ಮನೆ ಗೋಡೆ ಕುಸಿದು ಇಬ್ಬರು ಮಕ್ಕಳ ಸಾವು

ಶುಕ್ರವಾರ ಸುರಿದ ರಾತ್ರಿ ಸುರಿದ ಭಾರಿ ಮಳೆಗೆ ದೊಮ್ಮಲೂರು ಲೇಜೌಟ್ ನ ಎ.ಕೆ ಕಾಲೋನಿಯಲ್ಲಿ ಮನೆ ಕುಸಿದು ಮನೋಜ್ (14) ಮತ್ತು ತನೋಜ್ (12) ಎಂಬ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದ ನಾಗಮ್ಮ ಅವರಿಗೆ ಗಂಭೀರವಾದ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತ ಮಕ್ಕಳು ಕೆಆರ್ಎಲ್ಎಸ್ ಶಾಲೆಯ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಶನಿವಾರ ಮುಂಜಾನೆ ಮೂರು ಗಂಟೆಯ ಸಮಯದಲ್ಲಿ ಗೋಡೆ ಕುಸಿದು ಬಿದ್ದಿದೆ. ತಕ್ಷಣ ಸ್ಥಳೀಯರು ನಾಗಮ್ಮ ಅವರನ್ನು ರಕ್ಷಿಸಿ, ಸ್ಥಳೀಯ ಆಸ್ಪತ್ರಗೆ ದಾಖಲಿಸಿದ್ದಾರೆ. ಆದರೆ, ಮಕ್ಕಳು ಅವಶೇಷಗಳ ಅಡಿ ಸಿಲುಕು ಮೃತಪಟ್ಟಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಬಿಬಿಎಂಪಿಯ ಅಧಿಕಾರಿಗಳು ಮತ್ತು ಸ್ಥಳೀಯ ಶಾಸಕ ಹ್ಯಾರೀಸ್ ಆಗಮಿಸಬೇಕು ಎಂದು ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಕೆಆರ್ಎಲ್ಎಸ್ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.
ಸಚಿವರ ಆಗಮನ : ಘಟನಾ ಸ್ಥಳಕ್ಕೆ ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಬಿಬಿಎಂಪಿ ಮೇಯರ್ ಕಟ್ಟೆ ಸತ್ಯನಾರಾಯಣ, ಶಾಸಕ ಹ್ಯಾರೀಸ್ ಅವರು 11.30ರ ಸುಮಾರಿಗೆ ಆಗಮಿಸಿದ್ದಾರೆ. ಮೃತರ ಕುಟುಂಬಕ್ಕೆ ಸಚಿವರು 5 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ.
13 ದಿನದಲ್ಲಿ 314 ಮಿ.ಮೀ ಮಳೆ : ಬೆಂಗಳೂರು ನಗರದಲ್ಲಿ ಕಳೆದ 13 ದಿನಗಳಿಂದ 314.41 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ವಾಡಿಕೆಯಂತೆ ಸೆಪ್ಟೆಂಬರ್ ತಿಂಗಳಿನಲ್ಲಿ ನಗರದಲ್ಲಿ 211.5 ಮಿ.ಮೀ ಮಳೆಯಾಗಬೇಕಿತ್ತು. ಆದರೆ, ಈ ಬಾರಿ ಅಧಿಕ ಮಳೆಯಾಗಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದರಿಂದ ನಗರದಲ್ಲಿ ಭಾರೀ ಮಳೆ ಸುರಿದಿದೆ. ಇನ್ನೆರಡು ದಿನ ಇದೇ ರೀತಿಯ ಪರಿಸ್ಥಿತಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಪುಟ್ಟಣ್ಣ ಹೇಳಿದ್ದಾರೆ.












Click it and Unblock the Notifications