ಕರ್ನಾಟಕದಲ್ಲಿ ತುರ್ತಾಗಿ ಸೀರೋ ಸಮೀಕ್ಷೆ ನಡೆಸುವಂತೆ ಟಿಎಸಿ ಸಲಹೆ
ಬೆಂಗಳೂರು, ಆಗಸ್ಟ್ 07: ರಾಜ್ಯದಲ್ಲಿ ತುರ್ತಾಗಿ ಸೀರೋ ಸಮೀಕ್ಷೆ ನಡೆಸುವಂಎ ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ.
"ಎರಡನೇ ಅಲೆಯ ನಂತರ ವೈರಸ್‌ನ ಪ್ರಸ್ತುತ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಮತ್ತು ಅದು ಮಕ್ಕಳನ್ನು ಒಳಗೊಂಡಿರಬೇಕು. ಇದು ಎರಡನೇ ಅಲೆಯನ್ನು ಕೊನೆಗೊಳಿಸಲು ಮತ್ತು ಮೂರನೆಯ ಅಲೆಯನ್ನು ತಗ್ಗಿಸಲು ನಮಗೆ ಸಹಾಯ ಮಾಡುತ್ತದೆ ಎಂದು ಟಿಎಸಿ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್ ಅವರು ಹೇಳಿದ್ದಾರೆ.
ಪ್ರಯೋಗಾಲಯದ ದೃಢೀಕರಣವಿಲ್ಲದ ಪ್ರಕರಣಗಳು ಮತ್ತು ಲಕ್ಷಣರಹಿತ ಹಾಗೂ ಸೌಮ್ಯ ಪ್ರಕರಣಗಳು ಸ್ಥಳೀಯ ಕಣ್ಗಾವಲು ವ್ಯವಸ್ಥೆಯಿಂದ ತಪ್ಪಿಹೋಗುತ್ತವೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಹೇಳಿದ್ದಾರೆ.

ಕೇಂದ್ರ ಸಚಿವಾಲಯವು ಈ ಸಮೀಕ್ಷೆಯ ವರದಿಯನ್ನು ಕೇಳಿದೆ. ಇದು ರಾಜ್ಯದ ಮುಂದಿನ ಕ್ರಮಗಳಿಗೆ ಮಾರ್ಗದರ್ಶನ ನೀಡಲಿದೆ ಎಂದು ಟಿಎಸಿ ವರದಿ ಹೇಳಿದೆ.
ಈ ಬಗ್ಗೆ ಹೊಸದಾಗಿ ನೇಮಕಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಹಿತಿ ನೀಡಿದ ಟಿಎಸಿ ಸದಸ್ಯ ಡಾ. ಮಂಜುನಾಥ್ ಸಿಎನ್, ಜನಸಂಖ್ಯೆ ಆಧಾರಿತ ಸೆರೋಪ್ರೆವೆಲೆನ್ಸ್ ಅಧ್ಯಯನಗಳು ಉತ್ತಮ ಅಂದಾಜುಗಳನ್ನು ನೀಡಬಹುದು ಎಂದು ಹೇಳಿದರು.
"ಮೂರನೇ ಅಲೆ ಮಕ್ಕಳ ಮೇಲೆ(ವಯಸ್ಸು 0 -17 ವರ್ಷಗಳು) ಎರಡನೇ ಅಲೆಗಿಂತ 13 ಪಟ್ಟು ಹೆಚ್ಚು ಪ್ರಭಾವ ಬೀರಬಹುದು" ವರದಿ ಹೇಳಿದೆ.
ಜನಸಂಖ್ಯೆ ಆಧಾರಿತ ಸಿರೋಪ್ರೆವಲೆನ್ಸ್ ಅಧ್ಯಯನಗಳು ತಪ್ಪಿದ ಸೋಂಕನ್ನು ಗಣನೆಗೆ ತೆಗೆದುಕೊಂಡು ಉತ್ತಮ ಅಂದಾಜುಗಳನ್ನು ನೀಡಬಹುದು. ಹೊಸ ರೂಪಾಂತರಗಳ ಹೊರಹೊಮ್ಮುವಿಕೆ ಮತ್ತು ಕಳಪೆ ಸಾಮಾಜಿಕ ಅಂತರವು ಮೂರನೆಯ ಅಲೆಗೆ ಕಾರಣಗಳಾಗಿರಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಕೊರೊನಾ ಸೋಂಕಿನ ವಿರುದ್ಧ ಜನರಲ್ಲಿನ ಪ್ರತಿಕಾಯ ಶಕ್ತಿ ಕುರಿತು ಈಚೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ರಾಷ್ಟ್ರೀಯ ಮಟ್ಟದ ನಾಲ್ಕನೇ ಸೆರೋ ಸಮೀಕ್ಷೆ ನಡೆಸಿದ್ದು, ಕರ್ನಾಟಕದ ಕೆಲವು ನಗರಗಳಲ್ಲಿ ಶೇ 80ರಷ್ಟು ಆರೋಗ್ಯ ಕಾರ್ಯಕರ್ತರಲ್ಲಿ ಕೊರೊನಾ ವಿರುದ್ಧ ಹೋರಾಡಬಲ್ಲ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿದೆ ಎಂದು ತಿಳಿಸಿದೆ.
ಬೆಂಗಳೂರಿನಲ್ಲಿ ಸೆರೋಪ್ರಿವಲೆನ್ಸ್ (ಸೋಂಕಿಗೆ ವಿರುದ್ಧವಾಗಿ ಪ್ರತಿಕಾಯಗಳನ್ನು ಹೊಂದಿರುವ ಪ್ರಮಾಣ) ಪ್ರಮಾಣ ಶೇ 70ರಷ್ಟಿದ್ದರೆ, ಕಲಬುರಗಿಯಲ್ಲಿ ಶೇ 67.3%, ಚಿತ್ರದುರ್ಗದಲ್ಲಿ ಶೇ 64.8 ಇದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಆರೋಗ್ಯ ಕಾರ್ಯಕರ್ತರಲ್ಲಿ ಈ ಪ್ರಮಾಣವು ಬೆಂಗಳೂರಿನಲ್ಲಿ ಶೇ 86.1, ಕಲಬುರಗಿಯಲ್ಲಿ ಶೇ 89.5 ಚಿತ್ರದುರ್ಗದಲ್ಲಿ ಶೇ 82.8 ಇದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ಸೆರೊ ಪ್ರಿವಲೆನ್ಸ್ ಅಂಕಿ ಅಂಶಗಳನ್ನು ಐಸಿಎಂಆರ್ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ ಅವರು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತಾರ್ ಅವರಿಗೆ ಸಲ್ಲಿಸಿದ್ದಾರೆ.
ಜಿಲ್ಲಾವಾರು ಮಟ್ಟದಲ್ಲಿ ಈ ಪ್ರಮಾಣವನ್ನು ನಿರ್ಧರಿಸಲು ಪ್ರತಿಕಾಯ ಪರೀಕ್ಷೆಗಳನ್ನು ನಡೆಸಲಾಗಿದೆ. ಇದರ ಪ್ರಕಾರ ಶೇ 60ರಷ್ಟು ಜನರಲ್ಲಿ ಕೊರೊನಾ ವಿರುದ್ಧ ನೈಸರ್ಗಿಕ ಪ್ರತಿಕಾಯಗಳ ಸೃಷ್ಟಿಯಾಗಿದೆ. "ಇದು ನೈಸರ್ಗಿಕವಾಗಿ ಬಂದ ರೋಗನಿರೋಧಕ ಶಕ್ತಿಯೇ, ಸೋಂಕಿನಿಂದ ಸೃಷ್ಟಿಯಾದುದೇ ಅಥವಾ ಲಸಿಕೆಗಳಿಂದ ಉತ್ಪತ್ತಿಯಾದ ಪ್ರತಿಕಾಯವೇ ಎಂಬುದನ್ನು ಪ್ರತ್ಯೇಕವಾಗಿ ಹೇಳಲು ಸಾಧ್ಯವಿಲ್ಲ" ಎಂದು ಕೊರೊನಾ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ಪ್ರದೀಪ್ ಬಾಣಂದೂರು ತಿಳಿಸಿದ್ದರು.
ದೇಶದಲ್ಲಿ ಆರು ವರ್ಷಕ್ಕೂ ಮೇಲ್ಪಟ್ಟ ಶೇ.68ರಷ್ಟು ಜನರ ದೇಹದಲ್ಲಿ ಕೊರೊನಾ ವೈರಾಣು ವಿರುದ್ಧ ಪ್ರತಿಕಾಯಗಳು ಸೃಷ್ಟಿಯಾಗಿವೆ ಎಂದು ಕೇಂದ್ರ ಸರಕಾರ ನಡೆಸಿದ 4ನೇ ಸೆರೊ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಅಲ್ಲಿಗೆ, ಬಾಕಿ 40 ಕೋಟಿ ಜನರು ಈಗಲೂ ಸಾಂಕ್ರಾಮಿಕಕ್ಕೆ ತುತ್ತಾಗುವ ಅಪಾಯದಲ್ಲಿದ್ದಾರೆ ಎಂದು ಸಮೀಕ್ಷೆ ನಡೆಸಿದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಐಸಿಎಂಆರ್ ಮುಖ್ಯಸ್ಥ ಡಾ. ಬಲರಾಮ್ ಭಾರ್ಗವ ಅವರು, ''ಈ ಸಮೀಕ್ಷೆಯು ನಮಗೆ ಆಶಾಕಿರಣವಾಗಿದೆ. ಹಾಗಂತ ಕೊರೊನಾ ತಡೆ ಮುನ್ನೆಚ್ಚರಿಕೆ ಕ್ರಮಗಳ ನಿರ್ಲಕ್ಷ್ಯ ಬೇಡ. ಕೊರೊನಾ ಮುನ್ನೆಚ್ಚರಿಕೆ ಕ್ರಮಗಳಾದ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಡ್ಡಾಯ ಪಾಲನೆ ಇನ್ನೂ ಹಲವು ತಿಂಗಳು ಮುಂದುವರಿಯಲೇಬೇಕು,'' ಎಂದಿದ್ದಾರೆ.
ಸಮೀಕ್ಷೆಯಲ್ಲಿ 8,691 ಮಕ್ಕಳ (6 ವರ್ಷದಿಂದ 17 ವರ್ಷದವರೆಗೆ ) ರಕ್ತದ ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, ಆ ಪೈಕಿ ಶೇ. 50ರಷ್ಟು ಮಕ್ಕಳಲ್ಲಿ ಕೊರೊನಾ ನಿರೋಧಕ ಪ್ರತಿಕಾಯಗಳು ಇರುವುದು ಕಂಡುಬಂದಿರುವುದು ಸಮಾಧಾನಕರ ಸಂಗತಿಯಾಗಿದೆ. ಕೊರೊನಾ ಮೂರನೇ ಅಲೆಯು ಮಕ್ಕಳನ್ನು ಗುರಿಯಾಗಿಸಲಿದೆ ಎಂದು ತಜ್ಞರು ಎಚ್ಚರಿಸುತ್ತಿರುವ ನಡುವೆ ಹಲವು ಮಕ್ಕಳಲ್ಲಿ ಪ್ರತಿಕಾಯಗಳು ಈಗಾಗಲೇ ಉತ್ಪತ್ತಿ ಆಗಿರುವ ವಿಚಾರ ಪೋಷಕರಿಗೆ ಸಮಾಧಾನ ಮೂಡಿಸಿದೆ. 18 ವರ್ಷಕ್ಕೂ ಕಡಿಮೆ ವಯೋಮಾನದವರನ್ನು ಸೇರಿಸಿಕೊಂಡು ನಡೆಸಲಾದ ರಾಷ್ಟ್ರಮಟ್ಟದ ಮೊದಲ ಸಮೀಕ್ಷೆ ಇದಾಗಿದೆ.












Click it and Unblock the Notifications