ಜೀವನಾಂಶ ಪ್ರಕರಣ ತ್ವರಿತ ಇತ್ಯರ್ಥಕ್ಕೆ ಹೈಕೋರ್ಟ್ ಮಾರ್ಗಸೂಚಿ
ಹಿಂದೂ ವಿವಾಹ ಕಾಯಿದೆಯಡಿಯಲ್ಲಿ ಪತಿಯಿಂದ ವಿಚ್ಛೇದಿತ ಮಹಿಳೆಯರು ಜೀವನಾಂಶ ಕೋರಿ ಸಲ್ಲಿಸುವ ಅರ್ಜಿಗಳನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಬೆಂಗಳೂರು, ಫೆಬ್ರವರಿ 11: ಹಿಂದೂ ವಿವಾಹ ಕಾಯಿದೆಯಡಿಯಲ್ಲಿ ಪತಿಯಿಂದ ವಿಚ್ಛೇದಿತ ಮಹಿಳೆಯರು ಜೀವನಾಂಶ ಕೋರಿ ಸಲ್ಲಿಸುವ ಅರ್ಜಿಗಳನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್, ವಿಚಾರಣಾ ನ್ಯಾಯಾಲಯಗಳಿಗೆ ಮಾರ್ಗಸೂಚಿ ಹೊರಡಿಸಿದೆ.
ವಿಚ್ಚೇದಿತ ಮಹಿಳೆಯೊಬ್ಬರು ಜೀವನಾಂಶ ಕೋರಿ ಸಲ್ಲಿಸಿರುವ ಅರ್ಜಿ ವಿಳಂಬ ಮಾಡುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಅದೇಶ ಮಾಡಿದೆ. ಅಲ್ಲದೆ, ಈ ಪ್ರಕರಣದಲ್ಲಿ ಈವರೆಗೂ ನೀಡಲಾಗುತ್ತಿದ್ದ 15 ಸಾವಿರ ರೂಪಾಯಿಗಳ ಮಾಸಿಕ ಜೀವನಾಂಶವನ್ನು 50 ಸಾವಿರ ರೂಪಾಯಿಗಳಿಗೆ ಹೆಚ್ಚಳ ಮಾಡಿದೆ.
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ಜೀವನಾಂಶ ಕೋರಿ ಸಲ್ಲಿಸುವ ಅರ್ಜಿಗಳನ್ನು 60 ದಿನಗಳಲ್ಲಿ ವಿಲೇವಾರಿ ಮಾಡಬೇಕು ಎಂಬ ನಿಯಮವಿದ್ದರೂ, ಬಹುತೇಕ ಪ್ರಕರಣಗಳಲ್ಲಿ ನಾಲ್ಕು ವರ್ಷಗಳ ಕಾಲ ಅರ್ಜಿ ವಿಲೇವಾರಿಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದೆ.

ಅಲ್ಲದೆ, ಜೀವನಾಂಶ ಕೋರಿ ಸಲ್ಲಿಸುವ ಅರ್ಜಿಗಳ ವಿಚಾರಣೆಗಳ ಪರಿಗಣಿಸುವಲ್ಲಿ ವಿಳಂಬ ಮಾಡಿದಲ್ಲಿ ವಿಚ್ಛೇದಿತ ಮಹಿಳೆಗೆ ಇರುವ ಅವಕಾಶವನ್ನು ವಂಚಿಸಿದಂತಾಗಲಿದೆ. ಅಲ್ಲದೆ, ಜೀವನಾಂಶ ಪಡೆಯುವ ಹಕ್ಕು ಕೇವಲ ಭ್ರಮೆ ಆಗಲಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅನೇಕ ಕಾರಣಗಳಿಂದ ಪತ್ನಿ ಪತಿಯ ಮನೆಯನ್ನು ತೊರೆಯುತ್ತಾಳೆ. ಅಂತಹ ಸಂದರ್ಭದಲ್ಲಿ ಭೀತಿಗೆ ಒಳಗಾಗುವುದನ್ನು ತಪ್ಪಿಸುವುದು ಮತ್ತು ತೊಂದರೆಗೆ ಸಿಲುಕದಂತೆ ಮಾಡುವುದಕ್ಕಾಗಿ ಕಾಲಮಿತಿಯಲ್ಲಿ ಪರಿಹಾರ ಸಿಗುವಂತೆ ಮಾಡಬೇಕು. ಗಂಡನಿಂದ ನಿರ್ಧಿಷ್ಟ ಮೊತ್ತದ ಜೀವನಾಂಶ ಪಡೆಯಲು ಹೆಂಡತಿ ವರ್ಷಾನುಗಟ್ಟಲೆ ಕಾಯುವಂತೆ ಮಾಡಬಾರದು. ಹೀಗಾಗಿ ವಿಚಾರಣಾ ನ್ಯಾಯಾಲಯಗಳು ಕಾಲಮಿತಿಗೆ ಬದ್ಧವಾಗಿರಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.
ಅರ್ಜಿ ಸಲ್ಲಿಸಿದ ತಕ್ಷಣ ಇ-ಮೇಲ್, ವಾಟ್ಸ್‌ಆಪ್ ಸೇರಿದಂತೆ ಕಾನೂನು ಪ್ರಕಾರ ಇರುವ ಅವಕಾಶಗಳಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಬೇಕು. ಜೀವನಾಂಶ ಕೋರಿ ಸಲ್ಲಿಸುವ ಅರ್ಜಿಗೆ ಸಂಬಂಧಿಸಿದಂತೆ ಎರಡು ತಿಂಗಳೊಳಗಾಗಿ ಆಕ್ಷೇಪಣೆ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಪತ್ನಿಯ ಆಸ್ತಿಗಳ ಕುರಿತಂತೆ ಮಾಹಿತಿ ನೀಡಲು ಎರಡು ತಿಂಗಳ ಕಾಲಾವಕಾಶ ನೀಡಬೇಕು. ಅರ್ಜಿದಾರರ ಆಸ್ತಿಗಳು ಮತ್ತು ಹೋಣೆಗಾರಿಕೆಗಳ ಸಂಬಂಧ ನಾಲ್ಕು ತಿಂಗಳೊಳಗೆ ಕಕ್ಷಿದಾರರ ವಾದವನ್ನು ಆಲಿಸಿ ವಿಚಾರಣೆ ಪೂರ್ಣಗೊಳಿಸಿ ಆದೇಶ ಹೊರಡಿಸಬೇಕು. ಮಧ್ಯಂತ ಅರ್ಜಿಗಳನ್ನು ಸಲ್ಲಿಕೆ ಮಾಡಿದ ಆರು ತಿಂಗಳಲ್ಲಿ ನಿರ್ಧಾರ ಕೈಗೊಳ್ಳಬೇಕು. ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಅನಗತ್ಯವಾಗಿ ಮುಂದೂಡುವ ಪ್ರಕ್ರಿಯೆಗಳನ್ನು ಕೈ ಬಿಡಬೇಕು. ಜೀವನಾಂಶ ಕೋರಿ ಸಲ್ಲಿಸುವ ಅರ್ಜಿಗಳನ್ನು ಆರು ತಿಂಗಳಿಗೂ ಹೆಚ್ಚು ವಿಳಂಬವಾದಲ್ಲಿ ಅದಕ್ಕೆ ಸೂಕ್ತ ಕಾರಣಗಳನ್ನು ನೀಡಬೇಕು ಎಂದು ಕೋರ್ಟ್ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.












Click it and Unblock the Notifications