Railway Station: ರಾಜ್ಯದ 2 ಪ್ರಮುಖ ರೈಲು ನಿಲ್ದಾಣಗಳಿಗೆ ಹೈಟೆಕ್ ಸ್ಪರ್ಶ, ಓಪನ್ ಯಾವಾಗ?
ಬೆಂಗಳೂರು, ಫೆಬ್ರವರಿ 19: ಕೇಂದ್ರ ಸರ್ಕಾರ ಅಮೃತ್ ಭಾರತ್ ಸ್ಟೇಷನ್ ಅಡಿಯಲ್ಲಿ ಕರ್ನಾಟಕದಾದ್ಯಂತ 61 ರೈಲು ನಿಲ್ದಾಣಗಳನ್ನು ಆಧುನಿಕ ಸೌಲಭ್ಯ ಕೊಟ್ಟು ಮೇಲ್ದರ್ಜೆಗೆ ಏರಿಸಲು ಆಯ್ಕೆ ಮಾಡಿಕೊಂಡಿದೆ. ಈ ಪೈಕಿ ಯೋಜನೆಯಡಿ ರೇಷ್ಮೆ ನಗರಿ ರಾಮನಗರ ಮತ್ತು ಬೊಂಬೆ ನಾಡು ಚನ್ನಪಟ್ಟಣ ರೈಲು ನಿಲ್ದಾಣಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಇದಷ್ಟೇ ಅಲ್ಲದೇ ಮತ್ತೊಂದು ರೈಲು ನಿಲ್ದಾಣ ಅಭಿವೃದ್ಧಿಗೆ ಮನವಿ ಮಾಡಲಾಗಿದೆ.
ಹೌದು, ಅಮೃತ್ ಭಾರತ್ ಸ್ಟೇಷನ್" ಯೊಜನೆಯಡಿಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ರೈಲು ನಿಲ್ದಾಣವನ್ನು ಸುಮಾರು 52 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಕ್ರಮ ವಹಿಸಲಾಗಿದೆ. ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಇದು ಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್. ಮಂಜುನಾಥ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.

ಹೊಸ ರೈಲ್ವೆ ನಿಲ್ದಾಣಗಳು ಹೈಟೆಕ್ ಪ್ಲಾಟ್ ಫಾರ್ಮ್, ಶೌಚ ಗೃಹ, ವಿಶ್ರಾಂತಿ ಕೊಠಡಿ, ವಾಹನ ಪಾರ್ಕಿಂಗ್, ಮೇಲ್ಸೇತುವೆ, ಟಿಕೆಟ್ ಕೌಂಟರ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒಳಗೊಂಡಿವೆ ಎಂದು ಮಾಹಿತಿ ನೀಡಿದರು.
ರಾಮನಗರ ಮತ್ತು ಚನ್ನಪಟ್ಟಣ ರೈಲು ನಿಲ್ದಾಣಗಳ ಆಧುನಿಕರಣ-ಪುನರಾಭಿವೃದ್ಧಿ ಕೆಲಸ ಅಂತಿಮ ಹಂತಕ್ಕೆ ಬಂದಿದೆ. ಬಹುತೇಕ ಎಲ್ಲ ಕೆಲಸಗಳು ಪೂರ್ಣಗೊಳ್ಳುತ್ತಿವೆ. ಕಲ್ಲಿದ್ದಲು ಚಾಲಿತ ರೈಲುಗಳ ಕಾಲದಲ್ಲೇ (1881) ಚನ್ನಪಟ್ಟಣದ ನಿಲ್ದಾಣವು ಬೆಂಗಳೂರು- ಮೈಸೂರು ಮಾರ್ಗದಲ್ಲಿ ತನ್ನದೇ ಆದ ಸ್ಥಾನ ಹೊಂದಿದೆ. ನಿತ್ಯ ಹತ್ತಾರು ರೈಲುಗಳು ಬಂದು ಹೋಗುತ್ತವೆ. ಈ ಎರಡು ರೈಲು ನಿಲ್ದಾಣಗಳಲ್ಲಿ ನಿತ್ಯ ಸಾವಿರಾರು ಮಂದಿ ಪ್ರಯಾಣ ಮಾಡುತ್ತಾರೆ.
ದಶಕಗಳ ಬಳಿಕ ಈ ರೈಲು ನಿಲ್ದಾಣಗಳು ಅಮೃತ್ ಭಾರತ್ ಸ್ಟೇಷನ್ ಅಡಿಯಲ್ಲಿ ಅಭಿವೃದ್ಧಿಗೊಳ್ಳುತ್ತಿವೆ. ಪೂರ್ತಿ ಹೈಟೆಕ್ ಸ್ಪರ್ಶ ಪಡೆದಿವೆ. ವಿಶ್ರಾಂತಿ ಕೊಠಡಿ, ಚಾರ್ಜಿಂಗ್ ಪಾಯಿಂಟ್, ಆಸನ, ಶೌಚಾಲಯಗಳು, ರೈಲು ವೇಳಾಪಟ್ಟಿ ನಾಮಫಲಕ, ಕುಡಿಯಲು ನಿರೀನ ವ್ಯವಸ್ಥೆ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಸ್ಕೈವಾಕ್, ಲಿಫ್ಟ್ ಸೌಲಭ್ಯ, ಸೂಕ್ತ ಗಾಳಿ ಬೆಳಕಿನ ವ್ಯವಸ್ಥೆ, ಮೂರು ಮೀಟರ್ ಇದ್ದ ಮೇಲ್ಸೇತುವೆಗಳು ಪ್ಲಾಟ್‌ಫಾರ್ಮ್‌ಗಳು ವಿಶಾಲವಾಗಿವೆ. ಇಲ್ಲಿ ಅಗತ್ಯ ಎಲ್ಲ ಮೂಲ ಸೌಕರ್ಯಗಳನ್ನು ನೀಡಲಾಗಿದೆ.
ಬಿಡದಿ ರೈಲು ನಿಲ್ದಾಣಕ್ಕೂ ಹೈಟೆಕ್ ಸ್ಪರ್ಶ ಶೀಘ್ರ
ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಅವರೊಂದಿಗೆ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಿದ್ದಾರೆ. ಬಿಡದಿ ರೈಲು ನಿಲ್ದಾಣವನ್ನು ಈ ಯೋಜನೆಯಡಿಯಲ್ಲಿ ಉನ್ನತೀಕರಣಗೊಳಿಸಲು ಮನವಿ ಮಾಡಲಾಗಿದೆ. ಸಚಿವರು ಸಹ ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.
ಈ ಬಿಡದಿ ನಿಲ್ದಾಣವು ಕೈಗಾರಿಕೆಗಳಿಂದ ಉತ್ತಮ ಸ್ಥಾನಮಾನ ಪಡೆದುಕೊಂಡಿದೆ. ಇದರ ಉನ್ನತೀಕರಣಕ್ಕೆ ಸಂಸದರು ಕೇಂದ್ರ ಸಚಿವರ ಬಳಿ ಮಾತನಾಡಿದ್ದಾರೆ. ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಬೆಂಗಳೂರು ಮೈಸೂರು ಮಧ್ಯದ ಈ ರೈಲು ನಿಲ್ದಾಣಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ ಎಂದಿದ್ದಾರೆ..












Click it and Unblock the Notifications