HMT ಕ್ರೇಜ್: ಜಾಲಹಳ್ಳಿಯಲ್ಲಿ 2 ಕಿ.ಮೀ ಕ್ಯೂ ನಿಂತು ವಿಶೇಷ ವಾಚ್‌ ಖರೀದಿಸಿದ ಬೆಂಗಳೂರಿಗರು

ಬೆಂಗಳೂರು: ದಶಕಗಳ ಕಾಲ ಕನ್ನಡಿಗರು ಸೇರಿದಂತೆ ಪ್ರತಿಯೊಬ್ಬ ಭಾರತೀಯನ ಕೈಗೂ ಕಳೆ ತಂದಿದ್ದ ಹಿಂದೂಸ್ತಾನ್ ಮಷಿನ್ ಟೂಲ್ಸ್ (ಎಚ್‌ಎಂಟಿ) ವಾಚ್‌ಗಳ ಕ್ರೇಜ್ ಇಂದಿಗೂ ಸ್ವಲ್ಪವೂ ಕಡಿಮೆಯಾಗಿಲ್ಲ ಎಂಬುದಕ್ಕೆ ಬೆಂಗಳೂರಿನಲ್ಲಿ ಶನಿವಾರ ನಡೆದ ಘಟನೆಯೇ ಸಾಕ್ಷಿ.

ಹೌದು, 80ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಎಚ್‌ಎಂಟಿ ಬಿಡುಗಡೆ ಮಾಡಿದ್ದ ಲಿಮಿಟೆಡ್‌ ಎಡಿಷನ್‌ ಕೈಗಡಿಯಾರ ಅಂದರೆ ವಾಚ್‌ಗಳನ್ನ ಖರೀದಿಸಲು ನೂರಾರು ಜನ ವಾಚ್ ಪ್ರೇಮಿಗಳು ಜಾಲಹಳ್ಳಿಯಲ್ಲಿರುವ ಕಾರ್ಖಾನೆಯ ಎದುರು ಬರೋಬ್ಬರಿ 2 ಕಿಲೋಮೀಟರ್ ಉದ್ದದ ಸರತಿ ಸಾಲಿನಲ್ಲಿ ನಿಂತಿದ್ದರು.

HMT

ಎಚ್‌ಎಂಟಿ ವಾಚ್‌ಗಳು ಜನರ ಹೃದಯದಲ್ಲಿ ಎಷ್ಟು ಆಳವಾಗಿ ಬೇರೂರಿವೆ ಎಂಬುದನ್ನು ಈ ಜನಸಾಗರ ಸಾಬೀತುಪಡಿಸಿದೆ. ಕೇವಲ ಮಧ್ಯಾಹ್ನ 1 ಗಂಟೆಯ ಹೊತ್ತಿಗೆ 2,000ಕ್ಕೂ ಅಧಿಕ ಗಡಿಯಾರಗಳು ಖಾಲಿಯಾಗಿವೆ.

ಸೀಮಿತ ಆವೃತ್ತಿಯ ಎಚ್‌ಎಂಟಿ ವಾಚ್‌ಗೆ ಭಾರಿ ಬೇಡಿಕೆ

ಎಚ್‌ಎಂಟಿ ಬ್ರಾಂಡ್ ಅನ್ನು ಇಂದಿಗೂ ತುಂಬ ಜನ ಇಷ್ಟಪಟ್ಟು ಸ್ವೀಕರಿಸುತ್ತಿದ್ದಾರೆ. ಅದರಲ್ಲೂ 80ನೇ ಸ್ವಾತಂತ್ರ್ಯ ದಿನಾಚರಣೆಗಾಗಿ ಬಿಡುಗಡೆ ಮಾಡಲಾಗಿದ್ದ ತ್ರಿವರ್ಣ ಧ್ವಜ ವಿನ್ಯಾಸದ ವಾಚ್‌ಗಳು ಹಾಗೂ ಕರ್ನಾಟಕದ ಹೆಮ್ಮೆಯ ಸಂಕೇತವಾದ ಗಂಡಭೇರುಂಡ ಮತ್ತು ಕನ್ನಡ ಅಂಕಿಗಳಿರುವ ವಿಶೇಷ ವಾಚ್‌ಗಳಿಗೆ ಊಹಿಸಲಾಗದಷ್ಟು ಬೇಡಿಕೆ ವ್ಯಕ್ತವಾಗಿತ್ತು. "ಬೆಳಗ್ಗೆಯಿಂದಲೇ ಗ್ರಾಹಕರು ಸರತಿ ಸಾಲಿನಲ್ಲಿ ನಿಂತಿದ್ದರು. ಗಂಡಭೇರುಂಡ ಆವೃತ್ತಿಯ ವಾಚ್‌ಗಳು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಂಪೂರ್ಣ ಖಾಲಿಯಾಗಿತ್ತು. ಜನರಿಗೆ ಎಚ್‌ಎಂಟಿ ಮೇಲಿರುವ ಭಾವನಾತ್ಮಕ ನಂಟು ಇದರಿಂದ ಸ್ಪಷ್ಟವಾಗುತ್ತದೆ" ಎಂದು ಸಿಬ್ಬಂದಿಯೊಬ್ಬರು ಹರ್ಷ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಮಳಿಗೆಗಳಲ್ಲಿ ಒಂದೇ ದಿನದಲ್ಲಿ ಸೋಲ್ಡ್ ಔಟ್

ನಗರದಲ್ಲಿ ಪ್ರಮುಖವಾಗಿ ಜಾಲಹಳ್ಳಿ ಹಾಗೂ ಮೇಕ್ರಿ ವೃತ್ತದ ಸಮೀಪವಿರುವ ಎಚ್‌ಎಂಟಿ ಭವನ ಸೇರಿದಂತೆ ಒಟ್ಟು ಮೂರು ಅಧಿಕೃತ ಮಳಿಗೆಗಳಿವೆ. ಆದರೆ, ಸಾರ್ವಜನಿಕರ ಮುಗಿಬಿದ್ದ ಖರೀದಿಸಿದ್ದಕ್ಕಾಗಿ ಈ ಮೂರೂ ಮಳಿಗೆಗಳಲ್ಲಿದ್ದ ವಿಶೇಷ ಗಡಿಯಾರಗಳ ಸ್ಟಾಕ್ ಕೇವಲ ಒಂದೇ ದಿನದಲ್ಲಿ ಸಂಪೂರ್ಣವಾಗಿ ಖಾಲಿಯಾಗಿದೆ. ಹಳೆಯ ತಲೆಮಾರಿನ ಜನ ಮಾತ್ರವಲ್ಲದೆ , ಇಂದಿನ ಯುವಪೀಳಿಗೆ ಕೂಡ ಬ್ರಾಂಡ್‌ನ ಪರಂಪರೆಯನ್ನ ಅರಿತುಕೊಂಡು ಎಚ್‌ಎಂಟಿ ಗಡಿಯಾರಗಳನ್ನು ಹುಡುಕಿಕೊಂಡು ಬರುತ್ತಿರುವುದು ಆಡಳಿತ ಮಂಡಳಿಯಲ್ಲಿ ಹೊಸ ಭರವಸೆ ಮೂಡಿಸಿದೆ.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಅಚ್ಚರಿ

ಜನರು ತೋರಿದ ಈ ಅಭೂತಪೂರ್ವ ಪ್ರತಿಕ್ರಿಯೆ ಕಂಡು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಅಚ್ಚರಿ ಹಾಗೂ ಸಂತಸ ವ್ಯಕ್ತಪಡಿಸಿದ್ದಾರೆ. "ನಾವೆಲ್ಲರೂ ಬಾಲ್ಯದಿಂದಲೂ ಎಚ್‌ಎಂಟಿ ವಾಚ್‌ಗಳನ್ನ ನೋಡಿಕೊಂಡು ಬೆಳೆದಿದ್ದೇವೆ. ಇಂದಿಗೂ ಜನರು ಎರಡು ಕಿ.ಮೀ ಉದ್ದದ ಕ್ಯೂ ನಿಂತು ವಾಚ್ ಖರೀದಿಸುತ್ತಿರುವುದನ್ನ ನೋಡಿ ನನಗೆ ತುಂಬಾ ಸಂತೋಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ, ಸಾರ್ವಜನಿಕರ ಈ ಅಭಿಮಾನವೇ ಈ ಕಾರ್ಖಾನೆಗೆ ಮರುಜೀವ ನೀಡಲು ನನಗೆ ಮತ್ತಷ್ಟು ಪ್ರೇರಣೆ ನೀಡಿದೆ" ಎಂದು ಅವರು ವಿವರಿಸಿದ್ದಾರೆ.

ಮುಂಬರುವ ದಿನಗಳಲ್ಲಿ ಆಟೋಮ್ಯಾಟಿಕ್ ವಾಚ್ ಬಿಡುಗಡೆ

ಗ್ರಾಹಕರ ಈ ಬೇಡಿಕೆ ಕುರಿತು ಮಾತನಾಡಿದ ಎಚ್‌ಎಂಟಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (CMD) ರಮೇಶ್, "ಸೀಮಿತ ಸರಣಿಯ ಗಡಿಯಾರಗಳು ಸಂಪೂರ್ಣವಾಗಿ ಮಾರಾಟವಾಗಿವೆ. ಗ್ರಾಹಕರ ನಿರಂತರ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಮುಂದಿನ ತಿಂಗಳ ಅಂತ್ಯದ ವೇಳೆಗೆ ಮತ್ತಷ್ಟು ಆಕರ್ಷಕ ವಾಚ್‌ಗಳನ್ನ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಜೊತೆಗೆ ಅತ್ಯುತ್ತಮ ಗುಣಮಟ್ಟದ 'ಆಟೋಮ್ಯಾಟಿಕ್ ವಾಚ್'ಗಳನ್ನ ಸಹ ಶೀಘ್ರದಲ್ಲೇ ಮಾರಾಟಕ್ಕೆ ತರಲಿದ್ದೇವೆ" ಎಂದು ಭರವಸೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+