ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಗನಚುಂಬಿ ಕಟ್ಟಡಗಳಿಗೆ ಎಚ್‍ಎಎಲ್ ಹೊಸ ನೀತಿ

By Rajendra
|
Google Oneindia Kannada News

ಬೆಂಗಳೂರು, ಫೆ.15: ಎತ್ತರರೆತ್ತರಕ್ಕೆ ಬೆಳೆಯುತ್ತಾ ಗಗನಚುಂಬಿಯಾಗುವ ಬೊಂಗಳೂರಿನ ಆಸೆಗೆ ಹಿಂದೂಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್ (ಎಚ್‍ಎಎಲ್) ತಣ್ಣೀರೆರಚಿದೆ. ಸುತ್ತಲಿನ 20 ಕಿ.ಮೀ. ವ್ಯಾಪ್ತಿಯಲ್ಲಿ ಕಟ್ಟಡಗಳ ಎತ್ತರ ಗರಿಷ್ಠ ಎಷ್ಟಿರಬೇಕು ಎನ್ನುವುದನ್ನು ಎಚ್‍ಎಎಲ್ ನಿರ್ಧರಿಸಲಿದೆ.

ಇದಕ್ಕೆ ತಕ್ಕಂತೆ ಅದು ಕಟ್ಟಡಗಳಿಗೆ ನಿರಪೇಕ್ಷಣಾ ಪತ್ರ ನೀಡುತ್ತದೆ. ಆದರೆ ಬೆಂಗಳೂರಿನಲ್ಲಿ ಎಚ್‍ಎಎಎಲ್ ನಿಂದ 20 ಕಿ.ಮೀ. ವ್ಯಾಪ್ತಿಯಲ್ಲೇ ನಗರದ ಕೇಂದ್ರ ಜಿಲ್ಲೆ ಹಾಗೂ ಎಲ್ಲಾ ಐಟಿ ಕೇಂದ್ರಗಳೂ ಬರುತ್ತಿವೆ. ಹೀಗಾಗಿ ಎಚ್‍ಎಎಲ್ ನೀತಿಯು ಇಲ್ಲಿನ ಪ್ರತಿಯೊಂದು ಕಟ್ಟಡದ ಮೇಲೂ ಪರಿಣಾಮ ಬೀರಲಿದೆ.

ಈ ಹಿಂದೆ 300 ಮೀಟರ್ (100 ಅಂತಸ್ತು) ಎತ್ತರದ ಕಟ್ಟಡಗಳನ್ನು ನಿರ್ಮಿಸುವ ಪ್ರಸ್ತಾವಕ್ಕೆ ಎಚ್‍ಎಎಲ್ ತಾತ್ವಿಕ ಒಪ್ಪಿಗೆ ನೀಡಿತ್ತು. ಆದರೆ ಈಗ ಅದು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿರುವ ನೂತನ ಸುತ್ತೋಲೆಯ ಪ್ರಕಾರ ಗರಿಷ್ಠ 150 ಮೀಟರ್ (50 ಅಂತಸ್ತು) ಎತ್ತರಕ್ಕಿಂತ ಹೆಚ್ಚು ಎತ್ತರದ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ. ಇದಕ್ಕೆ ಕಾರಣವನ್ನು ಕೂಡ ಅದು ನೀಡಿದೆ.

Highrise in Bangalore gets HAL nod
ಈಗಾಗಲೇ ಅಭಿವೃದ್ಧಿಯ ಹಂತದಲ್ಲಿರುವ ಲಘು ಯುದ್ದ ವಿಮಾನ ಕಡಿಮೆ ಎತ್ತರದಲ್ಲಿ ಪರೀಕ್ಷೆ ಹಾರಾಟ ನಡೆಸುವುದರಿಂದ ಹೆಚ್ಚು ಎತ್ತರದ ಕಟ್ಟಡಗಳಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಎಚ್‍ಎಎಲ್ ವಿಮಾನ ನಿಲ್ದಾಣವು ಸಮುದ್ರಮಟ್ಟದಿಂದ 887 ಮೀಟರ್ ಎತ್ತರದಲ್ಲಿದೆ. ಆದರೆ ಬೆಂಗಳೂರು ನಗರ ಸಮುದ್ರಮಟ್ಟದಿಂದ ಸರಾಸರಿ 940 ಮೀಟರ್ ಎತ್ತರದಲ್ಲಿದೆ. ಅಂದರೆ ವಿಮಾನ ನಿಲ್ದಾಣದಿಂದ ಸುಮಾರು 53 ಮೀಟರ್ ಎತ್ತರದಲ್ಲಿದೆ. ಹೀಗಾಗಿ ನಗರದ ಹಲವೆಡೆ ಕಟ್ಟಡಗಳ ಗರಿಷ್ಠ ಎತ್ತರವನ್ನು 150 ಮೀಟರ್ ಗೆ ಸೀಮಿತಗೊಳಿಸಿ ಎಚ್‍ಎಎಲ್ ಸುತ್ತೋಲೆ ಹೊರಡಿಸಿದೆ.

ಇದರ ಜೊತೆಗೆ ವಿಮಾನ ಹಾರಾಟ ಮಾರ್ಗಗಳಲ್ಲಿ ಈ ಪ್ರಮಾಣ ಇನ್ನಷ್ಟು ಕಡಿಮೆಯಿದೆ. ಉದಾಹರಣೆಗೆ ಐಟಿ ಕೇಂದ್ರವಾದ ಸರ್ಜಾಪುರ ರಸ್ತೆ - ಹೊರ ವರ್ತುಲ ರಸ್ತೆ ಪ್ರದೇಶದಲ್ಲಿ ಗರಿಷ್ಠ 12 ಅಂತಸ್ತುಗಳ ಕಟ್ಟಡ ನಿರ್ಮಾಣಕ್ಕೆ ಮಾತ್ರ ಅನುಮತಿ ನೀಡಲಾಗುತ್ತದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕ್ರೆಡೈ ಹೊಸ ನೀತಿಯು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಮಾರಕವಾಗಬಹುದು ಎಂದಿದೆ. ಹೊಸ ಎತ್ತರ ಮಿತಿ ಸರಿಯಾದ ನಿರ್ಧಾರವಲ್ಲ. ಈ ಬಗ್ಗೆ ಶೀಘ್ರವೇ ಎಚ್‍ಎಎಲ್ ಗೆ ಮನವಿ ಸಲ್ಲಿಸಲಿದ್ದೇವೆ ಎಂದು ಕ್ರೆಡೈ ಅಧ್ಯಕ್ಷ ಸಿ.ಎನ್.ಗೋವಿಂದರಾಜು ಹೇಳಿದ್ದಾರೆ.

ಎಚ್‍ಎಎಲ್ ಸ್ಪಷ್ಟನೆ : ವಿಶ್ವದ ಎಲ್ಲಾ ರಕ್ಷಣಾ ಕ್ಷೇತ್ರದ ವಿಮಾನ ನಿಲ್ದಾಣಗಳಲ್ಲಿ ಇಂತಹ ಎತ್ತರ ಮಿತಿ ನೀತಿ ಜಾರಿಯಲ್ಲಿದೆ. ವಿಶೇಷ ಕಾರ್ಯಾಚರಣೆ ಹಾಗೂ ವಿಮಾನಗಳ ಪರೀಕ್ಷಾ ಹಾರಾಟಗಳು ನಿರಂತರವಾಗಿ ಇಲ್ಲಿ ನಡೆಯುತ್ತಿರುತ್ತದೆ. ಕೆಳ ಮಟ್ಟದಲ್ಲೇ ವಿಮಾನ ಹಾರಾಡುವುದರಿಂದ ಕಟ್ಟಡಗಳ ಎತ್ತರವನ್ನು 150 ಮೀಟರ್ ಗಳಿಗೆ ಸೀಮಿತಗೊಳಿಸದೆ ಬೇರೆ ದಾರಿಯಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಇತ್ತೀಚಿಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ವರ್ಟಿಕಲ್ ಆಗಿ ಬೆಳೆಯುವ ಅವಶ್ಯಕತೆಯನ್ನು ಒತ್ತಿ ಹೇಳಿದ್ದರು. ಅಪಾರ ಜನಸಂಖ್ಯೆಯ ಇಲ್ಲಿ ಭೂಮಿ ಲಭ್ಯತೆ ಕಡಿಮೆಯಿದ್ದು ಗಗನಚುಂಬಿ ಕಟ್ಟಡಗಳೇ ಇದಕ್ಕೆ ಪರಿಹಾರ. ಹಾಗಾದರೆ ಮಾತ್ರ ಪ್ರತಿಯೊಬ್ಬರಿಗೂ ಮನೆ ಒದಗಿಸಲು ಸಾಧ್ಯ ಎಂದಿದ್ದರು. ಆದರೆ ವಾರದೊಳಗೆ ಸಿಎಂ ಮಾತುಗಳು ಜಾರಿ ಅಸಾಧ್ಯ ಎನ್ನುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ.

ರಕ್ಷಣಾ ಸಚಿವಾಲಕ್ಕೆ ಮೊರೆ : ಹೊಸ ನೀತಿಯ ಹಿನ್ನೆಲೆಯಲ್ಲಿ ರಕ್ಷಣಾ ಸಚಿವಾಲಯಕ್ಕೆ ಮೊರೆ ಹೋಗುವುದಾಗಿ ಕ್ರೆಡೈ ಹೇಳಿದೆ. ರಾಷ್ಟ್ರೀಯ ಸಮಿತಿ ಈ ಬಗ್ಗೆ ರಕ್ಷಣಾ ಸಚಿವಾಲಯದ ಜೊತೆ ಮಾತುಕತೆ ನಡೆಸಲಿದೆ. ಎತ್ತರ ನೀತಿ ಪರಿಷ್ಕರಣೆಯಿಂದ ಬೆಂಗಳೂರು ಕೂಡ ಸಿಂಗಾಪುರ, ಶಾಂಘೈ ಅಥವಾ ಮುಂಬೈಯಂತೆ ಗಗನಚುಂಬಿ ಕಟ್ಟಡಗಳನ್ನು ಹೊಂದುವ ಕನಸು ಕಮರಿಹೋಗಿದೆ. ಪ್ರಸಕ್ತ 35 ವಸತಿ ಕಾಂಪ್ಲೆಕ್ಸ್ ಗಳು ನಿರ್ಮಾಣ ಹಂತದಲ್ಲಿದ್ದು ಅವುಗಳು ಕೂಡ ಗರಿಷ್ಠ 60 ಅಂತಸ್ತನ್ನು ಮಾತ್ರ ಹೊಂದಬಹುದಾಗಿದೆ.

2009ರವರೆಗೆ 150 ಮೀಟರ್ ಗಿಂತ ಹೆಚ್ಚು ಎತ್ತರದ ಕಟ್ಟಡಗಳಿಗೆ ಎಚ್‍ಎಎಲ್ ಅನುಮತಿ ನೀಡುತ್ತಿರಲಿಲ್ಲ. ಆದರೆ ಬಳಿಕ ಕೆಲವೊಂದು ನಿರ್ದಿಷ್ಟ ಅಂಶಗಳನ್ನು ಗಮನಿಸಿ 300 ಮೀಟರ್ ಎತ್ತರದ ಕಟ್ಟಡಗಳಿಗೆ ಅನುಮತಿ ನೀಡುವುದಾಗಿ ಅದು ಹೇಳಿತ್ತು. ಕಳೆದ ಸೆಪ್ಟೆಂಬರ್ ನಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಎಸ್. ವಿ. ರಂಗನಾಥ್, ಎತ್ತರ ಮಿತಿ ಹೆಚ್ಚಿಸುವಂತೆ ಕೋರಿ ಎಚ್‍ಎಎಲ್ ಅಧ್ಯಕ್ಷ ಆರ್. ಕೆ. ತ್ಯಾಗಿ ಅವರಿಗೆ ಪತ್ರ ಬರೆದಿತ್ತು.

ಈ ಮೂಲಕ 100 ಅಂತಸ್ತುಗಳ ಕಟ್ಟಡ ನಿರ್ಮಾಣ ಯೋಜನೆಗಳು ಸಾಕಾರಗೊಳ್ಳಲು ಅವಕಾಶ ನೀಡುವುದು ಅವರ ಮನವಿ ಹಿಂದಿನ ಉದ್ದೇಶವಾಗಿತ್ತು. ಆದರೆ ಈಗ ಎಚ್‍ಎಎಲ್ ಮನವಿಯನ್ನು ತಾಂತ್ರಿಕ ಕಾರಣಗಳಿಂದ ಪೂರೈಸಲು ಸಾಧ್ಯವಿಲ್ಲ ಎಂದು ತಿರಸ್ಕರಿಸಿದೆ.

ಯಾವುದೇ ನಗರವಿರಲಿ ಬೆಳೆಯುತ್ತಾ ಹೋದಂತೆ ಭೂಮಿ ಲಭ್ಯತೆ ಕಡಿಮೆಯಾಗುತ್ತದೆ. ಈ ಸಮಸ್ಯೆಗೆ ಗಗನಚುಂಬಿ ಕಟ್ಟಡಗಳೇ ಪರಿಹಾರ. ಅದು ವಾಣಿಜ್ಯವಿರಲಿ, ವಸತಿ ಇರಲಿ ಗಗನಚುಂಬಿ ಕಟ್ಟಡಗಳು ದೊಡ್ಡ ನಗರಗಳ ಒಟ್ಟಾರೆ ಸ್ವರೂಪವನ್ನೇ ಬದಲಾಯಿಸುತ್ತವೆ. ಆದರೆ ಬೆಂಗಳೂರಿನಲ್ಲಿ ಇಂತಹ ಕಟ್ಟಡಗಳ ನಿರ್ಮಾಣಕ್ಕೆ ಎಎಚ್‍ಎಲ್ ನೀತಿ ತಡೆಯೊಡ್ಡಿದೆ. (ಒನ್ಇಂಡಿಯಾ ಕನ್ನಡ)

English summary
The defence PSU Hindustan Aeronautics Ltd (HAL) has halved the maximum permissible height for real estate development. The HAL airport is the apex authority to issue no-objection certificates (NOCs) on height limit to constructions in a 20-km radius around the facility.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X