ACP Chandan: ಎಸಿಪಿ ಚಂದನ್ ವಿರುದ್ಧ ದೂರು! ಕಾರಣವೇನು?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ರನ್ನು ಬಂಧಿಸಿರುವ ಎಸಿಪಿ ಚಂದನ್ ಕುಮಾರ್ ಪೊಲಿಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿ ಎನ್ನಿಸಿಕೊಂಡವರು. ಮೈಸೂರಿನವರಾದ ಎಸಿಪಿ ಚಂದನ್ ಕುಮಾರ್ ಯಾವುದೇ ಒತ್ತಡಕ್ಕೂ ಒಳಗಾಗದೇ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ನಿರ್ವಹಣೆ ಮಾಡಿದ ರೀತಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಈಗ ಎಸಿಪಿ ಚಂದನ್ ಕುಮಾರ್ ವಿರುದ್ಧವೇ ದೂರು ಕೊಡಲಾಗಿದೆ. ಹೌದು, ಪುನೀತ್ ಕೆರೆಹಳ್ಳಿ ಬಂಧನ ಪ್ರಕರಣದಲ್ಲಿ ಹಿಂದೂ ಪರ ಸಂಘಟನೆಗಳ ಒಕ್ಕೂಟ ಕಾಟನ್‌ಪೇಟ್ ಪೊಲೀಸ್ ಠಾಣೆ ಎಸಿಪಿ ಚಂದನ್ ಕುಮಾರ್ ವಿರುದ್ಧ ಬೆಂಗಳೂರು ಪೊಲೀಸ್ ಕಮಿಷನರ್ ಅವರ ಬಳಿ ದೂರು ಕೊಟ್ಟಿದೆ.

ರಾಜಸ್ಥಾನದಿಂದ ನಾಯಿ ಮಾಂಸ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಪುನೀತ್ ಕೆರೆಹಳ್ಳಿ ಮತ್ತು ಕೆಲವು ಹಿಂದೂ ಪರ ಹೋರಾಟಗಾರರು ಆರೋಪಿಸಿದ್ದರು. ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ರಾಜಸ್ಥಾನದಿಂದ ತಂದಿರುವ ಮಾಂಸವನ್ನು ಪರಿಶೀಲಿಸುವಂತೆ ಆಗ್ರಹಿಸಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಬ್ದುಲ್ ರಜಾಕ್ ಮತ್ತು ಪುನೀತ್ ನಡುವೆ ಜಗಳವಾಗಿತ್ತು.
ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಪುನೀತ್ ಕೆರೆಹಳ್ಳಿಯನ್ನು ಬಂಧಿಸಲಾಗಿತ್ತು. ಬಂಧನದ ವೇಳೆ ಪುನೀತ್ ಕೆರೆಹಳ್ಳಿ ಜೊತೆ ಎಸಿಪಿ ಚಂದನ್ ಅಮಾನುಷವಾಗಿ ವರ್ತಿಸಿದ್ದಾರೆ ಎಂದು ಹಿಂದೂ ಪರ ಸಂಘಟನೆಗಳ ಒಕ್ಕೂಟ ದೂರಿನಲ್ಲಿ ಆರೋಪಿಸಿದೆ.
ದೂರಿನ ಸಾರಾಂಶ ಹೀಗಿದೆ
ಜುಲೈ 26ರಂದು ರಾಷ್ಟ್ರ ರಕ್ಷಣಾ ಪಡೆಯ ಮುಖಂಡ ಪುನೀತ್ ಕೆರೆಹಳ್ಳಿ ಮತ್ತು ಇತತರರು, ರಾಜಸ್ಥಾನದಿಂದ ಬೆಂಗಳೂರಿಗೆ ಕಳಪೆ ಗುಣಮಟ್ಟದ ಮಾಂಸವನ್ನು ಸಾಗಾಟ ಮಾಡುತ್ತಿದ್ದಾರೆ, ಇದರಲ್ಲಿ ನಾಯಿ ಮಾಂಸ ಬೆರೆಸಿರುವ ಅನುಮಾನವಿದೆ ಎಂದು 6 ತಿಂಗಳ ಹಿಂದೆ ದೂರು ಕೊಟ್ಟಿದ್ದರೂ ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಂಡಿಲ್ಲ ಎಂದು ಮಾಂಸದ ಸಮೇತವಾಗಿ ಪೊಲೀಸರ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ.
ಅದಕ್ಕಾಗಿಯೇ ರೈಲು ನಿಲ್ದಾಣದ ಫ್ಲಾಟ್‌ಫಾರ್ಮ್‌ನಲ್ಲಿ ಸುಮಾರ 5 ಸಾವಿರ ಕೆಜಿ ಕೊಳೆತ ಮಾಂಸವನ್ನು ತರಿಸಲಾಗಿದ್ದು, ತಿನ್ನಲು ಆರೋಗ್ಯಕರವಾಗಿಲ್ಲ ಎಂದು ಹೇಳಿದ್ದಕ್ಕೆ ಪುನೀತ್ ಕೆರೆಹಳ್ಳಿ ಅವರನ್ನು ರಾತ್ರೋ ರಾತ್ರಿ ಕಾಟನ್ ಪೊಲೀಸ್ ಠಾಣೆಯಲ್ಲಿ ಬಂಧಿಸಿದ್ದು, ಅಮಾನವೀಯವಾಗಿ ದೌರ್ಜನ್ಯ ಎಸಗಲಾಗಿದೆ. ಪುನೀತ್ ಕೆರೆಹಳ್ಳಿಯನ್ನು ನಗ್ನ ಮಾಡಿ ವಿಡಿಯೋ ಮಾಡಿ ಬೆದರಿಕೆ ಹಾಕಲಾಗಿದೆ. ಎಡಗಾಲು ನೋವಿದೆ ಎಂದರೂ ಕಾಲಿನಿಂದ ಒದೆಯಲಾಗಿದೆ. ಪುನೀತ್ ಕೆರೆಹಳ್ಳಿ ಗಡ್ಡ ಹಿಡಿದು ಅಮಾನುಷವಾಗಿ ಥಳಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಅಬ್ದುಲ್ ರಜಾಕ್ ಸರ್ಕಾರಿ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದರೂ, ಮೀನು ಎಂದು ಸುಳ್ಳು ಹೇಳಿ ಮಾಂಸ ಸಾಗಾಟ ಮಾಡಿದರೂ ಯಾವುದೇ ಕ್ರಮ ಜರುಗಿಸಿಲ್ಲ. ಇದು ಅಪರಾಧಕ್ಕೆ ಕುಮ್ಮಕ್ಕು ನೀಡಿದಂತಾಗಿದೆ. ಪುನೀತ್ ಕೆರೆಹಳ್ಳಿ ಮೇಲಿನ ದೌರ್ಜನ್ಯ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ತಪ್ಪಿತಸ್ಥ ಪೊಲೀಸ್ ಅಧಿಕಾರಿ ಚಂದನ್ ಕುಮಾರ್ ಮತ್ತು ಕಳಪೆ ಮಾಂಸ ಮಾರುತ್ತಿರುವ ಅಬ್ದುಲ್ ರಜಾಕ್ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಚಂದನ್ ಕುಮಾರ್ ಎಂತಹ ದಕ್ಷ ಅಧಿಕಾರಿ ಎಂದು ಪೊಲೀಸ್ ಇಲಾಖೆಗೂ ಗೊತ್ತಿದೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಾವಿರಾರು ಜನ ಚಂದನ್ ಕುಮಾರ್ ಪರ ನಿಂತಿದ್ದು, ಸಮಾಜದಲ್ಲಿ ಶಾಂತಿ ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದ್ದು ಸರಿಯಾಗಿದೆ ಎಂದಿದ್ದಾರೆ.












Click it and Unblock the Notifications