ಅನೇಕಲ್ ಪುರಸಭೆಯ ನಾಲ್ವರು ಸದಸ್ಯರ ಅಮಾನತು ಎತ್ತಿಹಿಡಿದ ಹೈಕೋರ್ಟ್
ಬೆಂಗಳೂರು, ಜೂನ್ 8: ನಿಯಮದಂತೆ ಫಲಿತಾಂಶ ಪ್ರಕಟವಾದ ನಂತರ 30 ದಿನಗಳಲ್ಲಿ ಚುನಾವಣಾ ಖರ್ಚು ವೆಚ್ಚ ಸಲ್ಲಿಸದ ಆರೋಪದಡಿ ಅನೇಕಲ್ ಪುರಸಭೆಯ ನಾಲ್ವರು ಸದಸ್ಯರನ್ನು ಅನರ್ಹಗೊಳಿಸಿ ರಾಜ್ಯ ಚುನಾವಣಾ ಆಯೋಗ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಏಕಸದಸ್ಯಪೀಠದ ಆದೇಶ ಪ್ರಶ್ನಿಸಿ ಸದಸ್ಯರಾಗಿದ್ದ ಕೆ.ಶ್ರೀನಿವಾಸ್, ಎಸ್. ಲಲಿತಾ ಮತ್ತು ಸಿ.ಕೆ.ಹೇಮಲತಾ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾ. ಅಶೋಕ್ ಎಸ್ .ಕಿಣಗಿ ಅವರಿದ್ದ ವಿಭಾಗೀಯಪೀಠ ವಜಾಗೊಳಿಸಿದೆ.
ಅಲ್ಲದೆ, ''ನಿಯಮದಂತೆ ಅರ್ಜಿದಾರರು ಚುನಾವಣೆಯಲ್ಲಿ ಆಯ್ಕೆಯಾದ ಮೇಲೆ 30 ದಿನಗಳಲ್ಲಿ ಖರ್ಚು ವೆಚ್ಚದ ವಿವರವನ್ನು ಸಲ್ಲಿಸಲೇಬೇಕು. ಆದರೆ ಅವರು ಅದನ್ನು ಸಲ್ಲಿಸಿರಲಿಲ್ಲ, ಜೊತೆಗೆ ಸಲ್ಲಿಸದಿರುವುದಕ್ಕೆ ಸೂಕ್ತ ಮತ್ತು ಸಮರ್ಥವಾದ ಕಾರಣವನ್ನೂ ನೀಡುವಲ್ಲಿಯೂ ವಿಫಲರಾಗಿದ್ದಾರೆ. ಹಾಗಾಗಿ ಏಕಸದಸ್ಯಪೀಠದ ಆದೇಶ ಊರ್ಜಿತವಾಗಲಿದೆ, ನಾಲ್ವರು ಸದಸ್ಯರನ್ನು ಅನರ್ಹಗೊಳಿಸಿ ಚುನಾವಣಾ ಆಯೋಗ ಹೊರಡಿಸಿರುವ ಆದೇಶ ಸರಿಯಾಗಿಯೇ ಇದೆ'' ಎಂದು ನ್ಯಾಯಪೀಠ ಆದೇಶಿಸಿದೆ.

ಏಕಸದಸ್ಯಪೀಠದ ಆದೇಶವೇನು?: ಕೆ.ಶ್ರೀನಿವಾಸ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ.ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ 2022ರ ಏ.13ರಂದು 'ಚುನಾವಣಾ ವೆಚ್ಚ ನಿಯಂತ್ರಣ ಭ್ರಷ್ಟಾಚಾರ ನಿಯಂತ್ರಣ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ. ಆ ಹಿನ್ನೆಲೆಯಲ್ಲಿ ಚುನಾವಣಾ ವೆಚ್ಚದ ವಿವರಗಳನ್ನು ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ರೂಪಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಒಂದು ವೇಳೆ ಚುನಾವಣಾ ಖರ್ಚು ವೆಚ್ಚದ ವಿವರಗಳನ್ನು ಸಲ್ಲಿಸದಿದ್ದರೆ ಕಾಯಿದೆಯ ಉದ್ದೇಶವೇ ಸಫಲವಾಗುವುದಿಲ್ಲ. ಚುನಾವಣೆಯನ್ನು ಶುದ್ಧತೆ ಮತ್ತು ಪ್ರಾಮಾಣಿಕತೆಯನ್ನು ಕಾಯ್ದುಕೊಳ್ಳಲು ಮತ್ತು ಸಾರ್ವಜನಿಕ ವಿಶ್ವಾಸವನ್ನು ಉಳಿಸಿಕೊಳ್ಳಲು ಇದು ಅತ್ಯಗತ್ಯ' ಎಂದು ಹೇಳಿತ್ತು.
ಅಲ್ಲದೆ, ''ನಿಗದಿತ ಕಾಲಮಿತಿಯಲ್ಲಿ ಚುನಾವಣಾ ಖರ್ಚು ವೆಚ್ಚ ಸಲ್ಲಿಸದೆ ಜನಪ್ರತಿನಿಧಿಗಳು ನೀಡುವ ಕಾರಣಗಳನ್ನು ಒಪ್ಪಲಾಗದು. ಮತದಾರರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಬ್ಯುಸಿಯಾಗಿರುವ ಅವರಿಗೆ ಚುನಾವಣಾ ಖರ್ಚಿನ ವಿವರ ಸಲ್ಲಿಸಬೇಕೆಂಬ ಕಾನೂನಿನ ಹೆಚ್ಚಿನ ಅರಿವಿಲ್ಲವೆಂದರೆ, ಅದು ಸಾಕಷ್ಟು ದುರುಪಯೋಗಕ್ಕೆ ಕಾರಣವಾಗಿ, ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತದೆ'' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

''ಕಾನೂನಿನ ಬಗ್ಗೆ ಅರಿವಿಲ್ಲ ಎನ್ನುವುದು ಕಾರಣವಲ್ಲ. ತುಂಬಾ ವರ್ಷಗಳಿಂದ ಈ ನಿಯಮದ ಬಗ್ಗೆ ಬಹುತೇಕರಿಗೆ ತಿಳಿದಿದೆ. ಸಾರ್ವಜನಿಕ ಕಚೇರಿಗಳಲ್ಲಿ ವಿಶ್ವಾಸವನ್ನು ಉಳಿಸಿಕೊಳ್ಳಬೇಕಾದ ಅವರು ಹಾಗೆ ನಡೆದುಕೊಳ್ಳುವುದನ್ನು ಮತ್ತು ಆ ಕುರಿತ ಅವರ ವಾದವನ್ನು ಒಪ್ಪಲಾಗದು'' ಎಂದು ನ್ಯಾಯಪೀಠ ಹೇಳಿದೆ.
''ಅರ್ಜಿದಾರರು ಚುನಾವಣಾ ಖರ್ಚು ವೆಚ್ಚದ ವಿವರಗಳನ್ನು ಸಲ್ಲಿಸದಿರುವುದಕ್ಕೆ ತಾವು ಜನಪ್ರತಿನಿಧಿಗಳ ಕುಂದು ಕೊರತೆ ಬಗೆಹರಿಸುವುದರಲ್ಲಿ ಒತ್ತಡದಲ್ಲಿದ್ದೆವು, ಹಾಗಾಗಿ ಸಲ್ಲಿಸಿಲ್ಲ ಎಂಬ ಅವರ ವಾದವನ್ನು ಪುರಸ್ಕರಿಸಲಾಗದು. ಅಂತಹ ನಿಯಮ ಪಾಲನೆ ಮಾಡದಿರುವುದಕ್ಕೆ ಯಾವುದೇ ವಿನಾಯ್ತಿ ನೀಡಲಾಗದು, ಹಗುರವಾಗಿ ಪರಿಗಣಿಸಲಾಗದು" ಎಂದು ನ್ಯಾಯಪೀಠ ತಿಳಿಸಿತ್ತು.
Recommended Video
ಪ್ರಕರಣದ ಹಿನ್ನೆಲೆ: ಬೆಂಗಳೂರು ನಗರ ಜಿಲ್ಲೆಯ ಅನೇಕಲ್ ಪುರಸಭೆಯ ಮೂವರು ಸದಸ್ಯರಾಗಿದ್ದ ಕೆ.ಶ್ರೀನಿವಾಸ್, ಎಸ್. ಲಲಿತಾ ಮತ್ತು ಸಿ.ಕೆ.ಹೇಮಲತಾ ಅವರು ಕರ್ನಾಟಕ ಮುನಿಸಿಪಾಲಿಟಿಸ್ ಕಾಯಿದೆ 1986ರ ಸೆಕ್ಷನ್ 16 ಸಿ ಪ್ರಕಾರ ಚುನಾವಣಾ ಫಲಿತಾಂಶ ಘೋಷಣೆಯಾದ ದಿನದಂದ 30 ದಿನಗಳಲ್ಲಿ ಖರ್ಚು ವೆಚ್ಚವನ್ನು ಪಾವತಿಸಿರಲಿಲ್ಲ. ಹಾಗಾಗಿ ರಾಜ್ಯ ಚುನಾವಣಾ ಆಯೋಗ ಅವರನ್ನು 2021ರ ನ.15ರಂದು ಅನರ್ಹಗೊಳಿಸಿತ್ತು. ಅದನ್ನು ಪ್ರಶ್ನಿಸಿ ಅವರು ಏಕಸದಸ್ಯಪೀಠದ ಮುಂದೆ ಅರ್ಜಿ ಸಲ್ಲಿಸಿದ್ದರು. ಏಕಸದಸ್ಯಪೀಠವು ಇವರ ಅರ್ಜಿ ಮಾನ್ಯ ಮಾಡಲಿಲ್ಲ, ಹಾಗಾಗಿ ವಿಭಾಗೀಯಪೀಠದ ಮೊರೆ ಹೋಗಿದ್ದರು. ಅದೂ ಕೂಡ ಅವರ ನೆರವಿಗೆ ಧಾವಿಸಿಲ್ಲ. ಹೀಗಾಗಿ ಆ ಸದಸ್ಯರ ಅರ್ನಹತೆ ಬಹುತೇಕ ಕಾಯಂ ಆಗಿದೆ.












Click it and Unblock the Notifications