ಎಚ್‌ಎಎಲ್‌ನಿಂದ ಹೆಲಿ ಟ್ಯಾಕ್ಸಿ: ಯೋಜನೆ ಕೈಬಿಟ್ಟ ಥಂಬಿ ಏವಿಯೇಷನ್
ಬೆಂಗಳೂರು, ಜು.19: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಾಗೂ ಎಚ್‌ಎಎಲ್ ನಡುವೆ ಹೆಲಿ ಟ್ಯಾಕ್ಸಿ ಆರಂಭ ಇನ್ನು ಕನಸಿನ ಮಾತು.
ಬೆಂಗಳೂರಿನಲ್ಲಿ ಕಳೆದ ಒಂದು ತಿಂಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಲಿ ಟ್ಯಾಕ್ಸಿ ಸೇವೆಯನ್ನು ಆರಂಭಿಸಲಾಗಿತ್ತು, ಅದಕ್ಕೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆಯೂ ಲಭ್ಯವಾಗಿದೆ. ದಿನದಿಂದ ದಿನಕ್ಕೆ ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ ಏರ್‌ಪೋರ್ಟ್‌ಗೆ ಹೋಗಬೇಕಾದರೆ ಹರಸಾಹಸ ಪಡಬೇಕಾಗಿತ್ತು.
ಆದರೆ ಹೆಲಿ ಟ್ಯಾಕ್ಸಿ ಸೇವೆಯಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಿತ್ತು, ಆ ಮಾರ್ಗದಲ್ಲಿ ಟ್ಯಾಕ್ಸಿ ಆರಂಭಿಸುವ ಸಮಯದಲ್ಲೇ ಎಚ್‌ಎಎಲ್‌ನಿಂದ ಕೆಐಎ ಮಾರ್ಗದಲ್ಲೂ ಹೆಲಿ ಟ್ಯಾಕ್ಸಿ ಆರಂಭಿಸುವ ಕುರಿತು ಎಚ್‌ಎಎಲ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಎಚ್‌ಎಎಲ್ ಕೂಡ ಅದಕ್ಕೆ ಸಮ್ಮತಿ ನೀಡಿತ್ತು. ಆದರೆ ಒಂದು ತಿಂಗಳು ಕಳೆದರೂ ಈ ಕುರಿತು ಪ್ರತಿಕ್ರಿಯೆ ಬಾರದಿರುವ ಹಿನ್ನೆಲೆಯಲ್ಲಿ ಥಂಬಿ ಏವಿಯೇಷನ್ ಸಂಸ್ಥೆಯು ಆ ಮಾರ್ಗದಲ್ಲಿ ಹೆಲಿ ಟ್ಯಾಕ್ಸಿ ಆರಂಭಿಸುವುದು ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.

ಎಚ್‌ಎಎಲ್‌ನಿಂದ ಯಾರೂ ಕೂಡ ಮುಂಗಡವಾಗಿ ಟಿಕೆಟ್ ಬುಕಿಂಗ್ ಮಾಡುವ ಹಾಗೆ ಕಾಣಿಸುತ್ತಿಲ್ಲ, ಒಂದು ಟ್ರಿಪ್‌ನಲ್ಲಿ ಆರು ಜನರನ್ನು ಕೊಂಡೊಯ್ಯಬಹುದು ಆದರೆ ಬೇಡಿಕೆ ಇಲ್ಲ ಎಂದಾದಲ್ಲಿ ಹೆಲಿ ಟ್ಯಾಕ್ಸಿ ಓಡಿಸಿ ಪ್ರಯೋಜನವಿಲ್ಲ ಎಂದು ಥಂಬಿ ಏವಿಯೇಷನ್‌ನ ಸಂಸ್ಥಾಪಕ ಕೆಎನ್‌ಜಿ ನಾಯರ್ ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್‌ಸಿಟಿಯಿಂದ ಕೆಂಪೇಗೌಡ ನಿಲ್ದಾಣದ ಮಧ್ಯೆ ಎರಡು ಹೆಲಿಟ್ಯಾಕ್ಸಿಗಳು ಓಡಾಡುತ್ತಿವೆ, ಸಾಕಷ್ಟು ಬೇಡಿಕೆಯಿದೆ ಅಲ್ಲಿ ಮುಂದುವರೆಸುತ್ತೇವೆ ಎಂದು ತಿಳಿಸಿದ್ದಾರೆ, ಎಚ್‌ಎಎಲ್ ಅಧಿಕಾರಿಗಳು ಹೇಳುವ ಪ್ರಕಾರ ಹೆಲಿ ಟ್ಯಾಕ್ಸಿ ಸೇವೆಯನ್ನು ಆರಂಭಿಸುವ ಮುನ್ನ ಸಿವಿಲ್ ಏವಿಯೇಷನ್‌ನ ವ್ಯವಸ್ಥಾಪಕ ನಿರ್ದೇಶಕರಿಂದ ಸಮ್ಮತಿ ಪಡೆದುಕೊಳ್ಳಬೇಕು, ಅದರೊಂದಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರಾಪೇಕ್ಷಣಾ ಪತ್ರ ಪಡೆಯಬೇಕಿದೆ ಎಂದು ಹೇಳಿದ್ದಾರೆ.












Click it and Unblock the Notifications