the Notifications