ಹಿಜಾಬ್ ಅಂತಿಮ ತೀರ್ಪು ಹಿನ್ನೆಲೆ; ಬೆಂಗಳೂರಿನಲ್ಲಿ ಒಂದು ವಾರದ ಕಾಲ ಸೆಕ್ಷನ್ 144 ಜಾರಿ
ಬೆಂಗಳೂರು, ಮಾರ್ಚ್ 14: ಹೈಕೋರ್ಟ್‌ನಲ್ಲಿ ಮಂಗಳವಾರ ಬೆಳಗ್ಗೆ 10.30ಕ್ಕೆ ಹಿಜಾಬ್ ಅಂತಿಮ ತೀರ್ಪು ಪ್ರಕಟಗೊಳ್ಳುತ್ತಿರುವ ಹಿನ್ನೆಲೆ ನಾಳೆಯಿಂದ ಒಂದು ವಾರ ಬೆಂಗಳೂರು ನಗರದಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ 10.30ಕ್ಕೆ ಹೈಕೋರ್ಟ್‌ನ ವಿಸ್ತೃತ ಪೀಠದಿಂದ ಹಿಜಾಬ್ ವಿವಾದದ ಅರ್ಜಿಯ ಕುರಿತಂತೆ ತೀರ್ಪು ಪ್ರಕಟವಾಗಲಿದೆ. ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಶಾಲಾ- ಕಾಲೇಜುಗಳಿಗೆ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಳ್ಳಲು, ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ರಾಜ್ಯಾಧ್ಯಂತ ಶಾಲಾ- ಕಾಲೇಜುಗಳ ಬಳಿಯಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲು ಸೂಚನೆ ನೀಡಲಾಗುತ್ತದೆ.
ನಾಳೆ ಬೆಳಿಗ್ಗೆ 10.30ಕ್ಕೆ ಕರ್ನಾಟಕ ಹೈಕೋರ್ಟ್ ನಿಂದ ಹಿಜಾಬ್ ವಿವಾದದ ಅರ್ಜಿಯ ತೀರ್ಪು ಪ್ರಕಟಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ರಾತ್ರಿ 8.30ಕ್ಕೆ ಆಯಾ ಜಿಲ್ಲೆಗಳಲ್ಲಿಯೂ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಭೆಯನ್ನು ನಡೆಸಲಿದ್ದಾರೆ. ಈ ಸಭೆಯಲ್ಲಿ ಸೂಕ್ಷ್ಮ ಪ್ರದೇಶದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸೂಚನೆ ನೀಡಲಾಗುತ್ತಿದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು, ಇಂದು ಎಲ್ಲಾ ಡಿಸಿಪಿಗಳ ಜೊತೆಗೆ ವೀಡಿಯೋ ಕಾನ್ಫೆರೆನ್ಸ್ ಮೂಲಕ ರಾತ್ರಿ 10.30ಕ್ಕೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ನಗರದಲ್ಲಿನ ಶಾಲಾ-ಕಾಲೇಜುಗಳ ಬಳಿಯಲ್ಲಿ ಭದ್ರತೆಯನ್ನು ಹೆಚ್ಚಿಸುವ ಕುರಿತಂತೆ ಚರ್ಚೆ ನಡೆಸಲಾಗುತ್ತಿದೆ. ಇನ್ನು ರಾತ್ರಿ 8.30ಕ್ಕೆ ಆಯಾ ಜಿಲ್ಲೆಗಳಲ್ಲಿಯೂ ಡಿಸಿ, ಎಸ್ಪಿಗಳು ಸಭೆಯನ್ನು ನಡೆಸಲಿದ್ದಾರೆ.
ದಕ್ಷಿಣ ಕನ್ನಡದಲ್ಲಿ ನಿಷೇಧಾಜ್ಞೆ ಜಾರಿ
ನಾಳೆ ಹೈಕೋರ್ಟ್‌ನಲ್ಲಿ ಹಿಜಾಬ್ ತೀರ್ಪು ಪ್ರಕಟಿಸುವ ಹಿನ್ನೆಲೆ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲೆ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ.
ಈಗಾಗಲೇ ನಿಗದಿಯಾಗಿರುವ ಪರೀಕ್ಷೆಗಳು ಎಂದಿನಂತೆ ಮುಂದುವರಿಯುತ್ತವೆ. ಆದರೆ ಆಂತರಿಕ ಪರೀಕ್ಷೆಗಳನ್ನು ಮುಂದೂಡುವಂತೆ ಆದೇಶ ಹೊರಡಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್
ನಾಳೆ ಹಿಜಾಬ್ ಪ್ರಕರಣದ ತೀರ್ಪು ಹೈಕೋರ್ಟ್ನನಿಂದ ಹೊರಬೀಳುವ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್ ಮಾಡಲು ಚಿಂತಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಶಾಲಾ, ಕಾಲೇಜುಗಳ ಮುಂದೆ ನಾಳೆ ಪೊಲೀಸ್ ಬಂದೋಬಸ್ತ್ ನಿಯೋಜನೆ ಕೈಗೊಳ್ಳವ ಬಗ್ಗೆ, ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗುತ್ತಿದೆ.
ಬನವಾಸಿ, ಹೊನ್ನಾವರ, ಭಟ್ಕಳ ತಾಲೂಕಿನ ಮೇಲೆ ಹೆಚ್ಚು ನಿಗಾ ಇಡಲು ಸೂಚಿಸಲಾಗಿದೆ. ಅಹಿತಕರ ಘಟನೆಗಳು ನಡೆಸುವ ವ್ಯಕ್ತಿಗಳ ಮೇಲೆ, ಸಂಘಟನೆಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಡುವ ಬಗ್ಗೆ ಸೇರಿದಂತೆ ಇನ್ನು ಹೆಚ್ಚಿನ ಕ್ರಮಕ್ಕಾಗಿ ಇಂದು ರಾತ್ರಿ 8:30 ಕ್ಕೆ ಎಸ್ಪಿ, ಡಿಸಿ ಮೀಟಿಂಗ್ ನಡೆಯಲಿದೆ ಎಂದು ಉತ್ತರ ಕನ್ನಡ ಜಿಲ್ಲೆಯ ಎಸ್ಪಿ ಸುಮನ್ ಪೆನ್ನೆಕರ್ ಮಾಹಿತಿ ನೀಡಿದ್ದಾರೆ.
ಈ ಜಿಲ್ಲೆಗಳಲ್ಲಿಯೂ ಸೆಕ್ಷನ್ 144 ಜಾರಿ
ನಾಳೆ ಹಿಜಾಬ್ ಪ್ರಕರಣದ ತೀರ್ಪು ಹೈಕೋರ್ಟ್‌ನಿಂದ ಹೊರಬೀಳುವ ಹಿನ್ನೆಲೆ ತುಮಕೂರು, ಮೈಸೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಿ ಆಯಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.












Click it and Unblock the Notifications