ಉನ್ನತ ಸ್ಥಾನದಲ್ಲಿರುವವರಿಗೆ ಮಾತಿನ ಮೇಲೆ ನಿಗಾ ಇರಬೇಕು- ಹೈಕೋರ್ಟ್ ಎಚ್ಚರಿಕೆ
ಬೆಂಗಳೂರು, ನವೆಂಬರ್ 4: ಭಾಷೆ ವಿಚಾರದಲ್ಲಿ ಉನ್ನತ ಸ್ಥಾನದಲ್ಲಿರುವವರು ಮಾತನಾಡುವಾಗ ತುಂಬಾ ಎಚ್ಚರಿಕೆಯಿಂದ ಹಾಗೂ ಇತಿಮಿತಿಯಲ್ಲಿ ಇರಬೇಕು ಎಂದು ಹೈಕೋರ್ಟ್ ತಿಳಿಸಿದೆ.
ಅಲ್ಲದೆ, ಪ್ರಾದೇಶಿಕ ಭಾಷೆ ಮತ್ತು ರಾಜ್ಯ ಭಾಷೆಗಳಲ್ಲಿ ಶಿಕ್ಷಣ ಪಡೆಯುವವರು ಅಸಮರ್ಥರು ಎಂದು ಭಾವಿಸಬಾರದು. ಪ್ರಾದೇಶಿ ಭಾಷೆಯಲ್ಲಿ ಶಿಕ್ಷಣ ಪಡೆದವರೂ ಯಶಸ್ವಿಯಾಗಬಹುದು ಆದರೆ ಈ ಸಮಸ್ಯೆಗಳನ್ನು ಕಾನೂನು ಅಂಶಗಳಲ್ಲಿ ಪರಿಗಣಿಸಬೇಕು ಎಂದು ಸಹ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ ಸಿಬಿಎಸ್ಸಿ ಮತ್ತು ಐಸಿಎಸ್ ಇ ಪಠ್ಯ ಕ್ರಮದಲ್ಲಿ ಕನ್ನಡ ಭಾಷೆ ಬೋಧನೆ ಕಡ್ಡಾಯ ಮಾಡಿರುವ ಕ್ರಮವನ್ನು ಪ್ರಶ್ನಿಸಿ ಎಂಟು ಮಂದಿ ವಿದ್ಯಾರ್ಥಿಗಳ ಪೋಷಕರು ಸಲ್ಲಿಸಿದ ಅರ್ಜಿಯನ್ನಯ ವಿಚಾರಣೆ ನಡೆಸಿತು.
ಈ ವೇಳೆ ಸಿಜೆ ನಾನೂ ಸಹ ಪ್ರಾದೇಶಿಕ ಭಾಷೆಯಲ್ಲಿ ವ್ಯಾಸಂಗ ಮಾಡಿದ್ದೇನೆ. ನನ್ನ ಸಾಧನೆಗೆ ಎಂದಿಗೂ ಭಾಷೆ ಅಡ್ಡಿಯಾಗಲಿಲ್ಲ. ಆದರೂ ನ್ಯಾಯಾಲಯ ಕಾನೂನಿನ ಅಂಶಗಳಡಿಯಲ್ಲಿ ಪರಿಗಣಿಸಿ ಪರಿಹಾರ ಕಂಡುಕೊಳ್ಳಬೇಕು. ಜೊತೆಗೆ, ಈ ರೀತಿಯ ವಿಚಾರಗಳಲ್ಲಿ ಉನ್ನತ ಸ್ಥಾನದಲ್ಲಿರುವವರು ಇತಿಮಿತಿಯಲ್ಲಿ ಮಾತನಾಡಬೇಕು ಎಂದು ಹೇಳಿದರು.
ಅರ್ಜಿದಾರರ ಪರ ವಕೀಲರು, ಅರ್ಜಿದಾರರಾಗಿರುವ ಪೋಷಕರು ತಮ್ಮ ಮಕ್ಕಳು ಯಾರು ಹಾಗೂ ಯಾವ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂಬ ಅಂಶವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದರು. ಜೊತೆಗೆ, ಮಕ್ಕಳಯ ಶಾಲೆಗಳಲ್ಲಿ ಕಿರುಕುಳ ಅನುಭವಿಸುವ ಕೆಲವು ನಿರ್ದೇಶನಗಳಿವೆ. ಅಪ್ರಾಪ್ತ ಮಕ್ಕಳ ನ್ಯಾಯಾಲಯದಲ್ಲಿ ಭಾಗಿಯಾಗುವುದು ಬಯಸುವುದಿಲ್ಲ. ಹೀಗಾಗಿ ಗೌಪತ್ಯೆ ಕಾಪಾಡಬೇಕು ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ವಿವರಿಸಿದರು.
ಮಕ್ಕಳ ಬಗ್ಗೆ ಆತಂಕ ಬೇಡ
ಇತರೆ ರಾಜ್ಯಗಳಲ್ಲಿಯೂ ಇದೇ ರೀತಿಯ ಅರ್ಜಿಗಳು ವಿಚಾರಣೆಗೆ ಬಂದಿವೆ. ಅಂತಹ ಪ್ರಕರಣಗಳಲ್ಲಿ ಮೊದಲು ಪ್ರಶ್ನಿಸಿದ್ದು ಪೋಷಕರಲ್ಲ. ಹೀಗಾಗಿ ಮಕ್ಕಳಿಗೆ ತೊಂದರೆಯಾಗಲಿದೆ ಎಂಬುದು ಪೋಷಕರ ಅಸಮಂಜಸವಾದ ಆತಂಕವಾಗಿದೆ ಎಂದು ಕೋರ್ಟ್ ತಿಳಿಸಿತು. ಇತರೆ ಅರ್ಜಿದಾರರ ವಿವರವನ್ನು ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನಲೆ ಏನು..?
ಕರ್ನಾಟಕ ಭಾಷಾ ಕಲಿಕೆ ಕಾಯಿದೆ 2005ರ ಸೆಕ್ಷನ್ 3ರ ನಿಯಮ 3, ಕರ್ನಾಟಕ ಭಾಷಾ ಕಲಿಕೆ ನಿಯಮಗಳು 2007ರ ನಿಯಮ 6(2), ಕರ್ನಾಟಕ ಶಿಕ್ಷಣ ಸಂಸ್ಥೆಗಳ(ನಿರಾಕ್ಷೇಪಣಾ ಪ್ರಮಾಣ ಪತ್ರದ ವಿತರಣೆ) ನಿಯಂತ್ರಣಾ ನಿಯಮ 6(3) ರ ಪ್ರಕಾರ ಸಿಬಿಎಸ್‌ಸಿ ಮತ್ತು ಐಸಿಎಸ್ಸಿ ಪಠ್ಯ ಕ್ರಮ ಅಳವಡಿಸಿರುವ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸಬೇಕು ಎಂಬುದಿದೆ. ಇದರಿಂದ ಅರ್ಜಿದಾರರ ಮಕ್ಕಳಿಗೆ ಅನಾನುಕೂಲವಾಗಲಿದೆ. ಅಲ್ಲದೆ, ಈ ನಿಯಮಗಳನ್ನು ಜಾರಿ ಮಾಡದ ಶಾಲೆಗಳಿಗೆ ಬೆದರಿಕೆ ಹಾಕಲಾಗುತ್ತಿದೆ. ಜತೆಗೆ, ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆಯುವುದಕ್ಕೆ ತೊಂದರೆಯಾಗುತ್ತಿದೆ ಎಂದು ಅರ್ಜಿಯಲ್ಲಿ ಕೋರಿದ್ದರು.











Click it and Unblock the Notifications