ಬೆಂಗಳೂರಿನಲ್ಲಿ ಹೆಚ್ಚಾಯ್ತು ಉಷ್ಣಾಂಶ: ಮಣ್ಣಿನ ಮಡಿಕೆಗಳಿಗೆ ಹೆಚ್ಚಾದ ಬೇಡಿಕೆ
ಬೆಂಗಳೂರು, ಮಾರ್ಚ್ 02: ಉದ್ಯಾನ ನಗರಿ, ಕೂಲ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಹವಾಮಾನ ಬದಲಾವಣೆಯಾಗಿದೆ. ಫೆಬ್ರವರಿ ಅಂತ್ಯ ಮತ್ತು ಮಾರ್ಚ್ ಮೊದಲ ವಾರದಲ್ಲಿಯೇ ನಗರದ ಉಷ್ಣಾಂಶದಲ್ಲಿ ಏರಿಕೆ ಕಂಡುಬಂದಿದೆ. ಬೇಸಿಗೆಯಲ್ಲಿ ನಗರದಲ್ಲಿ ಉಷ್ಣಾಂಶ ಇನ್ನಷ್ಟು ಹೆಚ್ವಾಗುವ ನಿರೀಕ್ಷೆ ಇದೆ. ನಗರದ ಜನರು ನೀರು, ತಂಪಾದ ಪಾನೀಯಗಳ ಮೊರೆ ಹೋಗಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ನಗರದ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್‌ನಷ್ಟು ಇದರಲಿದೆ ಎಂದು ಅಂದಾಜಿಸಿದೆ. ಆದ್ದರಿಂದ ನಗರದಲ್ಲಿ ತಣ್ಣನೆಯ ನೀರಿಗೆ ಬೇಡಿಕೆ ಹೆಚ್ಚಾಗಿದ್ದು, ಜನರು ಮಣ್ಣಿನ ಮಡಿಕೆಗಳ ಮೊರೆ ಹೋಗಿದ್ದಾರೆ. ನಗರದ ವಿವಿಧ ರಸ್ತೆ ಬದಿಗಳಲ್ಲಿ ಮಣ್ಣಿನ ಮಡಿಕೆಗಳ ಮಾರಾಟ ಜೋರಾಗಿದೆ.

ಉಷ್ಣಾಂಶ ಏರಿಕೆಯಾಗಿರುವ ಹಿನ್ನಲೆಯಲ್ಲಿ ಮಧ್ಯಾಹ್ನ 12 ರಿಂದ 3 ಗಂಟೆಯ ತನಕ ಹೊರಗೆ ಸಂಚಾರ ನಡೆಸುವುದನ್ನು ತಪ್ಪಿಸಿ ಎಂದು ಜನರಿಗೆ ಸಲಹೆ ನೀಡಲಾಗಿದೆ. ಬೆಂಗಳೂರು ಮಾತ್ರವಲ್ಲ ಉತ್ತರ ಕರ್ನಾಟಕ, ಕರಾವಳಿ ಭಾಗದಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಏರಿಕೆ ಕಂಡುಬಂದಿದೆ.
ಬೇಸಿಗೆಯ ಬಿಸಿ ತಟ್ಟಿದೆ: ಉದ್ಯಾನ ನಗರಿ ಬೆಂಗಳೂರಿಗೆ ಬೇಸಿಗೆಯ ಆರಂಭದಲ್ಲಿಯೇ ಬಿಸಿ ತಟ್ಟಿದೆ. ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಟಿದೆ. ಕಳೆದ ವರ್ಷದ ಬೇಸಿಗೆಗೆ ಜನರು ಕಂಗಾಲಾಗಿದ್ದರು. ಆದರೆ ಬಳಿಕ ಸುರಿದ ಮಳೆ ಜನರಲ್ಲಿ ನೆಮ್ಮದಿ ತಂದಿತ್ತು. ಆದರೆ ಈ ಬಾರಿ ಬೇಸಿಗೆಯ ಆರಂಭದಲ್ಲಿಯೇ ಸೂರ್ಯ ನೆತ್ತಿ ಸುಡುತ್ತಿದ್ದಾನೆ.
ಹಗಲು ಮಾತ್ರವಲ್ಲ ರಾತ್ರಿಯ ವೇಳೆಯೂ ಸಹ ತಾಪಮಾನ ಹೆಚ್ಚಾಗಿರುವ ಕಾರಣ ಫ್ಯಾನ್, ಎಸಿ ಇಲ್ಲದೇ ಕಣ್ಮುಚ್ಚಿ ನಿದ್ದೆ ಮಾಡುವುದು ಕಷ್ಟವಾಗಿದೆ. ಹಗಲು ಹೊತ್ತಿನಲ್ಲಿ ತಂಪಾದ ನೀರಿನ ಮೊರೆ ಹೋಗುತ್ತಿದ್ದಾರೆ ಬೆಂಗಳೂರಿನ ಜನರು.
ಫ್ರಿಜ್ ಬಳಕೆ ಮಾಡದ ಬಹಳ ಜನರು ಬೇಸಿಗೆಯಲ್ಲಿ ದಣಿವಾರಿಸಿಕೊಳ್ಳಲು ಮಡಿಕೆಯ ಮೊರೆ ಹೋಗಿದ್ದಾರೆ. ನಗರದ ವಿವಿಧ ಪ್ರದೇಶಗಳಲ್ಲಿ ಮಣ್ಣಿನ ಮಡಿಕೆಗಳ ವ್ಯಾಪಾರ ಜೋರಾಗಿ ನಡೆಯುತ್ತಿದೆ. ನಲ್ಲಿ ಇರುವ ಮಡಿಕೆ, ಇಲ್ಲದ ಮಡಿಕೆ ಎಂದು ಇದರ ದರಗಳಲ್ಲಿಯೂ ವ್ಯತ್ಯಾಸವಾಗುತ್ತಿದೆ.
ಹಲವಾರು ಜನರು ಕಳೆದ ವರ್ಷ ಕೊಂಡು ಕೊಂಡಿದ್ದ ಮಡಿಕೆಯನ್ನು ತೊಳೆದು ಮತ್ತೆ ಬಳಕೆ ಮಾಡಲು ಮುಂದಾಗಿದ್ದಾರೆ. ತಂಪಾದ ಪಾನೀಯ, ಜ್ಯೂಸ್, ರಾಗಿ ಅಂಬಲಿ ಮುಂತಾದವುಗಳಿಗೆ ನಗರದ ರಸ್ತೆಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಆದ್ಯತೆ ನೀಡಿ ಎಂದು ಆರೋಗ್ಯ ಇಲಾಖೆ ಸಹ ಜನರನ್ನು ಎಚ್ಚರಿಸಿದೆ.
ಬೆಂಗಳೂರು ನಗರದ ಉಷ್ಣಾಂಶ 37 ರಿಂದ 39 ಡಿಗ್ರಿ ತನಕ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಮಣ್ಣಿನ ಮಡಿಕೆಗಳ ವ್ಯಾಪಾರ ನಗರದಲ್ಲಿ ಹೆಚ್ಚಾಗಲಿದೆ. ಮಡಿಕೆಯ ನೀರು ತಂಪಾಗಿರುವುದರಿಂದ ಜನರು ಅದನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಆದ್ದರಿಂದ ಮಡಿಕೆ ಖರೀದಿ ಮಾಡಲು ಮುಗಿಬಿದ್ದಿದ್ದಾರೆ.
ನಗರದ ಚಳಿಯ ವಾತಾವರಣಕ್ಕೆ ಕಾಫಿ ಶಾಪ್, ಹೋಟೆಲ್‌ಗಳ ಮುಂದೆ ಜಮಾಯಿಸಿದ್ದ ಜನರು ಈಗ ಜ್ಯೂಸ್ ಸೆಂಟರ್, ಕಬ್ಬಿನ ಹಾಲು, ಎಳನೀರು ಅಂಗಡಿಗಳ ಮುಂದೆ ಸೇರುತ್ತಿದ್ದಾರೆ. ಮಾರ್ಚ್ ಆರಂಭದಲ್ಲಿಯೇ ನಗರದ ತಾಪಮಾನ ಹೆಚ್ಚಾಗಿದ್ದು, ತಿಂಗಳ ಅಂತ್ಯ ಮತ್ತು ಏಪ್ರಿಲ್‌ನಲ್ಲಿ ಹೊರಗೆ ಅಡ್ಡಾಡುವುದು ಹೇಗೆ? ಎಂದು ಜನರು ಚಿಂತಿಸ ತೊಡಗಿದ್ದಾರೆ.












Click it and Unblock the Notifications