Hebbal Junction: ಹೆಬ್ಬಾಳ ಜಂಕ್ಷನ್ ಉದ್ಘಾಟನೆ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟ ಡಿ ಕೆ ಶಿವಕುಮಾರ್
ಬೆಂಗಳೂರು, ಜುಲೈ 30: ಹೆಬ್ಬಾಳ ಮೇಲ್ಸೆತುವೆ ಜಂಕ್ಷನ್, ಶಿವಾನಂದ ಸರ್ಕಲ್ ಜಂಕ್ಷನ್ ಅಭಿವೃದ್ಧಿ ಹಾಗೂ ಗಾಂಧಿ ಬಜಾರ್ ಬಳಿಯ ಬಹುಮಹಡಿ ಪಾರ್ಕಿಂಗ್ ಕಟ್ಟಡವನ್ನು ಆಗಸ್ಟ್ 15 ರ ಒಳಗಾಗಿ ಉದ್ಘಾಟನೆ ಮಾಡಬೇಕು ಎಂಬುದು ನಮ್ಮ ಆಲೋಚನೆ. ಕೆ.ಆರ್.ಪುರಂ ಕಡೆಯಿಂದ ಬರುವ ಹೆಬ್ಬಾಳ ಮೇಲ್ಸೆತುವೆ ಕಾಮಗಾರಿಯನ್ನು ಶೀಘ್ರದಲ್ಲೇ ಮುಗಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕು ಎಂಬುದು ನಮ್ಮ ಆಲೋಚನೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬೆಂಗಳೂರಲ್ಲಿ 24 ಲಕ್ಷ 'ಎ' ಮತ್ತು 'ಬಿ' ಖಾತೆಗಳಿವೆ. ಈಗಾಗಲೇ 6.5 ಲಕ್ಷ ಇ- ಖಾತೆಗಳನ್ನು ಜನರು ತೆಗೆದುಕೊಂಡಿದ್ದಾರೆ. ಜನರಿಗೆ ಆನ್ ಲೈನ್ ನಲ್ಲಿ ಆಸ್ತಿ ವಿವರಗಳು ನಿಖರವಾಗಿ ದೊರೆಯಬೇಕು. ಮುಂದಿನ ದಿನಗಳಲ್ಲಿ ತೊಂದರೆಯಾಗಬಾರದು ಎಂಬುದು ನಮ್ಮ ಆಲೋಚನೆ. ಈ ಕಾರಣಕ್ಕೆ ಅಕ್ಟೋಬರ್ 22 ರಿಂದ ನವೆಂಬರ್ 1 ರವರೆಗೆ ಬೃಹತ್ ಜಾಗೃತಿ ಅಭಿಯಾನದ ಆಲೋಚನೆ ಮಾಡಲಾಗಿದೆ ಎಂದರು.

ಈ ಅಭಿಯಾನ ಯಶಸ್ವಿಗೊಳಿಸಲು ಶಿಕ್ಷಕರು, ಬೆಸ್ಕಾಂ ಬಿಲ್ ಕಲೆಕ್ಟರ್ ಗಳು, ಪಾಲಿಕೆಯ ನೌಕರರ ಭಾಗವಹಿಸುವಿಕೆ ಬಗ್ಗೆ ಚರ್ಚಿಸಲು ಸೂಚನೆ ನೀಡಿದ್ದೇನೆ. ಈ ಬಗ್ಗೆ ಮನೆ ಮನೆಗೆ ತೆರಳಿ ತಿಳುವಳಿಕೆ ನೀಡಲಾಗುವುದು. ಸಾರ್ವಜನಿಕರು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಈ ಅಭಿಯಾನದ ಪ್ರಚಾರದಲ್ಲಿ ಭಾಗವಹಿಸಬಹುದು. ಆದರೆ ಇವರಿಗೆ ಜವಾಬ್ದಾರಿ ನೀಡುವುದಿಲ್ಲ ಎಂದರು. ಆಗಸ್ಟ್ 15 ರಿಂದ ಬಿ ಖಾತೆಯಿಂದ ಎ ಖಾತೆ ಪಡೆಯಲು ಅನುಸರಿಸಬೇಕಾದ ಮಾನದಂಡಗಳನ್ನು ಬಿಡುಗಡೆ ಮಾಡಲಾಗುವುದು. ಯಾರಿಗೆ ಅರ್ಜಿ ಹಾಕಲು ಅರ್ಹತೆಯಿದೆ, ಯಾವ ರೀತಿ ಅರ್ಜಿ ಹಾಕಬೇಕು ಎನ್ನುವ ವಿವರಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಜಿಬಿಎ ಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ವಿಧಾನ ಪರಿಷತ್ತಿನಲ್ಲಿ ಒಪ್ಪಿಕೊಂಡಿದ್ದಾರೆ. ಸದನದಿಂದ ಹೊರನಡೆದರು ಎಂದರೆ ಒಪ್ಪಿದಂತೆ ಅಲ್ಲವೇ? ರಾಜಕೀಯವಾಗಿ ದನಿ ಎತ್ತಲಿಲ್ಲ ಎಂದರೆ ತಪ್ಪಾಗುತ್ತದೆ ಎಂದು ಅವರು ಹೀಗೆ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಸಿಎಂ, ಡಿಸಿಎಂ ವಾರಕ್ಕೊಮ್ಮೆ ದೆಹಲಿಗೆ ಹೋದರೆ ಆಡಳಿತ ನಡೆಸುವವರು ಯಾರು ಎನ್ನುವ ವಿಜಯೇಂದ್ರ ಅವರ ಟೀಕೆಯ ಕುರಿತು ಮಾತನಾಡಿ, ರಾಯಭಾರಿಗಳನ್ನು ಭೇಟಿ ಮಾಡಲು ನಾವು ಮತ್ತೆ ಜುಲೈ 31 ರಂದು ದಿಲ್ಲಿಗೆ ತೆರಳುತ್ತಿದ್ದೇವೆ. ಆಗಸ್ಟ್ 2 ರಂದು ಅಲ್ಲಿನ ವಿಜ್ಞಾನ ಭವನದಲ್ಲಿ ಸಂವಿಧಾನ ರಕ್ಷಣೆ ಸವಾಲುಗಳು ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆ. ನಾವು ಬೇರೆ ಯಾವುದೋ ವಿಚಾರಕ್ಕೆ ಹೋಗುತ್ತಿಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ಡಿಸಿಎಂ ಅವರನ್ನು ಬಿಟ್ಟು ಶಾಸಕರ ಸಭೆ ನಡೆಸುತ್ತಿರುವ ಕುರಿತು ಮಾತನಾಡಿ, ವಿರೋಧ ಪಕ್ಷಗಳು ನನ್ನ ಬಗ್ಗೆ ಇಷ್ಟಾದರೂ ಕಾಳಜಿ ಇಟ್ಟುಕೊಂಡಿದ್ದಾರಲ್ಲ, ಬಹಳ ಸಂತೋಷ ಎಂದು ತಿವಿದರು.
ರಾಹುಲ್ ಗಾಂಧಿಯವರು ರಾಜ್ಯಕ್ಕೆ ಭೇಟಿ ನೀಡುವ ಬಗ್ಗೆ ಚರ್ಚೆಯಿದೆ. ಅಧಿಕಾರಿಗಳ ಬಳಿ ಚರ್ಚೆ ನಡೆಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಚರ್ಚೆ ನಡೆಸಿದ ನಂತರ ತಿಳಿಸುತ್ತೇನೆ ಎಂದರು.
ನಟಿ ರಮ್ಯ ಅವರ ವಿರುದ್ಧ ಅವಹೇಳನ ಮಾಡಲಾಗುತ್ತಿದೆ. ರಮ್ಯ ಅವರ ಬೆಂಬಲಕ್ಕೆ ನಟ ಶಿವರಾಜ್ ಕುಮಾರ್, ಮಹಿಳಾ ಕಾಂಗ್ರೆಸ್ ಬೆಂಬಲ ನೀಡಿರುವ ಬಗ್ಗೆ ಕೇಳಿದಾಗ, "ನಮ್ಮ ಪಕ್ಷದವರು ಯಾರಿಗೆ ಬೆಂಬಲ ಕೊಡುತ್ತಾ ಇರುತ್ತಾರೋ ಅವರಿಗೆ ನಾವು ಕೂಡ ಬೆಂಬಲ ನೀಡುತ್ತೇವೆ. ಗೃಹಮಂತ್ರಿಯವರು ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತಾರೆ ಎಂದರು.












Click it and Unblock the Notifications