ಪ್ರಧಾನಿ ನರೇಂದ್ರ ಮೋದಿ ರೋಡ್ ಶೋಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋಗೆ ಹೈ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸಾರ್ವಜನಿಕರಿಗೆ ತೊಂದರೆಯಾಗುತ್ತದೆ, ರೋಡ್ ಶೋಗೆ ಅನುಮತಿ ನೀಡಬಾರದು ಎಂದು ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಲಾಗಿತ್ತು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ದೀಕ್ಷಿತ್, ನ್ಯಾ.ವಿಜಯ್ ಕುಮಾರ್ ಅವರಿದ್ದ ಪೀಠ, ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದೆ. ನೀಟ್ ಪರೀಕ್ಷೆಯ ಹಿನ್ನಲೆಯಲ್ಲಿ ಭಾನುವಾರ ಬೆಳಗ್ಗೆ ಒಂಬತ್ತು ಗಂಟೆಯಿಂದ 11.30ರ ವರೆಗೆ ರೋಡ್ ಶೋಗೆ ಅನುಮತಿ ನೀಡಿದೆ.

ಮೇ 6ರಂದು ಶನಿವಾರ ಬೆಳಿಗ್ಗೆ 9 ಗಂಟೆಯಿಂದ 1.30 ಗಂಟೆಯವರೆಗೆ ರೋಡ್ ಶೋ ನಡೆಸಬಹುದು ಎಂದು ಅನುಮತಿ ನೀಡಿದೆ. ಭಾರತದಲ್ಲಿ ಚುನಾವಣೆಗಳನ್ನು ಹಬ್ಬದಂತೆ ಆಚರಿಸಲಾಗುತ್ತಿದೆ. ಮೊದಲನೇ ಚುನಾವಣೆಯಿಂದಲೂ ರ್‍ಯಾಲಿ, ರೋಡ್ ಶೋ ಆಚರಣೆಯಲ್ಲಿದೆ. ಈ ವರ್ಷದಲ್ಲಿ ದೇಶದಲ್ಲಿ 2517 ರೋಡ್ ಶೋಗಳಿಗೆ ಅನುಮತಿ ನೀಡಲಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಇದುವರೆಗೂ ನಡೆದಿರುವ ರೋಡ್ ಶೋ ಸಂದರ್ಭದಲ್ಲಿ ಯಾವುದೇ ದುರ್ಘಟನೆಗಳು ನಡೆದಿಲ್ಲ. ಅಗತ್ಯವಿರುವ ಕಡೆಗಳಲ್ಲಿ ಬಾಂಡ್ ಬರೆಸಿಕೊಳ್ಳಲಾಗುತ್ತಿದೆ. ಆ್ಯಂಬುಲೆನ್ಸ್, ಶಾಲಾ ಬಸ್ ಸುಗಮ ಸಂಚಾರಕ್ಕೆ ಈಗಾಗಲೇ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರು ಹೇಳಿದ್ದಾರೆ. ರ್‍ಯಾಲಿಗಳನ್ನು ನಡೆಸುವುದರಿಂದ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸಬಹುದು ಎಂದು ಹೈಕೋರ್ಟ್ ಹೇಳಿದೆ. ವಕೀಲ ಎನ್.ಪಿ.ಅಮೃತೇಶ್ ಮೋದಿ ರೋಡ್‌ಶೋಗೆ ಅನುಮತಿ ನೀಡದಂತೆ ಪಿಐಎಲ್ ಸಲ್ಲಿಸಿದ್ದರು.
ಮೋದಿ ರೋಡ್ ಶೋ ವಿರುದ್ಧ ಜನರ ಅಸಮಾಧಾನ
ನೀಟ್ ಪರೀಕ್ಷೆಯ ದಿನವೇ ಮೋದಿ ರೋಡ್ ಶೋ ಹಮ್ಮಿಕೊಂಡಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ್ಕೆ ಕಾರಣವಾಗಿದೆ. ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ದವಾಗಿರುವುದರಿಂದ ರೋಡ್ ಶೋ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಗಳಿಗೆ ತೆರಳುವುದು ಹೇಗೆ ಎನ್ನುವಂತಾಗಿತ್ತು.
ಸದ್ಯ ಹೈಕೋರ್ಟ್ ಮೇ 7ರಂದು ಭಾನುವಾರ ಬೆಳಗ್ಗೆ 9 ರಿಂದ 11.30ರ ವರೆಗೆ ಮಾತ್ರ ರೋಡ್ ಶೋಗೆ ಅನುಮತಿ ನೀಡಿರುವುದರಿಂದ ಪರಿಕ್ಷೆ ಬರೆಯುವವರು ನಿಟ್ಟುಸಿರು ಬಿಡುವಂತಾಗಿದೆ. ಈಗಾಗಲೇ ಪೊಲೀಸ್ ಇಲಾಖೆ ಮೋದಿ ರೋಡ್ ಶೋ ಮಾಡುವ ಮಾರ್ಗದ ವಿವರ ನೀಡಿದ್ದು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ಮನವಿ ಮಾಡಿದೆ.












Click it and Unblock the Notifications